ಹೆಚ್ಚಿನ ನೀರವ್ ಮೋದಿ ವಂಚನೆಗಳು ನಡೆದಿದ್ದು 2017-18ರಲ್ಲಿ: ಸಿಬಿಐ!
ನವದೆಹಲಿ, ಫೆಬ್ರವರಿ 19: ಜ್ಯುವೆಲ್ಲರಿ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಎಸಗಿ ದೇಶ ಬಿಟ್ಟು ಹೋಗುತ್ತಿದ್ದಂತೆ ಕೇಂದ್ರ ಸರಕಾರ ಈ ಹಗರಣ ಯುಪಿಎ ಕಾಲದಲ್ಲಿ ನಡೆದಿದ್ದು ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸುತ್ತಿದೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ ಹೆಚ್ಚಿನ ನೀರವ್ ಮೋದಿ ವಂಚನೆಗಳು ನಡೆದಿದ್ದೆಲ್ಲಾ 2017-18ರಲ್ಲೇ ಎಂದು ಸಿಬಿಐ ತನ್ನ ದೂರಿನಲ್ಲಿ ದಾಖಲಿಸಿಕೊಂಡಿದೆ.
11,400 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಹೆಚ್ಚಿನ 'ಲೆಟರ್ ಆಫ್ ಅಂಡರ್ ಸ್ಟ್ಯಾಂಡಿಂಗ್' (LoUs) ನ್ನು 2017-18ರಲ್ಲೇ ನೀಡಲಾಗಿತ್ತು ಎಂದು ಸಿಬಿಐ ಹೇಳಿದೆ. ಅಥವಾ ಈ ಹಿಂದೆ ನೀಡಲಾದ ಎಲ್ಒಯು ಗಳನ್ನು ಈ ವರ್ಷ ನವೀಕರಣ ಮಾಡಲಾಗಿದೆ ಎಂದು ಸ್ಪಷ್ಟವಾಗಿ ದಾಖಲಿಸಿದೆ.

ಗುರುವಾರ ಸಿಬಿಐ ನೀರವ್ ಮೋದಿ ಮಾವ ಮೆಹುಲ್ ಚೋಕ್ಸಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದೆ. ಮೆಹುಲ್ ಚೋಕ್ಸಿ ಮತ್ತು ಅವರ ಮೂರು ಕಂಪನಿಗಳು ಪಿಎನ್ ಬಿ ಬ್ಯಾಂಕಿಗೆ 2017-18ರಲ್ಲಿ 4,886.72 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಿಸಿಕೊಂಡಿದೆ. 143 ಲೆಟರ್ ಆಫ್ ಅಂಡರ್ ಸ್ಟ್ಯಾಂಡಿಂಗ್ ಪಡೆದು ಈ ವಂಚನೆ ಎಸಗಲಾಗಿದೆ.
ಹಳೆಯ ಎಲ್ಒಯುಗಳನ್ನು ಮತ್ತೆ 2017ರಲ್ಲಿ ನವೀಕರಣಗೊಳಿಸಿ ಸಾಲ ಪಡೆಯಲಾಗಿದೆ ಎಂದು ಎಫ್ಐಆರ್ ನಲ್ಲಿ ಸಿಬಿಐ ಸ್ಪಷ್ಟವಾಗಿ ಹೇಳಿದೆ.
ಹಗರಣದ ಪ್ರಮುಖ ಆರೋಪಿಗಳಾದ ಗೋಕುಲ್ ನಾಥ್ ಶೆಟ್ಟಿ ಮತ್ತು ಮನೋಜ್ ಖಾರಟ್ ನೀರವ್ ಮೋದಿ ಮತ್ತು ಚೋಕ್ಸಿ ಕಂಪನಿಗಳಿಗೆ ಎಲ್ಒಯು ಗಳನ್ನು ನೀಡಿ ಅವುಗಳನ್ನು ಕೋರ್ ಬ್ಯಾಂಕಿಂಗ್ ಸಿಸ್ಟಂನಲ್ಲಿ ದಾಖಲು ಮಾಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಎಲ್ಒಯು ಗಳನ್ನು ನೀಡಿದ್ದು ಗೊತ್ತಾಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಇವುಗಳ ಮೇಲೆ ಆರೋಪಿಗಳು ಸಾಲವನ್ನು ಪಡೆಯುತ್ತಿದ್ದರು. ವಿದೇಶಗಳಿಂದ ಆಮದು ಮಾಡಿಕೊಂಡ ವಸ್ತುಗಳಿಗೆ ಪಾವತಿ ಮಾಡಲು ಸಾಲ ತೆಗೆಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಆಮದು ಮಾಡಿಕೊಂಡ ವಸ್ತುಗಳ ಬೆಲೆಯನ್ನು ವಿಪರೀತ ಹೆಚ್ಚು ದಾಖಲಿಸುತ್ತಿದ್ದರು. ಈ ಮೂಲಕ ನಕಲಿ ಎಲ್ಒಯು ಜತೆಗೆ ನಕಲಿ ಬಿಲ್ ತೋರಿಸಿ ಹಣ ಪಡೆಯುತ್ತಿದ್ದರು.
ಆರ್.ಬಿ.ಐ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಜ್ಯುವೆಲ್ಲರಿ ಮತ್ತು ವಜ್ರದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಎಲ್ಒಯುಗಳನ್ನು ನೀಡುವಾಗ ಕೇವಲ 90 ದಿನಕ್ಕೆ ಮಾತ್ರ ನೀಡಬೇಕು. ಆದರೆ ಪಿಎನ್ ಬಿ ಅಧಿಕಾರಿಗಳು ಆರು ತಿಂಗಳು ಒಂದು ವರ್ಷಕ್ಕೆಲ್ಲಾ ಎಲ್ಒಯುಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications