ಉಗ್ರರ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು, ಹುತಾತ್ಮ ಯೋಧರಿಗೆ ನಮನ
ಶ್ರೀನಗರ: ಪೂಂಚ್ ಜಿಲ್ಲೆಯ ರಜೌರಿ ಸೆಕ್ಟರ್‌ನಲ್ಲಿ ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆಸಿ, ಐವರು ಯೋಧರನ್ನು ಉಗ್ರರು ಬಲಿಪಡೆದ ನಂತರ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹುತಾತ್ಮ ಯೋಧರಿಗೆ ನಮಿಸಲು ರಂಜಾನ್ ಹಬ್ಬವನ್ನೇ ಜನ ಮರೆತಿದ್ದರು. ಇದೀಗ ಯೋಧರ ಮೇಲೆ ದಾಳಿ ನಡೆದ ಭಾಗದಲ್ಲಿ ಯೋಧರಿಗೆ ಕ್ಯಾಂಡಲ್ ಮಾರ್ಚ್ ಮೂಲಕ ನಮಿಸಲಾಗಿದೆ.
ಹೌದು ಕಣಿವೆ ರಾಜ್ಯದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆದ ನಂತರ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿದೆ. ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದೆಂಬ ಆತಂಕ ಮನೆಮಾಡಿದೆ. ಅದರಲ್ಲೂ ಯೋಧರನ್ನು ಬಲಿಪಡೆದ ಉಗ್ರರು ಅಲ್ಲೇ ಅಡಗಿರುವ ಆತಂಕ ಕಾಡುತ್ತಿದೆ. ಇಷ್ಟೆಲ್ಲದರ ನಡುವೆ ಸ್ಥಳೀಯ ವರ್ತಕರ ಸಂಘ ಮತ್ತು ಸ್ಥಳೀಯ ನಿವಾಸಿಗಳು ಕ್ಯಾಂಡಲ್ ಬೆಳಗಿ ಹುತಾತ್ಮ ಯೋಧರಿಗೆ ನಮಿಸಿದ್ದಾರೆ.

ದಟ್ಟ ಅರಣ್ಯದಲ್ಲಿ ಉಗ್ರರ ಬಿಡಾರ?
ಭಾರತೀಯ ಸೇನಾ ವಾಹನದ ಮೇಲೆ ದಾಳಿ ಮಾಡಿ 5 ಯೋಧರ ಸಾವಿಗೆ ಕಾರಣವಾಗಿರುವ ಉಗ್ರರು ಪಾಕಿಸ್ತಾನಿ ನೆಲದವರು ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ದಾಳಿ ನಡೆಸಿದ ಬಳಿಕ ಸುತ್ತಮುತ್ತಲ ದಟ್ಟ ಅರಣ್ಯದಲ್ಲಿ ಉಗ್ರರು ಅಡಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕಾಡಿನ ಮೂಲೆ ಮೂಲೆಯಲ್ಲೂ ಹುಡುಕಾಟ ನಡೆಯುತ್ತಿದೆ. ಡ್ರೋನ್ ಸೇರಿದಂತೆ ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉಗ್ರರ ಬೇಟೆಗೆ ಬಲೆ ಹೆಣೆಯಲಾಗಿದೆ. ಈ ನಡುವೆ ಸ್ಥಳೀಯರು ಕೂಡ ಉಗ್ರರ ಕೃತ್ಯದ ವಿರುದ್ಧ ಆಕ್ರೋಶ ಹೊರಹಾಕಿ ದೇಶಪ್ರೇಮ ಮೆರೆದಿದ್ದಾರೆ.
ಅಮೆರಿಕದ ಬುಲೆಟ್ ಉಗ್ರರ ಕೈಗೆ?
ಲಷ್ಕರ್-ಎ-ತೈಬಾ ಇಲ್ಲ ಜೈಷ್-ಎ-ಮೊಹಮದ್ ಉಗ್ರ ಸಂಘಟನೆಗಳು ಈ ದಾಳಿ ನಡೆಸಿದೆ ಎನ್ನಲಾಗಿದೆ. ಉಗ್ರರ ಕೈಗೆ ಅಮೆರಿಕದ ಬುಲೆಟ್‌ಗಳು ಸಿಕ್ಕಿದ್ದು ಹೇಗೆ ಎಂಬ ತನಿಖೆ ನಡೆಯುತ್ತಿದೆ. ಮೂಲಗಳ ಪ್ರಕಾರ ಅಫ್ಘಾನಿಸ್ತಾನ ಬಿಟ್ಟು ಹೋಗುವಾಗ ಅಮೆರಿಕ ಸೇನಾ ಪಡೆ ಉಳಿಸಿದ್ದ ಬುಲೆಟ್‌ಗಳು ಪಾಪಿ ಪಾಕಿಸ್ತಾನದ ಉಗ್ರರ ಕೈಗೆ ಸಿಕ್ಕಿವೆ ಎನ್ನಲಾಗುತ್ತಿದೆ. ತಾಲಿಬಾನಿಗಳ ಪಾಲಾಗಿರುವ ಅಮೆರಿಕದ ಗುಂಡುಗಳು ಹಾಗೂ ಶಸ್ತ್ರಾಸ್ತ್ರ ಇದೀಗ ಪಾಕಿಸ್ತಾನಿ ಉಗ್ರರನ್ನು ತಲುಪಿವೆ ಎಂಬ ಮಾಹಿತಿ ಸಂಚಲನ ಸೃಷ್ಟಿಸಿದೆ. ಮತ್ತೊಂದು ಕಡೆ ಉಗ್ರರು ದಟ್ಟ ಅರಣ್ಯದ ಮೂಲಕ ತಪ್ಪಿಸಿಕೊಂಡು ಹೋಗಿರುವ ಅನುಮಾನ ಮೂಡಿದೆ.
ಪುಲ್ವಾಮಾ ದಾಳಿಯ ಭೀಕರತೆ
4 ವರ್ಷಗಳ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿ ಕೂಡ ಉಗ್ರರ ಇಂತಹದ್ದೇ ಭೀಕರ ಕೃತ್ಯಗಳಿಗೆ ಸಾಕ್ಷಿಯಾಗಿತ್ತು. ಫೆಬ್ರವರಿ 14, 2019ರಂದು ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆದ ಪರಿಣಾಮ 40 ಯೋಧರು ಹುತಾತ್ಮರಾಗಿದ್ದರು. ಜೊತೆಗೆ ಪದೇಪದೆ ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆಯನ್ನೇ ಗುರಿಯಾಗಿಸಿಕೊಂಡು ಉಗ್ರರು ಅಟ್ಯಾಕ್ ಮಾಡುತ್ತಿದ್ಧಾರೆ. ಇಫ್ತಿಯಾರ್ ಕೂಟಕ್ಕಾಗಿ ಹಣ್ಣು ತರಲು ಹೋಗಿದ್ದ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು ಪಾಪಿ ಉಗ್ರರು. ಈ ಘಟನೆ ಬಳಿಕ ಸ್ಥಳೀಯ ಜನರು ರಂಜಾನ್ ಹಬ್ಬವನ್ನೇ ಆಚರಿಸದೆ ಯೋಧರನ್ನು ಸ್ಮರಿಸಿದ್ದರು.

ಉಗ್ರರ ಹೆಣ ಬೀಳುವುದು ಪಕ್ಕಾ!
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ಹೆಣ ಬೀಳಿಸಲು ಸೇನೆ ಪಣತೊಟ್ಟಿದೆ. ಈ ಬಗ್ಗೆ ನಿನ್ನೆಯಷ್ಟೇ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಉಗ್ರರಿಗೆ ಖಡಕ್ ಸಂದೇಶ ರವಾನಿಸಿದ್ದರು. ಸೇನಾ ವಾಹನಕ್ಕೆ ಬೆಂಕಿ ಬಿದ್ದಾಗ ಜೀವ ಉಳಿಸಿಕೊಂಡು, ಚಿಕಿತ್ಸೆ ಪಡೆಯುತ್ತಿರುವ ಯೋಧನ ಯೋಗಕ್ಷೇಮ ವಿಚಾರಿಸಿ ಮಾಹಿತಿ ಪಡೆದ ನಂತರ ಎಚ್ಚರಿಕೆ ನೀಡಿದ್ದರು ಲೆಫ್ಟಿನೆಂಟ್ ಜನರಲ್. ಮತ್ತೊಂದು ಕಡೆ ಶಂಕಿತ ಉಗ್ರರ ವಿಚಾರಣೆ ಹಾಗೂ ಬಂಧನ ಕಾರ್ಯ ಕೂಡ ಭರದಿಂದ ಸಾಗಿದೆ.












Click it and Unblock the Notifications