ಬೈ ಒನ್ ಗೆಟ್ ಒನ್ ಫ್ರೀ ಆಮಿಷ: ಮಹಿಳೆಗೆ 90,000 ರೂ. ಪಂಗನಾಮ
ನವದೆಹಲಿ, ಮೇ 27: ನೈಋತ್ಯ ದೆಹಲಿಯ 40 ವರ್ಷದ ಮಹಿಳೆಯೊಬ್ಬರು ಒಂದು ಥಾಲಿ ಖರೀದಿಸಿ, ಇನ್ನೊಂದು ಉಚಿತ ಆಫರ್‌ನಿಂದ ಆಮಿಷಕ್ಕೆ ಒಳಗಾಗಿ ಸೈಬರ್ ವಂಚಕರು ಕೇಳಿದಂತೆ ಆ್ಯಪ್ ಡೌನ್‌ಲೋಡ್ ಮಾಡಿ 90,000 ರೂಪಾಯಿ ಕಳೆದುಕೊಂಡಿದ್ದಾರೆ.
ತನಗೆ ಮೋಸ ಮಾಡಿರುವ ಬಗ್ಗೆ ದೂರುದಾರರಾದ ಸವಿತಾ ಶರ್ಮಾ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಬ್ಯಾಂಕ್‌ನಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಶರ್ಮಾ, ಆಕೆಯ ಸಂಬಂಧಿಯೊಬ್ಬರು ಫೇಸ್‌ಬುಕ್‌ನಲ್ಲಿ ಆಫರ್ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಸವಿತಾ ಶರ್ಮಾ ಅವರು ಈ ವರ್ಷ ಮೇ 2 ರಂದು ದಾಖಲಿಸಿದ ಎಫ್‌ಐಆರ್‌ನಲ್ಲಿ, ನವೆಂಬರ್ 27, 2022 ರಂದು ಸೈಟ್‌ಗೆ ಭೇಟಿ ನೀಡಿದ್ದರು. ಫ್ರೀ ಆಫರ್ ಬಗ್ಗೆ ವಿಚಾರಣೆ ಮಾಡಲು ನೀಡಿದ ಸಂಖ್ಯೆಗೆ ಕರೆ ಮಾಡಿದರು. ಮೊದಲು ಆಕೆಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಮತ್ತೆ ಆ ಕಡೆಯಿಂದ ಕರೆ ಬಂದಿತು. ಕರೆ ಮಾಡಿದವರು ಸಾಗರ ರತ್ನ (ಜನಪ್ರಿಯ ರೆಸ್ಟೋರೆಂಟ್ ಸರಪಳಿ) ಕೊಡುಗೆಯನ್ನು ಪಡೆಯಲು ಕೇಳಿಕೊಂಡರು ಎಂದು ತಿಳಿಸಿದ್ದಾರೆ.
"ಕರೆ ಮಾಡಿದವರು ವಂಚಕರು ಒಂದು ಲಿಂಕ್ ಅನ್ನು ಶೇರ್ ಮಾಡಿ ಆಫರ್ ಅನ್ನು ಪಡೆಯಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ನನ್ನನ್ನು ತಿಳಿಸಿದರು. ಆ್ಯಪ್ ಅನ್ನು ಪ್ರವೇಶಿಸಲು ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಸಹ ಕಳುಹಿಸಿದರು. ನಾನು ಆಫರ್ ಪಡೆಯಲು ಬಯಸಿದರೆ ನಾನು ಮೊದಲು ಈ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ನನಗೆ ಹೇಳಿದರು.
ಬಳಿಕ ನಾನು ಲಿಂಕ್ ಅನ್ನು ಕ್ಲಿಕ್ ಮಾಡಿದ್ದೇನೆ ಮತ್ತು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡೆ. ನಂತರ ನಾನು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿದೆ. ನಾನು ಅದನ್ನು ಮಾಡಿದ ಕ್ಷಣ, ನನ್ನ ಫೋನ್‌ನ ನಿಯಂತ್ರಣವನ್ನು ಕಳೆದುಕೊಂಡೆ. ಅದನ್ನು ಹ್ಯಾಕ್ ಮಾಡಲಾಯಿತು. ನಂತರ ನನ್ನ ಖಾತೆಯಿಂದ ರೂ 40,000 ಡೆಬಿಟ್ ಆಗಿದೆ ಎಂಬ ಸಂದೇಶ ಬಂದಿತು ಎಂದು ಘಟನೆಯನ್ನು ವಿವರಿಸಿದರು.

ಕೆಲವು ಸೆಕೆಂಡುಗಳ ನಂತರ ತನ್ನ ಖಾತೆಯಿಂದ 50,000 ರೂಪಾಯಿ ರಿಸೀವ್ ಮಾಡಲಾಗಿದೆ ಎಂಬ ಮತ್ತೊಂದು ಸಂದೇಶ ಬಂದಿತು. ನನ್ನ ಕ್ರೆಡಿಟ್ ಕಾರ್ಡ್‌ನಿಂದ ನನ್ನ ಪೇಟಿಎಂ ಖಾತೆಗೆ ಹಣ ಹೋಯಿತು ಮತ್ತು ನಂತರ ವಂಚಕನ ಖಾತೆಗೆ ಸ್ಥಳಾಂತರಗೊಂಡಿರುವುದು ನನಗೆ ತುಂಬಾ ಗಾಬರಿಯಾಯಿತು. ನಾನು ಈ ಯಾವುದೇ ವಿವರಗಳನ್ನು ಕರೆ ಮಾಡಿದವರೊಂದಿಗೆ ಎಂದಿಗೂ ಹಂಚಿಕೊಂಡಿರಲಿಲ್ಲ. ಆಗ ತಕ್ಷಣ ತನ್ನ ಕ್ರೆಡಿಟ್ ಕಾರ್ಡ್ ಅವರು ಬಂದ್ ಮಾಡಿಸಿದರು.
ಸೈಬರ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದರೂ, ಜನರು ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿರುವ ಇತರ ನಗರಗಳಿಂದ ಇದೇ ರೀತಿಯ ವಂಚನೆ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಹೊಟೇಲ್ ಸಾಗರ ರತ್ನದ ಪ್ರತಿನಿಧಿಯನ್ನು ಸಂಪರ್ಕಿಸಿದಾಗ ಗ್ರಾಹಕರಿಂದ ಇಂತಹ ಹಲವು ದೂರುಗಳು ಬಂದಿವೆ ಎಂದು ಅವರು ತಿಳಿಸಿದರು.
"ನಮ್ಮ ರೆಸ್ಟೋರೆಂಟ್ ಹೆಸರಿನಲ್ಲಿ ಲಾಭದಾಯಕ ಕೊಡುಗೆಗಳನ್ನು ಜಾಹೀರಾತು ಮಾಡುವವರಿಂದ ವಂಚನೆಗೊಳಗಾಗಿದ್ದಾರೆ ಎಂದು ಜನರು ದೂರಿರುವ ಅನೇಕ ಕರೆಗಳನ್ನು ನಾವು ಸ್ವೀಕರಿಸಿದ್ದೇವೆ. ನಾವು ಫೇಸ್‌ಬುಕ್ ಮೂಲಕ ಜನರಿಗೆ ಎಂದಿಗೂ ಕೊಡುಗೆಗಳನ್ನು ನೀಡುವುದಿಲ್ಲವಾದ್ದರಿಂದ ಅಂತಹ ಯಾವುದೇ ಲಾಭದಾಯಕ ಒಪ್ಪಂದದ ಬಗ್ಗೆ ಜಾಗರೂಕರಾಗಿರಿ ಎಂದು ನಾವು ಜನರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಪ್ರತಿನಿಧಿ ಹೇಳಿದರು, ಇತರ ನಗರಗಳಲ್ಲಿನ ಸೈಬರ್ ಪೊಲೀಸರು ಕೂಡ ಇದೇ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ.
ಇಂತಹ ವಂಚನೆ ಆಫರ್‌ಗಳ ವೆಬ್ ಲಿಂಕ್ ಈಗಲೂ ವಾಟ್ಸ್‌ಆ್ಯಪ್ ಮೂಲಕ ಜನರಲ್ಲಿ ಹರಿದಾಡುತ್ತಿದ್ದು, ಸಮಯೋಚಿತ ಕ್ರಮ ಕೈಗೊಳ್ಳದಿದ್ದಲ್ಲಿ ಇನ್ನೂ ಹಲವರು ಇದಕ್ಕೆ ಬಲಿಯಾಗಬಹುದು ಎಂದು ಸವಿತಾ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.












Click it and Unblock the Notifications