ಸಂಪಾದಕೀಯ: ಷೇರುಪೇಟೆಯಲ್ಲಿ ಊಹಾಪೋಹದ ವಹಿವಾಟಿಗೆ ತೆರಿಗೆ ಕಡಿವಾಣ, ಯಥಾಸ್ಥಿತಿ ಕಾಯ್ದುಕೊಂಡ ಸಮತೋಲಿತ ಬಜೆಟ್

ಸಂಪಾದಕೀಯ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಕ್ತಾಯವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಷೇರುಪೇಟೆ ಕುಸಿತದ ಬಗ್ಗೆಯೇ ಹಲವರು ಚರ್ಚಿಸುತ್ತಿದ್ದಾರೆ. ಬಗೆಬಗೆಯಾಗಿ ಟ್ರೋಲ್ ಮಾಡಲಾಗುತ್ತಿದೆ. ಷೇರುಪೇಟೆ ಕುಸಿತ ಬದಿಗಿಟ್ಟು ಬಜೆಟ್‌ನಲ್ಲಿ ಏನಿದೆ, ಏನಿಲ್ಲ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಹಲವು ಆಶೋತ್ತರಗಳ ನಡುವೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಜಾಣತನ ಅರಿವಿಗೆ ಬರುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರದ ಎರಡನೇ ಬಜೆಟ್ ಇದು ಎನ್ನುವುದನ್ನು ಗಮನದಲ್ಲಿರಿಸಿಕೊಂಡೇ ಅಂಕಿಅಂಶಗಳನ್ನು ವಿಶ್ಲೇಷಿಸಬೇಕು.

ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆಗಳಿಗೆ ಈ ವರ್ಷ ಚುನಾವಣೆ ನಡೆಯಲಿದೆ. ಕೇಂದ್ರದ ಅನುದಾನ, ಘೋಷಣೆಗಳು, ಯೋಜನೆಗಳು ರೂಪುಗೊಳ್ಳುವ ಸಂದರ್ಭಗಳಲ್ಲಿ ಈ ರಾಜ್ಯಗಳನ್ನು ಅಧಿಕಾರಸ್ಥರು ಗಮನದಲ್ಲಿರಿಸಿಕೊಳ್ಳುತ್ತಾರೆ. ಈ ಬಾರಿಯ ಬಜೆಟ್ ಕೂಡ ಇದಕ್ಕೆ ಅಪವಾದವಲ್ಲ. ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಬಗ್ಗೆ ಹಣಕಾಸು ಸಚಿವರು ಮಾತನಾಡಿದಾಗ ಅದರಲ್ಲಿ ಅಸ್ಸಾಂ ಇತ್ತು, ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಚೆನ್ನೈ ಇದೆ, ಅಮೂಲ್ಯ ಖನಿಜಗಳ ಯೋಜನೆಯ ಪ್ರಸ್ತಾಪದಲ್ಲಿ ಕೇರಳದ ಹಿತಾಸಕ್ತಿ ಇಣುಕುತ್ತದೆ. ವೇಗದ ಸರಕು ಸಾಗಣೆ ರೈಲು ಯೋಜನೆಯ ಪ್ರಸ್ತಾವದಲ್ಲಿ ಪಶ್ಚಿಮ ಬಂಗಾಳದ ಓಲೈಕೆ ಕಾಣಿಸುತ್ತದೆ.

Budget 2025 Editorial

ಆರೋಗ್ಯ, ಮೂಲ ಸೌಕರ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಹಲವು ಮುಖ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಘೋಷಣೆಗಳಾಗಲಿ, ಯೋಜನೆಗಳಾಗಲೀ ಇಲ್ಲ. ಆದಾಯ ತೆರಿಗೆ ವಿಚಾರದ ಪ್ರಸ್ತಾವವನ್ನೇ ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ ಮಾಡಿಲ್ಲ. ಹೈ ಸ್ಪೀಡ್ ರೈಲ್ ಕಾರಿಡಾರ್‌ ಹೊರತುಪಡಿಸಿದರೆ ಬೆಂಗಳೂರಿನ ಹೆಸರು, ಟರ್ಟಲ್ ಟ್ರೇಲ್ ಹೊರತುಪಡಿಸಿದರೆ ಕರ್ನಾಟಕದ ಹೆಸರು ಬಜೆಟ್ ಭಾಷಣದಲ್ಲಿ ಇಲ್ಲ.

ಇದನ್ನೂ ಓದಿ: ಐಟಿ ರಿಟರ್ನ್ ಮಾಡಲು ಮಾರ್ಚ್ 31ರ ವರೆಗೆ ಅವಕಾಶ

ನೀರಸ ಬಜೆಟ್, ದೂರದೃಷ್ಟಿ ಇಲ್ಲದ ಬಜೆಟ್‌ ಎಂದೆಲ್ಲಾ ವಿರೋಧ ಪಕ್ಷಗಳು ಟೀಕಿಸುತ್ತಿವೆ. ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಿದ ಸಮರ್ಥ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಆಯ್ಕೆಗಳೇ ಇರಲಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಆದರೆ ವಾಸ್ತವವೇನು?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇಂದಿನ ಜಾಗತಿಕ ವಿದ್ಯಮಾನಗಳನ್ನು ಹಿನ್ನೆಲೆಯಾಗಿರಿಸಿಕೊಳ್ಳಬೇಕು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಬೆದರಿಕೆಯ ನೆರಳಿನಲ್ಲಿ ಭಾರತವು ಐರೋಪ್ಯ ಒಕ್ಕೂಟದ ನಡುವೆ ಈಗಷ್ಟೇ ಒಪ್ಪಂದ ಮಾಡಿಕೊಂಡು ಮಾರುಕಟ್ಟೆಯನ್ನು ಯೂರೋಪ್ ದೇಶಗಳಿಗೆ ತೆರೆದಿಟ್ಟಿದೆ. ಮಿಲಿಟರಿ ಸೂಪರ್ ಪವರ್ ರಷ್ಯಾ ಭಾರತದ ಪಾಲಿಗೆ ಬಹುಕಾಲದ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ. ಇಂಧನ ಮತ್ತು ಪಾಕಿಸ್ತಾನವನ್ನು ಯೋಜಿತ ಕಾರ್ಯತಂತ್ರಗಳಿಂದ ಮಣಿಸುವ ನಿಟ್ಟಿನಲ್ಲಿ ಭಾರತ ನೆಚ್ಚಿಕೊಂಡಿದ್ದ ಮತ್ತೊಂದು ಪ್ರಮುಖ ದೇಶ ಇರಾನ್. ಈ ಹೊತ್ತಿಗೆ ರಷ್ಯಾ ಮತ್ತು ಇರಾನ್ ಎರಡೂ ದೇಶಗಳು ಬಸವಳಿದಿವೆ. ಅಭಿವೃದ್ಧಿಯ ವೇಗದಲ್ಲಿ ಯಾವ ಬೆದರಿಕೆಗೂ ಬಗ್ಗದೆ ಮುನ್ನುಗ್ಗುತ್ತಿರುವ ಚೀನಾ ಇಂದಿಗೂ ಭಾರತದ ಪಾಲಿಗೆ ಮಗ್ಗುಲಮುಳ್ಳು. ಯಾವಾಗ ಏನಾಗುತ್ತದೋ? 3ನೇ ಮಹಾಯುದ್ಧವೇ ಆಗಿಹೋದರೆ ಭಾರತ ಏನು ಮಾಡಬೇಕು? ಹೇಗೆ ವರ್ತಿಸಬೇಕು ಎನ್ನುವ ಪ್ರಶ್ನೆಗಳ ಎದುರಿನಲ್ಲಿ ಮಂಡನೆಯಾದ ಬಜೆಟ್ ಇದು.

ಕಳೆದ ವರ್ಷಕ್ಕೆ ಹೋಲಿಸಿದರೆ ರಕ್ಷಣಾ ಕ್ಷೇತ್ರದ ಅನುದಾನ 40 ಸಾವಿರ ಕೋಟಿಗಳಷ್ಟು ಹೆಚ್ಚಾಗಿದೆ. ಇದರಲ್ಲಿ ಗುಪ್ತಚರ ಇಲಾಖೆಗೆ (ಇಂಟೆಲಿಜೆನ್ಸ್‌ ಬ್ಯೂರೋ) 6,782 ಕೋಟಿ ರೂ ಮೀಸಲಿಟ್ಟಿರುವುದನ್ನು ಗಮನಿಸಬೇಕು. ಇದು ಭಾರತದ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತ ಎನಿಸಿಕೊಂಡಿದೆ. ನೌಕರರ ವೆಚ್ಚಕ್ಕಿಂತಲೂ ಗುಪ್ತಚರ ಇಲಾಖೆಯ ಮೂಲ ಸೌಕರ್ಯ ಅಭಿವೃದ್ಧಿಗೆ 2,549 ಕೋಟಿ ರೂ ನಿಗದಿ ಮಾಡಿರುವುದನ್ನು ನಾವು ಗಮನಿಸಬೇಕು. ಈ ಮೊತ್ತವನ್ನು ಅತ್ಯಾಧುನಿಕ ಸರ್ವೇಕ್ಷಣೆ, ದತ್ತಾಂಶ ವಿಶ್ಲೇಷಣೆ, ಸೈಬರ್ ನಿಗಾವಣೆ ಮತ್ತು ಸದಾ ನಿಗಾ ಇರಿಸುವ (ರಿಯಲ್ ಟೈಮ್) ಉಪಕರಣಗಳನ್ನು ಮೇಲ್ದರ್ಜೆಗೇರಿಸಲು ಬಳಸಲು ಉದ್ದೇಶಿಸಲಾಗಿದೆ. ರಕ್ಷಣಾ ವಿಚಾರದಲ್ಲಿ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೌಕಾಪಡೆಯ ಆಧುನೀಕರಣ ಮತ್ತು ಏಕೀಕೃತ ಕಮಾಂಡ್ ಬಗ್ಗೆ ಮಹತ್ವದ ಘೋಷಣೆ ಹೊರಬೀಳಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ಎರಡೂ ವಿಚಾರಗಳ ಬಗ್ಗೆ ಬಜೆಟ್ ಭಾಷಣದಲ್ಲಿ ಮೌನವಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ ಬೆನ್ನಲ್ಲೇ ಷೇರುಮಾರುಕಟ್ಟೆ ಮಹಾ ಕುಸಿತ

ಫ್ಯೂಚರ್ ಅಂಡ್ ಆಫ್ಷನ್ಸ್‌ ವಿಭಾಗದ ವಹಿವಾಟಿನ ಮೇಲಿದ್ದ ಎಸ್‌ಟಿಟಿ (ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್) ತೆರಿಗೆ ಹೆಚ್ಚಿಸುವ ಬಗ್ಗೆ ಸರ್ಕಾರ ತಳೆದ ಕಟುನಿಲುವನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ ಪಡೆಗಳು ವಿರೋಧಿಸಿವೆ. ಅದರೆ ಸಮಾಜದ ಹಿತದೃಷ್ಟಿಯಿಂದ ಹಣಕಾಸು ಸಚಿವರ ಈ ನಿಲುವು ಸ್ವಾಗತಾರ್ಹ. ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ವರ್ಷಗಟ್ಟಲೆ ಕಾದು ಲಾಭ ಮಾಡುವುದು ಬೇರೆ. ಅವತ್ತು ಬೆಳಿಗ್ಗೆ ಖರೀದಿಸಿ ಸಂಜೆಗೆ ಮಾರುತ್ತೇವೆಂದು ಜೂಜಾಡುವುದು ಬೇರೆ. ಕೊರೊನಾ ನಂತರ ಒಂದೆ ಸಲಕ್ಕೆ ಹೆಚ್ಚಾದ ಡಿಮ್ಯಾಟ್ ಖಾತೆಗಳಲ್ಲಿ ಬಹುತೇಕರು ಹೀಗೆ ಕೈಸುಟ್ಟುಕೊಂಡು ಮಾರುಕಟ್ಟೆ ಎಂದರೆ ದುಸ್ವಪ್ನ ಎಂದು ಬೆಚ್ಚಿಬೀಳುವವರೇ ಆಗಿದ್ದಾರೆ. ದೀರ್ಘಾವಧಿಗೆ ಹೂಡಿಕೆದಾರರ ಹಿತ ಕಾಪಾಡಲು ಹಾಗೂ ಮಾರುಕಟ್ಟೆಯನ್ನು ಸಬಲವಾಗಿ ಬೆಳೆಸಲು ಇಂಥ ಕಠಿಣ ನಿರ್ಧಾರದ ಅಗತ್ಯವಿತ್ತು.

ಇದರ ಜೊತೆಗೆ ಚಿನ್ನ-ಬೆಳ್ಳಿ ಬಗ್ಗೆಯೂ ಬಜೆಟ್ ಭಾಷಣದಲ್ಲಿ ಯಾವುದೇ ಪ್ರಸ್ತಾವವಿಲ್ಲ. ಆಮದು ಸುಂಕ ಕಡಿಮೆ ಮಾಡುವುದು, ಆಭರಣಗಳ ಖರೀದಿಗೆ ಪಾನ್ ನಂಬರ್ ನಮೂದಿಸುವುದರಿಂದ ರಿಯಾಯ್ತಿ, ಆಭರಣಗಳ ಸಾಲದ ಲಭ್ಯತೆಯನ್ನು ಸುಲಭಗೊಳಿಸುವುದು ಸೇರಿದಂತೆ ಹಲವು ನಿರೀಕ್ಷೆಗಳಿದ್ದವು. ಆದರೆ ಹಲವು ವಿಷಯಗಳಲ್ಲಿ ತಳೆದಂತೆ ಇಲ್ಲಿಯೂ ವಿತ್ತ ಸಚಿವರು ಮೌನದ ನಿಲುವನ್ನೇ ತಳೆದಿದ್ದಾರೆ. ಬಹುಶಃ ಡಾಲರ್‌ ಎದುರು ರೂಪಾಯಿ ಮೌಲ್ಯ ಸಂರಕ್ಷಿಸುವ ಹೊಣೆಗಾರಿಕೆಯನ್ನು ಬಿಟ್ಟುಕೊಟ್ಟಂತೆ ಚಿನ್ನ-ಬೆಳ್ಳಿಯ ವಿಚಾರವನ್ನೂ ಸರ್ಕಾರ ಮಾರುಕಟ್ಟೆ ಮರ್ಜಿಗೆ ಬಿಟ್ಟುಕೊಟ್ಟಿದೆ. ಗಡಿಗಳಿಲ್ಲದ ಜಾಗತಿಕ ಹಳ್ಳಿಯಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚೇನೂ ಆಯ್ಕೆಗಳೂ ಇದ್ದಂತೆ ಕಾಣಿಸುವುದಿಲ್ಲ. ಈ ಎಲ್ಲ ಅಂಶಗಳನ್ನೂ ಹಿನ್ನೆಲೆಯಾಗಿಟ್ಟುಕೊಂಡು ಬಜೆಟ್ ಭಾಷಣವನ್ನು ಅವಲೋಕಿಸಿದರೆ ಸಾಲುಗಳ ನಡುವೆ ಹೊಸ ಅರ್ಥಗಳು ಹೊಳೆದಾವು.

ಇದನ್ನೂ ಓದಿ: ಭಾರತದ ಎರಡನೇ - ಮೂರನೇ ಹಂತದ ನಗರಗಳ ಅಭಿವೃದ್ಧಿಗೆ 1000 ಕೋಟಿ ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+