Budget 2025: ಸರಕು ಮತ್ತು ಪ್ರಯಾಣಿಕ ಸಂಚಾರಕ್ಕೆ ಒಂದೇ ರೈಲು, ಹೊಸ ಯೋಜನೆ
ನವದೆಹಲಿ, ಜನವರಿ 22: ಕೇಂದ್ರ ಬಜೆಟ್ 2025-26ರ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಫೆಬ್ರವರಿ 1ರ ಶನಿವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ಸೇರಿರುವುದರಿಂದ ಯಾವ-ಯಾವ ಹೊಸ ಘೋಷಣೆಯಾಗಲಿದೆ, ರೈಲ್ವೆ ಇಲಾಖೆಗೆ ಎಷ್ಟು ಅನುದಾನ ದೊರೆಯಲಿದೆ? ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ರೈಲ್ವೆ ಇಲಾಖೆ ಸರಕು ಮತ್ತು ಪ್ರಯಾಣಿಕರ ಸಂಚಾರಕ್ಕೆ ಒಂದೇ ರೈಲು ಪರಿಚಯಿಸುವ ಚಿಂತನೆಯಲ್ಲಿದೆ. ಈ ಯೋಜನೆಯ ಬಜೆಟ್ ಭಾಷಣದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಪ್ರಧಾನಮಂತ್ರಿಗಳ ಕಾರ್ಯಾಲಯವೇ ಈ ಯೋಜನೆ ರೂಪಿಸಿದೆ. ಯೋಜನೆ ಬಗ್ಗೆ ಕಾರ್ಯಾಲಯವೇ ಇಲಾಖೆಗೆ ಸೂಚನೆಗಳನ್ನು ನೀಡುತ್ತಿದೆ.

2024ರಲ್ಲಿ ರೈಲ್ವೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಲಾಖೆ ಅಧಿಕಾರಿಗಳ ಜೊತೆ ಈ ಕುರಿತು ಚರ್ಚಿಸಿದ್ದಾರೆ. ಆದ್ದರಿಂದ ಬಜೆಟ್‌ನಲ್ಲಿ ಯೋಜನೆಗೆ ಅನುದಾನವನ್ನು ಮೀಸಲಿಟ್ಟು, ಯೋಜನೆ ಘೋಷಣೆ ಮಾಡುವ ನಿರೀಕ್ಷೆ ಇದೆ. ರೈಲ್ವೆ ಇಲಾಖೆಯ ಆದಾಯವನ್ನು ಹೆಚ್ಚಿಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಹೇಗಿರಲಿದೆ ರೈಲು ಸೇವೆ?; ಒಂದೇ ರೈಲಿನಲ್ಲಿ ಸರಕು ಸಾಗಣೆ, ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಮಾಹಿತಿಗಳ ಅನ್ವಯ ಡಬಲ್ ಡೆಕ್ಕರ್ ಮಾದರಿ ರೈಲುಗಳನ್ನು ಇಂತಹ ಸೇವೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಕೆಳಮಹಡಿಯಲ್ಲಿ ಸರಕು ಸಾಗಣೆ, ಮೇಲೆ ಪ್ರಯಾಣಿಕರು ಸಂಚಾರ ನಡೆಸುವಂತೆ ಬೋಗಿಗಳು ಇರಲಿವೆ.
ಇಂತಹ ರೈಲುಗಳ ಬೋಗಿ ವಿನ್ಯಾಸವನ್ನು ಅಂತಿಮಗೊಳಿಸಲಾಗುತ್ತದೆ. ಪ್ರಾಯೋಗಿಕವಾಗಿ ಕೆಲವು ಮಾರ್ಗದಲ್ಲಿ ಈ ಮಾದರಿ ರೈಲುಗಳನ್ನು ಪರಿಚಯಿಸಿ, ಜನರ ಪ್ರತಿಕ್ರಿಯೆ ನೋಡಿಕೊಂಡು ದೇಶಾದ್ಯಂತ ವಿಸ್ತರಣೆ ಮಾಡಲು ಇಲಾಖೆ ಮುಂದಾಗಿದೆ.
ಚಿಕ್ಕಪುಟ್ಟ ಸರಕು ಸಾಗಣೆ, ಬೆಳೆಯುತ್ತಿರುವ ಇ-ಕಾಮರ್ಸ್ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ಸೆಳೆಯುವಂತೆ ಈ ಮಾದರಿ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಇ-ಕಾಮರ್ಸ್ ವಲಯ ಸದ್ಯ ರಸ್ತೆ ಸಾರಿಗೆ ಸರಕು ಸಾಗಣೆ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದರ ಆದಾಯವನ್ನು ರೈಲ್ವೆ ಇಲಾಖೆಗೆ ಬರುವಂತೆ ಮಾಡುವುದು ಯೋಜನೆಯ ಗುರಿಯಾಗಿದೆ.
ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಸಂಗ್ರಹಣೆ ಮಾಡಲು ಅನುಕೂಲವಾಗುವಂತೆ ಹಲವಾರು ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರ ಭಾಗವಾಗಿಯೇ ಸರಕು ಸಾಗಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 2030ರ ವೇಳೆಗೆ 3 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ.
ಸದ್ಯ ಭಾರತೀಯ ರೈಲ್ವೆಯ ಸರಕು ಸಾಗಣೆಯಲ್ಲಿ ಶೇ 60ರಷ್ಟು ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ಸೇರಿದೆ. ಬೇರೆ ಸರಕುಗಳ ಸಾಗಣೆ ರೈಲುಗಳ ಮೂಲಕ ಮಾಡಬೇಕು ಎಂಬ ಬೇಡಿಕೆಯೂ ಹೆಚ್ಚಾಗುತ್ತಿದೆ. ಆದ್ದರಿಂದ ಬೇಡಿಕೆಗೆ ಅನುಗುಣವಾಗಿ ಸರಕು ಸಾಗಣೆ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಇಲಾಖೆ ಯೋಜನೆ ರೂಪಿಸಿದೆ.
ಬಜೆಟ್‌ನಲ್ಲಿ ಸರಕು ಸಾಗಣೆ ಮೂಲಕ ಆದಾಯಗಳಿಸುವ ಗುರಿಯನ್ನು ಸಹ ಇಲಾಖೆಗೆ ಹೆಚ್ಚಿಸಲಾಗಿದೆ. 2023-24ನೇ ಸಾಲಿನಲ್ಲಿ 2023ರ ಬಜೆಟ್‌ನಲ್ಲಿ ನೀಡಿದ್ದ ಗುರಿಯನ್ನು ತಲುಪಿಲ್ಲ. ಸರಕು ಮತ್ತು ಪ್ರಯಾಣಿಕರು ಒಂದೇ ರೈಲಿನಲ್ಲಿ ಸಂಚಾರ ನಡೆಸುವ ಮಾದರಿ ಬೋಗಿ ತಯಾರಿಕೆಗೆ 4 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ಕಪುರ್ತಲ ಜಿಲ್ಲೆಯಲ್ಲಿರುವ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ಈ ಮಾದರಿ ರೈಲು ಬೋಗಿ ತಯಾರಾಗುತ್ತಿದೆ.












Click it and Unblock the Notifications