Nirmala Sitharaman Saree: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಸೀರೆಗಳ ಸುತ್ತ ಒಂದು ಸುತ್ತು!
ನವದೆಹಲಿ, ಜುಲೈ. 23: ಆರ್ಥಿಕ ಸಮೀಕ್ಷೆಯ ಮಂಡನೆ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ. 23) ಕೇಂದ್ರ ಬಜೆಟ್ 2024-25 ಅನ್ನು ಮಂಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದೆ. ಇದೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸೀರೆ ಕಡೆ ಎಲ್ಲರ ಗಮನವಿದೆ.
ಭಾರತದ ನೇಕಾರರು ಕೈಯಿಂದ ನೇಯ್ದ ಸೀರೆಗಳಲ್ಲಿ ಕಂಗೊಳಿಸುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸೀರೆಗಳ ಬಗ್ಗೆ ಜನರಿಗೆ ವಿಶೇಷ ಆಸಕ್ತಿಯಿದೆ. ಪ್ರತಿ ಬಜೆಟ್ ಮಂಡನೆಯ ವೇಳೆಯಲ್ಲಿಯೂ ಕೂಡ ದೇಶದ ಹಲವು ವಿಭಿನ್ನ ಪ್ರದೇಶಗಳ ಸೀರೆಯಲ್ಲಿ ಬರುವ ಅವರ ಬಗ್ಗೆ ಮೆಚ್ಚುಗೆ ಇದೆ. ಇದೇ ಕಾರಣಕ್ಕೆ ಸಂಪ್ರದಾಯ ಮತ್ತು ವೈಯಕ್ತಿಕ ಶೈಲಿ ಎರಡನ್ನೂ ಪ್ರತಿಬಿಂಬಿಸುವ ಸೀರೆ ಆಯ್ಕೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಪ್ರತಿ ವರ್ಷ, ಬಜೆಟ್ ಅಧಿವೇಶನಗಳ ಸಮಯದಲ್ಲಿ ಆಕೆಯ ಉಡುಗೆಯು ಹೈಲೈಟ್ ಆಗುತ್ತದೆ.

ಸೀರೆ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
2019 ರಲ್ಲಿ ಅವರ ಚೊಚ್ಚಲ ಬಜೆಟ್ ಮಂಡನೆಯಿಂದ ಇತ್ತೀಚಿನ ಬಜೆಟ್ ಮಂಡನೆವರೆಗೂ ನಿರ್ಮಲಾ ಸೀತಾರಾಮನ್ ಅವರು ಧರಿಸಿರುವ ಸೀರೆಗಳು ಆಧುನಿಕ ಟಚ್‌ನೊಂದಿಗೆ ಸಾಂಸ್ಕೃತಿಕ ಪರಂಪರೆಯನ್ನು ಸೊಗಸಾಗಿ ಮಿಕ್ಸ್ ಮಾಡಿರುತ್ತದೆ. ಕೇಂದ್ರ ಬಜೆಟ್ 2024-25 ಗಾಗಿ ನಿರ್ಮಲಾ ಸೀತಾರಾಮನ್ ಅವರು ಬಿಳಿ ಮತ್ತು ನೇರಳೆ ಬಣ್ಣದ ಸೀರೆ ತೊಟ್ಟಿದ್ದಾರೆ.
2024-25 ರ ಬಜೆಟ್‌ಗಾಗಿ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಮತ್ತು ಅತ್ಯಾಧುನಿಕತೆಯನ್ನು ಸಂಪೂರ್ಣವಾಗಿ ಸಂಯೋಜಿಸುವ ಸೊಗಸಾದ ಆರು ಗಜಗಳ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಫ್-ವೈಟ್ ಕೈಮಗ್ಗದ ಸೀರೆಯನ್ನು ಧರಿಸಿದ್ದಾರೆ. ನೇರಳೆ ಬಣ್ಣದ ಬಾರ್ಡರ್ ಮತ್ತು ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಾರೆ. ಬಿಳಿ ಸೀರೆಯಲ್ಲಿ ಗೋಲ್ಡನ್ ಕಲರ್ ಝರಿಗಳಿದ್ದು, ಸೀರೆಯ ಲುಕ್ ಹೆಚ್ಚಿಸಿವೆ. ಇದು ಭಾರತೀಯ ಕರಕುಶಲತೆಯ ಶ್ರೀಮಂತ ಕಲಾತ್ಮಕತೆಯನ್ನು ಎತ್ತಿ ತೋರಿಸುತ್ತದೆ.

ನಿರ್ಮಲಾ ಸೀತಾರಾಮನ್ ಅವರ ಹಿಂದಿನ ಸೀರೆಗಳತ್ತ ಒಂದು ಸುತ್ತು
2024 ರ ಮಧ್ಯಂತರ ಬಜೆಟ್‌ಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಲಿ ಕೈಮಗ್ಗದ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು. 6 ನೇ ಬಜೆಟ್ ಭಾಷಣದಲ್ಲಿ, ಅವರು ಸಂಕೀರ್ಣವಾದ ಕರಕುಶಲತೆಯಿಂದ ರಚಿಸಿದ್ದ ಟಸ್ಸಾರ್ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದರು.
ಹಿಂದಿನ ವರ್ಷ, ಟೆಂಪಲ್ ಡಿಸೈನ್ ಇರುವ ಕೆಂಪು ರೇಷ್ಮೆ ಸೀರೆಯನ್ನು ಧರಿಸಿ ಕರ್ನಾಟಕದ ಧಾರವಾಡ ಪ್ರದೇಶದ ಸೊಗಸಾದ 'ಕಸೂತಿ' ಕಲೆಯನ್ನು ಪ್ರದರ್ಶಿಸಿದರು. ಈ ಸೀರೆಯು ರಾಜ್ಯದ ಶ್ರೀಮಂತ ಜವಳಿ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಹೀಗೆ ಪ್ರತಿ ಬಾರಿ ತಮ್ಮ ಬಜೆಟ್ ಮಂಡನೆಯಲ್ಲಿ ಯಾವುದಾದರೂ ವಿಶೇಷ ಸೀರೆ ಮೂಲಕ ದೇಶದ ಕೈಮಗ್ಗದ ಸೀರೆಗಳ ಬಗ್ಗೆ ಇರುವ ಒಲವನ್ನು ವ್ಯಕ್ತಪಡಿಸುತ್ತಾರೆ.












Click it and Unblock the Notifications