Budget 2022; ಕಾವೇರಿ-ಪೆನ್ನಾರ್ ಸೇರಿ 5 ನದಿಗಳ ಜೋಡಣೆ
ನವದೆಹಲಿ, ಫೆಬ್ರವರಿ 01; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಭಾಷಣದಲ್ಲಿ ನದಿ ಜೋಡಣೆ ಬಗ್ಗೆ ಸಚಿವರು ವಿಷಯ ಪ್ರಸ್ತಾಪಿಸಿದ್ದಾರೆ.
ಮಂಗಳವಾರ ಬಜೆಟ್ ಭಾಷಣದಲ್ಲಿ ಸಚಿವರು ಕಾವೇರಿ-ಪೆನ್ನಾರ್ ಸೇರಿದಂತೆ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಲಾಗಿದೆ ಎಂದರು. ಇದಕ್ಕಾಗಿ ಬಜೆಟ್‌ನಲ್ಲಿ 44 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ ಎಂದು ಘೋಷಣೆ ಮಾಡಿದರು.
ಕಾವೇರಿ-ಪೆನ್ನಾರ್, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ನರ್ಮದಾ-ಗೋವಾವರಿ ನದಿಗಳ ಜೋಡಣೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಲೋಕಸಭೆಯಲ್ಲಿ ಜುಲೈ 10ರಂದು ಮಂಡಿಸಿದ್ದ 2014-15ನೇ ಸಾಲಿನ ಬಜೆಟ್‌ನಲ್ಲಿ ಅರುಣ್ ಜೇಟ್ಲಿ ನದಿ ಜೋಡಣೆ ಕುರಿತು ವಿವರವಾದ ವರದಿ ರೂಪಿಸಲು 100 ಕೋಟಿ ರೂ. ಮಂಜೂರು ಮಾಡಿದ್ದರು. ಬಳಿಕ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಉಮಾ ಭಾರತಿ ರಾಜ್ಯಗಳು ಒಪ್ಪಿದಲ್ಲಿ 10 ವರ್ಷಗಳಲ್ಲಿ ದೇಶದ ಎಲ್ಲಾ ನದಿಗಳನ್ನು ಜೋಡಿಸಲಾಗುತ್ತದೆ ಎಂದು ಹೇಳಿದರು.
ಏನಿದು ಜೋಡಣೆ; ಒಂದು ನದಿ ಪಾತ್ರದಲ್ಲಿರುವ ಹೆಚ್ಚಿರುವ ನೀರನ್ನು ಕೊರತೆ ಇರುವ ಇನ್ನೊಂದು ನದಿ ಪಾತ್ರಕ್ಕೆ ಪೂರೈಸುವುದು ನದಿ ಜೋಡಣೆಯ ಹಿಂದಿನ ಪ್ರಮುಖ ಕಾರ್ಯತಂತ್ರವಾಗಿದೆ.
ನದಿ ಜೋಡಣೆ ಭಾರತಕ್ಕೆ ಹೊಸ ವಿಚಾರವೇನಲ್ಲ. 1838 ರಲ್ಲಿ ಅಂದರೆ ಬ್ರಿಟಿಷರ ಕಾಲದಲ್ಲಿ ಖ್ಯಾತ ಸಿವಿಲ್ ಇಂಜಿನಿಯರ್ ಸರ್. ಎ. ಅರ್ಥರ್ ಕಾಟನ್ ದಕ್ಷಿಣ ಭಾರತದ ನದಿಗಳನ್ನು ಜೋಡಿಸುವ ಪ್ರಸ್ತಾಪ ಮುಂದಿಟ್ಟಿದ್ದರು.
ಆ ಬಳಿಕ ಕರ್ನಾಟಕದ ಸರ್. ಎಂ. ವಿಶ್ವೇಶ್ವರಯ್ಯ ಸಹ ಈ ಬಗ್ಗೆ ಚಿಂತನೆ ನಡೆಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 1972ರಲ್ಲಿ ಡಾ. ಕೆ. ಎಲ್. ರಾವ್ ಗಂಗಾ ಮತ್ತು ಕಾವೇರಿ ನದಿ ಜೋಡಣೆ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದರು.












Click it and Unblock the Notifications