Budget 2021: ಯಾವ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್?
ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ 2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಘೋಷಣೆಗಳನ್ನು ಮಾಡಲಾಗಿದೆ.
ರೈತರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಕನಿಷ್ಠ ಬೆಂಬಲ ಬೆಲೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಒಟ್ಟು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಬೆಲೆ ಖಾತರಿ ನೀಡಲಿದೆ. 2022ರ ಹಣಕಾಸು ವರ್ಷದಲ್ಲಿ 16.5 ಲಕ್ಷ ಕೋಟಿ ಕೃಷಿ ಸಾಲ ಗುರಿ ಹೊಂದಲಾಗಿದೆ. ಗ್ರಾಮೀಣ ಮೂಲಸೌಕರ್ಯ ಮತ್ತು ನೀರಾವರಿಗೆ ಹೆಚ್ಚುವರಿ ಹಂಚಿಕೆ ನೀಡಲಾಗುವುದು ಎಂದು ತಿಳಿಸಿದರು.
2020-21ನೇ ಸಾಲಿನಲ್ಲಿ ಧಾನ್ಯಗಳಿಗೆ 10,500 ಕೋಟಿ ರೂಪಾಯಿಗೂ ಅಧಿಕ ಕನಿಷ್ಠ ಬೆಂಬಲ ಬೆಲೆ ನೀಡಲಾಗಿದೆ. 2013-14ನೇ ಸಾಲಿಗೆ ಹೋಲಿಸಿದರೆ ಇದು 14 ಪಟ್ಟು ಹೆಚ್ಚು. 1,000 ಮಂಡಿಗಳನ್ನು ಇನಾಮ್ಸ್ ಒಳಗೆ ಸೇರಿಸಲಾಗುವುದು. ಆರ್ಥಿಕ ಚಟುವಟಿಕೆಗಳಿಗೆಗಾಗಿ ಐದು ಪ್ರಮುಖ ಮೀನುಗಾರಿಕಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಈ ಮಧ್ಯೆ ಕೇಂದ್ರ ಸರ್ಕಾರವು ಕೃಷಿ ಸಂಬಂಧಿ ಉತ್ಪನ್ನಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸಿದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಸೆಸ್ (ಎಐಡಿಸಿ) ವ್ಯಾಪ್ತಿಗೆ ಅನೇಕ ವಸ್ತುಗಳನ್ನು ಸೇರ್ಪಡೆ ಮಾಡಲಾಗಿದೆ. ಅವುಗಳ ವಿವರ ಇಲ್ಲಿದೆ.

ಸೇಬುಹಣ್ಣು, ಎಣ್ಣೆ
ಇದುವರೆಗೂ ಶೇ 15ರಷ್ಟು ಇದ್ದ ಕೃಷಿ ಸೆಸ್ ಅನ್ನು ಹೆಚ್ಚಿಸಲಾಗಿದೆ. ಸೇಬುಹಣ್ಣು (35%), ಕಚ್ಚಾ ಪಾಮ್ ಆಯಿಲ್ (17.5%) ಕಚ್ಚಾ ಸೋಯಾ ಬೀನ್ ಎಣ್ಣೆ (20%), ಕಚ್ಚಾ ಸೂರ್ಯಕಾಂತಿ ಬೀಜದ ಎಣ್ಣೆ (20%) ಮೇಲಿನ ಸೆಸ್ ಏರಿಸಲಾಗಿದೆ.

ಧಾನ್ಯಗಳ ಮೇಲಿನ ಸೆಸ್
ಇದುವರೆಗೂ ಶೇ 10ರಷ್ಟು ಇದ್ದ ಉತ್ಪನ್ನಗಳ ಕೃಷಿ ಸೆಸ್ ಅನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬಟಾಣಿ (ಶೇ 40), ಕಾಬೂಲ್ ಕಡಲೆ (ಶೇ 30), ಕಡಲೆ ಬೇಳೆ (ಶೇ 50), ಚಿಕ್ ಪೀಸ್ (ಶೇ 50), ವಿವಿಧ ಧಾನ್ಯಗಳ ಮೇಲಿನ (ಶೇ 20) ಮೇಲಿನ ಸೆಸ್ ಹೆಚ್ಚಳವಾಗಿದೆ.

ವೈನ್ ಉತ್ಪನ್ನಗಳ ಸೆಸ್
ಶೇ 50ರಷ್ಟಿದ್ದ ಕೆಲವು ಉತ್ಪನ್ನಗಳ ಸೆಸ್‌ಅನ್ನು ದುಪ್ಪಟ್ಟು ಮಾಡಲಾಗಿದೆ. ಅಂದರೆ ಶೇ 100ಕ್ಕೆ ಈ ಉತ್ಪನ್ನಗಳ ಸೆಸ್ ಮೌಲ್ಯ ತಲುಪಿದೆ. ಎಲ್ಲ ವೈನ್ ಬಳಕೆಯ ಸರಕುಗಳ ಮೇಲಿನ ಸೆಸ್ ಶೇ 50ರಷ್ಟಿತ್ತು. ಅದನ್ನು ಈಗ ಶೇ 100ಕ್ಕೆ ಏರಿಸಲಾಗಿದೆ. ಇನ್ನು ತಾಜಾ ದ್ರಾಕ್ಷಿಯ ಮತ್ತು ಸುವಾಸಿತ ವೈನ್‌ಗಳು ಹಾಗೂ ಮದ್ಯಗಳ ಸೆಸ್ ಅನ್ನು ಶೇ 100ರವರೆಗೆ ಹೆಚ್ಚಿಸಲಾಗಿದೆ. ಸೇಬು ರಸ, ಪೇರಾ ಹಣ್ಣು, ಅಕ್ಕಿದ್ರವ್ಯದ ವೈನ್, ಕಿಣ್ವ ಮಿಶ್ರಿಯ ಪಾನೀಯ ಮುಂತಾದವುಗಳ ವೈನ್‌ಗಳು, ಬ್ರ್ಯಾಂಡಿ, ಬೌರ್ಬನ್ ವಿಸ್ಕಿ, ಸ್ಕಾಚ್ ಮುಂತಾದ ಎಲ್ಲ ಸರಕುಗಳ ಸೆಸ್ ಶೇ 100ರಷ್ಟು ಏರಿಕೆಯಾಗಿದೆ.

ಶೇ 1 ಹಾಗೂ ಕಡಿಮೆ ಸೆಸ್
ಶೇ 1ರಷ್ಟು ಸೆಸ್ ಇದ್ದ ವಿವಿಧ ಬಗೆಯ ಕಲ್ಲಿದ್ದಲಿನ ಸೆಸ್ ಈಗ ಶೇ 1.5ಕ್ಕೆ ಏರಿಕೆಯಾಗಿದೆ. ಹಾಗೆಯೇ ಲಿಗ್ನೈಟ್, ಪೀಟ್ ಸೆಸ್ ಕೂಡ ಶೇ 1.5ಕ್ಕೆ ಏರಿಕೆಯಾಗಿದೆ. ಸೆಸ್ ಹೊಂದಿರದ ಯೂರಿಯಾ, ಪ್ರಾಸ್ಫೇಟ್ ಮತ್ತು ಪೊಟ್ಯಾಶ್‌ಗೆ ಶೇ 5ರಷ್ಟು ಸೆಸ್ ವಿಧಿಸಲಾಗಿದೆ. ಇನ್ನು ಶೇ 2.5ರಷ್ಟಿದ್ದ ಅಮೋನಿಯಂ ನೈಟ್ರೇಟ್ ಸೆಸ್ ಶೇ 5ಕ್ಕೆ ಏರಿಕೆಯಾಗಿದೆ. ಹತ್ತಿಯ ಸೆಸ್ ಅನ್ನು ಶೇ 5ರಲ್ಲಿಯೇ ಉಳಿಸಲಾಗಿದೆ.

ಚಿನ್ನ-ಬೆಳ್ಳಿ ಸೆಸ್
ಬೆಳ್ಳಿ (ಅರ್ಹ ಪ್ರಯಾಣಿಕರಿಂದ ಆಮದು ಸೇರಿದಂತೆ) ಶೇ 7.5ರಷ್ಟಿದ್ದ ಸೆಸ್ ಅನ್ನು ಶೇ 2.5ಕ್ಕೆ ತಗ್ಗಿಸಲಾಗಿದೆ. ಬೆಳ್ಳಿಯ ಗಟ್ಟಿಗಳ ಸೆಸ್ ಶೇ 6.1ರಿಂದ ಶೇ 2.5ಕ್ಕೆ ಇಳಿಕೆಯಾಗಿದೆ. ಆಮದು ಒಳಗೊಂಡ ಚಿನ್ನದ ಸೆಸ್ ಶೇ 7.5ರಿಂದ ಶೇ 2.5ಕ್ಕೆ ಇಳಿದಿದ್ದರೆ, ಚಿನ್ನದ ಗಟ್ಟಿಯ ಸೆಸ್ ಶೇ 6.9ರಿಂದ ಶೇ 2.5ಕ್ಕೆ ಇಳಿಕೆಯಾಗಿದೆ.












Click it and Unblock the Notifications