ರಾಹುಲ್ ಗಾಂಧಿ ಬಳಿಕ ಮತ್ತೊಬ್ಬರಿಗೆ ಮಹಾ ಸಂಕಷ್ಟ!
ನವದೆಹಲಿ: ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಕಳೆದುಕೊಂಡ ಕೆಲವೇ ದಿನಗಳಲ್ಲಿ ಮತ್ತೊಬ್ಬ ಸಂಸದನಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಈಗ ಲೋಕಸಭೆ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 4 ವರ್ಷಗಳ ಸಜೆ ವಿಧಿಸಲಾದ ಹಿನ್ನೆಲೆ ಅಫ್ಜಲ್ ಅನ್ಸಾರಿಗೆ ಈ ಕಂಟಕ ಎದುರಾಗಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂದಹಾಗೆ ಉತ್ತರ ಪ್ರದೇಶದ ಜೈಲಿನಲ್ಲಿರುವ ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿಗೆ ಘಾಜಿಪುರದ ಜನಪ್ರತಿನಿಧಿಗಳ ನ್ಯಾಯಾಲಯ ಕೊಲೆ ಹಾಗೂ ಅಪಹರಣ ಪ್ರಕರಣ ಒಂದರಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕೆಲವೇ ಗಂಟೆಗಳ ನಂತರ ಅನ್ಸಾರಿ ಸಹೋದರ ಹಾಗೂ ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿಗೂ ಅದೇ ಕೇಸ್‌ನಲ್ಲಿ 2007ರ ಗ್ಯಾಂಗ್‌ಸ್ಟರ್ಸ್ ಕಾಯ್ದೆಯಡಿ 4 ವರ್ಷಗಳ ಸಜೆ ವಿಧಿಸಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?
ಅಷ್ಟಕ್ಕೂ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿಗಳಿಗೆ ಶಿಕ್ಷೆ ನೀಡಲಾಗಿದೆ. ಮುಖ್ತಾರ್ ಅನ್ಸಾರಿಗೆ 5 ಲಕ್ಷ ರೂಪಾಯಿ ಹಾಗೂ ಅವರ ಸಹೋದರ ಅಫ್ಜಲ್ ಅನ್ಸಾರಿಗೆ 1 ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. ಮತ್ತೊಂದ್ಕಡೆ ಸಂಸತ್ ನಿಯಮದ ಪ್ರಕಾರ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾಗುವ ಸದಸ್ಯ ಸ್ವಯಂಚಾಲಿತವಾಗಿ ಸಂಸತ್ ಸದಸ್ಯತ್ವದಿಂದ ಅನರ್ಹನಾಗುತ್ತಾರೆ. ಹೀಗಾಗಿ 4 ವರ್ಷ ಸೆರೆವಾಸಕ್ಕೆ ಗುರಿಯಾಗಿರುವ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ಕಳೆದುಕೊಳ್ಳುವುದು ಪಕ್ಕಾ.
ರಾಹುಲ್ ಗಾಂಧಿ ಪ್ರಕರಣದ ನಂತರ
ಇನ್ನು ಇತ್ತೀಚೆಗಷ್ಟೇ ರಾಹುಲ್ ಗಾಂಧಿ ವಿಚಾರದಲ್ಲಿ ಹೀಗೆ ಆಗಿತ್ತು. ಮಾನಹಾನಿ ಪ್ರಕರಣದಲ್ಲಿ ಇತ್ತೀಚೆಗಷ್ಟೇ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇದೇ ನಿಯಮದ ಅಡಿಯಲ್ಲಿ ಲೋಕಸಭೆ ಸದಸ್ಯತ್ವ ಕಳೆದುಕೊಂಡಿದ್ದರು. ಈ ಘಟನೆ ನಡೆದ ಕೆಲವೇ ದಿನದಲ್ಲಿ ಮತ್ತೊಂದು ಘಟನೆ ನಡೆದಿದೆ. 4 ವರ್ಷ ಸಜೆ ಶಿಕ್ಷೆಗೆ ಗುರಿ ಆಗಿರುವ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ಕಳೆದುಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಈ ತೀರ್ಪನ್ನು ಮೃತ ಬಿಜೆಪಿ ಶಾಸಕ ಕೃಷ್ಣಾನಂದ ರೈ ಕುಟುಂಬಸ್ಥರು ಸ್ವಾಗತಿಸಿದ್ದಾರೆ.
ಕೃಷ್ಣಾನಂದ ರೈ ಪತ್ನಿ ಹೇಳಿದ್ದೇನು?
2005ರಲ್ಲಿ ಘಾಜಿಪುರದಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆಯಾಗಿತ್ತು. ಈ ತೀರ್ಪಿನ ಹಿನ್ನೆಲೆ, ಉತ್ತರ ಪ್ರದೇಶದಲ್ಲಿ ಮಾಫಿಯಾ ಆಡಳಿತ ಕೊನೆಗೊಂಡಿದೆ ಎಂದು ಕೃಷ್ಣಾನಂದ ಅವರ ಪತ್ನಿ ಹೇಳಿದ್ದಾರೆ. ಅಲ್ಲದೆ ತಮಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ ಎಂದಿದ್ದಾರೆ. ಇನ್ನೊಂದು ಕಡೆ ಇದೇ ಜನವರಿಯಲ್ಲಿ ಪೊಲೀಸರು, 2001ರ 'ಉಸ್ರಿ ಛಟ್ಟಿ' ಗ್ಯಾಂಗ್ ವಾರ್ ಘಟನೆಗೆ ಸಂಬಂಧಿಸಿದಂತೆ ಮುಖ್ತಾರ್ ಅನ್ಸಾರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಘಾಜಿಪುರದ ಮೊಹಮ್ಮದಾಬಾದ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302ರ ಅಡಿ ಕೇಸ್ ದಾಖಲಾಗಿತ್ತು.
ಒಟ್ನಲ್ಲಿ ಈ ತೀರ್ಪು ಮತ್ತೆ ಉತ್ತರ ಪ್ರದೇಶದಲ್ಲಿ ಸದ್ದು ಮಾಡುತ್ತಿದೆ. ಒಂದು ಕಡೆ ಉತ್ತರ ಪ್ರದೇಶ ಸರ್ಕಾರ ಡಾನ್‌ಗಳ ವಿರುದ್ಧ ಸಮರ ಸಾರಿರುವ ಮಧ್ಯೆ, ಮಾಜಿ ಡಾನ್‌ಗಳಿಗೆ ಕಠಿಣ ತೀರ್ಪು ಹೊರಬಂದಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರನ ಹತ್ಯೆ ಕೂಡ ನಡೆದಿತ್ತು. ಇಬ್ಬರೂ ಡಾನ್‌ಗಳಾಗಿದ್ದು, ಇವರ ಹತ್ಯೆ ಕೂಡ ಉತ್ತರ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಮತ್ತೊಂದು ಕಡೆ ಅನ್ಸಾರಿ ಬ್ರದರ್ಸ್ ವಿರುದ್ಧ ನೀಡಲಾಗಿರುವ ತೀರ್ಪನ್ನು ಮೃತ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಪತ್ನಿ ಸ್ವಾಗತಿಸಿದ್ದಾರೆ.












Click it and Unblock the Notifications