ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಇಂದು ಬೆಳಿಗ್ಗೆ 10 ಗಂಟೆಗೆ ಮತ ಎಣಿಕೆ
ಮುಂಬೈ: ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (Brihanmumbai Municipal Corporation) ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಜನವರಿ 16ರ ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಪಾಲಿಕೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯು ಈ ಬಾರಿ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ದೇಶದ ಅತ್ಯಂತ ಶ್ರೀಮಂತ ಪಾಲಿಕೆ ಎನ್ನುವ ಖ್ಯಾತಿಯನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗಳಿಸಿದೆ. ಪಾಲಿಕೆಯ 227 ಸ್ಥಾನಗಳಿಗೆ ಒಟ್ಟು 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಇನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆಯು ಬ್ಯಾಚ್‌ಗಳಲ್ಲಿ ನಡೆಯಲಿದೆ. ಏಕಕಾಲದಲ್ಲಿ ಎರಡು ಕ್ಷೇತ್ರಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಮುಂಬೈ ಸ್ಥಳೀಯ ಪಾಲಿಕೆಯಲ್ಲಿ ಈ ಬಾರಿ ಶೇ50 ಮತದಾನ ದಾಖಲಾಗಿದೆ. ಆದಾಗ್ಯೂ, ಅಂತಿಮ ಮತದಾನದ ಅಂಕಿಅಂಶಗಳನ್ನು ನಂತರ ಘೋಷಿಸಲಾಗುತ್ತದೆ. 2017ರಲ್ಲಿ ಮುಂಬೈ ನಗರದಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಶೇ55.53 ರಷ್ಟು ಮತದಾನವನ್ನು ದಾಖಲಾಗಿತ್ತು.

ಮಹತ್ವದ ಚುನಾವಣೆ: ಇನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯು ಪ್ರತಿಷ್ಠೆಗೆ ಕಾರಣವಾಗಿದೆ. ಇದು ದೇಶದಲ್ಲಿ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ಶ್ರೀಮಂತ ನಗರ ಪಾಲಿಕೆ ಎನ್ನುವ ಹೆಗ್ಗಳಿಕೆಯನ್ನು ಗಳಿಸಿದೆ. ಈ ಬಾರಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಒಂದಾಗಿದ್ದರೆ ಮತ್ತೊಂದು ಕಡೆ ಇಲ್ಲಿನ ಸ್ಥಳೀಯ ಪಕ್ಷಗಳು ವೈಮನಸ್ಸು ಮರೆತು ಒಂದಾಗಿವೆ. ಈ ಕಾರಣಗಳಿಗೆ ಈ ಬಾರಿಯ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯು ಮಹತ್ವ ಪಡೆದುಕೊಂಡಿದೆ.
ಚುನಾವಣೋತ್ತರ ಸಮೀಕ್ಷೆಗಳು
ಆಕ್ಸಿಸ್‌ಮೈಇಂಡಿಯಾ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಮೈತ್ರಿಕೂಟದ ಪಾಲುದಾರ ಶಿವಸೇನೆ ಪಕ್ಷವು 131 ರಿಂದ 151 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ. ಶಿವಸೇನೆ (ಯುಬಿಟಿ) ಮತ್ತು ಎಂಎನ್‌ಎಸ್ 58 ರಿಂದ 68 ಸ್ಥಾನಗಳನ್ನು ಮತ್ತು ಇತರರು 6 ರಿಂದ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.
ಇನ್ನು ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಜೆವಿಸಿ ನಿರ್ಗಮನ ಸಮೀಕ್ಷೆಗಳು ಬಿಜೆಪಿ/ಶಿವಸೇನೆ 138, ಶಿವಸೇನೆ (ಯುಬಿಟಿ)/ಎಂಎನ್‌ಎಸ್/ಎನ್‌ಸಿಪಿ (ಎಸ್‌ಪಿ) 59. ಕಾಂಗ್ರೆಸ್/ವಿಬಿಎ 23 ಮತ್ತು ಪಕ್ಷೇತರರು ಏಳು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.
ಏಷ್ಯಾದ ದೊಡ್ಡ ಪಾಲಿಕೆ
ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಒಂದು ರಾಜ್ಯವೊಂದರ ಚುನಾವಣೆಯಷ್ಟೇ ಮಹತ್ವವನ್ನು ಪಡೆದುಕೊಂಡಿತ್ತು. ಇಲ್ಲಿನ 227 ವಾರ್ಡ್‌ಗಳಲ್ಲಿ ನಡೆದ ಚುನಾವಣೆಗೆ ಘಟಾನುಘಟಿ ನಾಯಕರೇ ಬಂದು ಪ್ರಚಾರ ಮಾಡಿದ್ದರು. ಅಲ್ಲದೇ ಬಿಜೆಪಿ ಈ ಬಾರಿ ಭಾರೀ ಪೈಪೋಟಿಯನ್ನು ನೀಡಿತ್ತು. ಇನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಬಹುಮತಕ್ಕೆ 114 ಆಗಿದೆ. ಬಿಜೆಪಿ ಪ್ರಾರಂಭದ ಹಂತದಲ್ಲೇ ಮುನ್ನಡೆ ಸಾಧಿಸಿಕೊಂಡಿದೆ.












Click it and Unblock the Notifications