ಸೇತುವೆ ಕುಸಿತ ಪ್ರಕರಣ: ಪ್ರಧಾನಿ ಮೋದಿ ನೀಡಿದ ಆ ಎರಡು ಭಿನ್ನ ಹೇಳಿಕೆಗಳು
ನವದೆಹಲಿ, ಅ. 31: ಗುಜರಾತ್‌ನ ಮೊರ್ಬಿಯ ಮಚ್ಚು ನದಿಯ ತೂಗು ಸೇತುವೆ ಕುಸಿದು 132 ಮಂದಿ ಸಾವಿಗೀಡಾಗಿದ್ದಾರೆ. ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ 2016ರಲ್ಲಿ ಕೋಲ್ಕತ್ತಾದಲ್ಲಿ ಸೇತುವೆ ಕುಸಿದಿದ್ದಾಗ ಅವರಾಡಿದ್ದ ಮಾತುಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತಿರುಗೇಟು ನೀಡಿದ್ದಾರೆ.
ಗುಜರಾತ್ ಸೇತುವೆ ಕುಸಿತದ ಬಗ್ಗೆ ತೀವ್ರ ಆಕ್ರೋಶದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ವಿಡಿಯೋ ವೈರಲ್ ಆಗಿದೆ. ಕೆಲವು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಸೇತುವೆಯೊಂದು ಕುಸಿದಿದ್ದ ಸಂದರ್ಭದಲ್ಲಿ ಪ್ರಧಾನಿ ಮಾಡಿದ್ದ ಟೀಕೆಗಳನ್ನು ಪ್ರತಿಪಕ್ಷ ನಾಯಕರು ಮತ್ತು ವಿಶ್ಲೇಷಕರು ಉಲ್ಲೇಖಿಸಿದ್ದು, 'ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ' ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.
"ಪಶ್ಚಿಮ ಬಂಗಾಳದಲ್ಲಿ ಸೇತುವೆಯೊಂದು ಕುಸಿದು ಬಿದ್ದಾಗ ಪ್ರಧಾನಿ ಮಾಡಿದ 'ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ? ಎಂಬ ಭಾಷಣ ನನಗೆ ನೆನಪಾಗುತ್ತಿದೆ. ಅವರ ಸಂವೇದನಾಶೀಲತೆಯಿಲ್ಲದ ವಿಡಿಯೋವನ್ನು ಹಂಚಿಕೊಳ್ಳುತ್ತಿಲ್ಲ" ಎಂದು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
|
ಸೇತುವೆ ದುರಂತಕ್ಕೆ ಮಮತಾ ಬ್ಯಾನರ್ಜಿ ಸರ್ಕಾರವನ್ನು ವ್ಯಂಗ್ಯವಾಡಿದ್ದ ಪ್ರಧಾನಿ
ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್, ಪ್ರಧಾನಿಯವರ ಹಳೆಯ ವಿಡಿಯೋ ಮತ್ತು ಸುದ್ದಿಯ ಲಿಂಕ್ ಶೇರ್ ಮಾಡಿಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಇದು ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಭಾನುವಾರ ಪ್ರಶ್ನಿಸಿದ್ದಾರೆ.
ಘಟನೆಯ ಕುರಿತು ಹಲವಾರು ಟ್ವೀಟ್‌ಗಳನ್ನು ಮಾಡಿರುವ ದಿಗ್ವಿಜಯ್ ಸಿಂಗ್, ಮಾರ್ಚ್ 31, 2016 ರಂದು ಕೋಲ್ಕತ್ತಾದಲ್ಲಿ ವಿವೇಕಾನಂದ ರಸ್ತೆಯ ಮೇಲ್ಸೇತುವೆ ಕುಸಿದು ಹಲವರು ಸಾವನ್ನಪ್ಪಿದ ಘಟನೆ ಕುರಿತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವಾಗ ಪ್ರಧಾನಿ ಉಲ್ಲೇಖಿಸಿದ್ದ, ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ ಎಂಬ ಮಾತುಗಳನ್ನು ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ.
|
ಇದು ದೇವರ ಕೃತ್ಯವಲ್ಲ, ದೀದಿ, ಇದು ವಂಚನೆಯ ಕೃತ್ಯ: ಮೋದಿ
ಮಾರ್ಚ್ 2016ರಲ್ಲಿ ಕೋಲ್ಕತ್ತಾದಲ್ಲಿ ವಿವೇಕಾನಂದ ರಸ್ತೆಯ ಮೇಲ್ಸೇತುವೆ ಕುಸಿದು 27 ಮಂದಿ ಸಾವನ್ನಪ್ಪಿದ್ದರು. ಈ ವೇಳೆ ಮೇಲ್ಸೇತುವೆ ಹಿಂದಿನ ಸರ್ಕಾರದಿಂದ ಪ್ರಾರಂಭವಾದ ಯೋಜನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಮೇಲ್ಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸಿದ್ದರೆ ಬ್ಯಾನರ್ಜಿ ಅವರು ತಮ್ಮ ಪ್ರತಿಸ್ಪರ್ಧಿಗಳಿಗೆ ಇದೇ ರೀತಿ ಕ್ರೆಡಿಟ್ ನೀಡುತ್ತಿದ್ದರೇ ಎಂದು ಮೋದಿ ಪ್ರಶ್ನಿಸಿದ್ದರು. ಇಷ್ಟೇ ಅಲ್ಲದೇ ಫ್ಲೈಓವರ್ ಕುಸಿತವು ಚುನಾವಣಾ ಸಮಯದಲ್ಲಿ ದೇವರ ಸಂದೇಶ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಫ್ಲೈಓವರ್ ಕುಸಿತವು "ದೇವರ ಕೃತ್ಯ" ಎಂದು ಹೇಳಿದ್ದ ಹೈದರಾಬಾದ್ ಮೂಲದ ಕಂಪನಿಯ ಹೇಳಿಕೆಯನ್ನು ಸರ್ಕಾರ ಹೇಳಿಕೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದರು.
"ಇದು ದೇವರ ಕೃತ್ಯವಲ್ಲ, ದೀದಿ, ಇದು ವಂಚನೆಯ ಕೃತ್ಯ" ಎಂದು ಮೋದಿ ಹೇಳಿದ್ದರು. "ಇದು ಚುನಾವಣೆಯ ಸಮಯದಲ್ಲಿ ನಡೆದ ದೇವರ ಕಾರ್ಯವಾಗಿದೆ. ಇದರಿಂದ ಯಾವ ರೀತಿಯ ಸರ್ಕಾರ ನಡೆಯುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಅದಕ್ಕಾಗಿಯೇ ದೇವರು ಜನರಿಗೆ ಸಂದೇಶವನ್ನು ನೀಡಿದ್ದಾನೆ. ಇಂದು ಸೇತುವೆ ಕುಸಿದಿದೆ. ನಾಳೆ ಇಡೀ ಬಂಗಾಳವೂ ಮುಳುಗುತ್ತದೆ. ಈ ಜನರನ್ನು ಉಳಿಸಿ ಎಂಬುದು ದೇವರ ಸಂದೇಶ" ಎಂದಿದ್ದರು.

ಮೊರ್ಬಿ ಸೇತುವೆ ದುರಂತ ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ?
"ಮೋದಿ ಜೀ, ಮೊರ್ಬಿ ಸೇತುವೆ ಅಪಘಾತವು ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ?" ಎಂದು ಪ್ರಶ್ನೆ ಮಾಡಿರುವ ದಿಗ್ವಿಜಯ್ ಸಿಂಗ್, 2016ರ ಸುದ್ದಿ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಮೊರ್ಬಿ ಸೇತುವೆ ಕುಸಿತದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಸೇತುವೆ ಕುಸಿತದ ಘಟನೆಯು ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ..? ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.
ಮೋದಿಯವರ ಗುಜರಾತ್ ಮಾದರಿಯನ್ನು ಟೀಕಿಸಿರುವ ದಿಗ್ವಿಜಯ್ ಸಿಂಗ್, "ಸೇತುವೆಯನ್ನು 6 ತಿಂಗಳಿನಿಂದ ದುರಸ್ತಿ ಮಾಡಲಾಗುತ್ತಿದೆ, ಅದಕ್ಕೆ ಎಷ್ಟು ವೆಚ್ಚವಾಯಿತು..? 5 ದಿನದಲ್ಲಿ ಅದು ಕುಸಿದಿದೆ. 27 ವರ್ಷಗಳಿಂದ ಬಿಜೆಪಿ ಸರ್ಕಾರವಿದೆ, ಇದೇನಾ ನಿಮ್ಮ ಅಭಿವೃದ್ಧಿ ಮಾದರಿ..? ಈ ವರ್ಷದ ಜುಲೈನಲ್ಲಿ, ಕಚ್ ಜಿಲ್ಲೆಯ ಬಿದ್ರಾ ಗ್ರಾಮದಲ್ಲಿ ಮೊದಲ ದಿನದ ಪರೀಕ್ಷೆಯಲ್ಲಿ ನರ್ಮದಾ ಕಾಲುವೆ ಒಡೆದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"8-9 ವರ್ಷಗಳಿಂದ ನಿರ್ಮಿಸಲಾಗುತ್ತಿದ್ದ ಭುಜ್ ನಗರದ ಮೇಲ್ಸೇತುವೆ ಈ ವರ್ಷ ಉದ್ಘಾಟನೆಗೊಂಡಿದ್ದು, ಮತ್ತೆ ದುರಸ್ತಿ ಮಾಡಬೇಕಾಯಿತು. ಇಡೀ ಗುಜರಾತ್‌ನಲ್ಲಿ ಮೋದಿಶಾ ಅವರ ನೆಚ್ಚಿನ ಗುತ್ತಿಗೆದಾರರು ಮಾತ್ರ ಗುತ್ತಿಗೆ ಪಡೆಯುತ್ತಾರೆ ಎಂದು ನನಗೆ ತಿಳಿಸಿದೆ. ಕೆಲಸ ಪೂರ್ಣಗೊಳ್ಳದಿರಬಹುದು, ಆದರೆ ಪಾವತಿ ಪೂರ್ಣಗೊಂಡಿದೆ" ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಮೋದಿ ಹೇಳಿದಂತೆ ಇದು ವಂಚನೆಯ ಕೆಲಸ!
"ಮೋದಿ ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಹೇಳಿದ್ದರು. ಇದು ದೇವರ ಕಾರ್ಯವಲ್ಲ, ಇದು ವಂಚನೆಯ ಕೆಲಸ" ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಮಾರ್ಚ್ 2016 ರಂದು ಕೋಲ್ಕತ್ತಾದಲ್ಲಿ ವಿವೇಕಾನಂದ ರಸ್ತೆಯ ಮೇಲ್ಸೇತುವೆ ಕುಸಿದು ಹಲವರನ್ನು ಬಲಿತೆಗೆದುಕೊಂಡ ನಂತರ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರವನ್ನು ಟೀಕಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ್‍ಯಾಲಿಯಲ್ಲಿ ದೇವರ ಕೃತ್ಯ, ವಂಚನೆಯ ಕೃತ್ಯ ಎಂಬ ಪದ ಬಳಸಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಮದರಿಹತ್‌ನಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಸೇತುವೆಯ ಕೆಳಗೆ ಸಿಲುಕಿರುವ ಜನರಿಗೆ ಉತ್ತಮ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಬದಲು, ಬಂಗಾಳದ ಮುಖ್ಯಮಂತ್ರಿ ಬೇರೊಬ್ಬರನ್ನು ದೂರುವ ಆಟಗಳನ್ನು ಆಡಿದ್ದಾರೆ. ಸಂಪೂರ್ಣ ಆರೋಪವನ್ನು ಎಡಪಕ್ಷಗಳ ಮೇಲೆ ಹೊರಿಸಿದ್ದಾರೆ ಎಂದು ಹೇಳಿದ್ದರು.
ಅಂದಿನ ಮೋದಿಯವರ ಹೇಳಿಕೆಗಳನ್ನು ಉಲ್ಲೇಖಿಸಿ ಹಲವು ಮಂದಿ ಟ್ವಿಟ್ಟರ್‌ನಲ್ಲಿ ಆಕ್ಟ್ ಆಫ್ ಗಾಡ್ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿಯ ಹಿಂದಿನ ವಿಡಿಯೋ ಹೇಳಿಕೆಯನ್ನು ವೈರಲ್ ಮಾಡಲಾಗುತ್ತಿದೆ.












Click it and Unblock the Notifications