2005ರಲ್ಲಿ IIT ರಿಸಲ್ಟ್ ನೋಡಿ ಅತ್ತಿದ್ದಾಗ ಸಂತೈಸಿದ್ದ ಗಣಿತ ಶಿಕ್ಷಕರನ್ನ 21ವರ್ಷಗಳ ಬಳಿಕ ಭೇಟಿ: ಶಂತನು ದೇಶಪಾಂಡೆ ಭಾವುಕ ಕ್ಷಣ
ನವದೆಹಲಿ: ಯಶಸ್ಸಿನ ಉತ್ತುಂಗಕ್ಕೇರಿದಾಗಲೂ ನಮ್ಮನ್ನು ಆ ಹಂತಕ್ಕೆ ತಲುಪಿಸಲು ಕಾರಣವಾದ ತಂದೆ ತಾಯಿ, ಗುರುಗಳನ್ನ ಮರೆಯದಿರುವುದು ನಿಜವಾದ ಸಾಧಕನ ಲಕ್ಷಣ. ಇದೀಗ ಬಾಂಬೆ ಶೇವಿಂಗ್ ಕಂಪನಿ ಸಂಸ್ಥಾಪಕ ಶಂತನು ದೇಶಪಾಂಡೆ ಅವರು ಬರೋಬ್ಬರಿ 21 ವರ್ಷಗಳ ಬಳಿಕ ತಮ್ಮ ನೆಚ್ಚಿನ ಶಾಲಾ ಶಿಕ್ಷಕರನ್ನ ಭೇಟಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಿಂಕ್ಡ್‌ಇನ್‌ನಲ್ಲಿ ಈ ಸುಂದರ ಕ್ಷಣದ ವಿಡಿಯೋವನ್ನ ಹಂಚಿಕೊಂಡಿರುವ ಅವರು, ತಮ್ಮ ನೆಚ್ಚಿನ ಗಣಿತ ಗುರು ಜೆಜೆ ಸರ್ ಅವರೊಂದಿಗೆ ಕಳೆದ ಹಿಂದಿನ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಕೇವಲ ಒಂದು ಫೋನ್ ಕರೆ ತಮ್ಮ ಜೀವನದ ದೃಷ್ಟಿಕೋನವನ್ನೇ ಹೇಗೆ ಬದಲಾಯಿಸಿತು ಎಂಬುದನ್ನ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

2005ರ ಐಐಟಿ ಪ್ರವೇಶ ಪರೀಕ್ಷೆ
ಶಂತನು ದೇಶಪಾಂಡೆ ಅವರು ತಮ್ಮ ಜೀವನದ ಅತ್ಯಂತ ಕಠಿಣ ಘಟ್ಟವೊಂದನ್ನ ಈ ಸಂದರ್ಭದಲ್ಲಿ ನೆನಪಿಕೊಂಡಿದ್ದಾರೆ. 2005ರಲ್ಲಿ ಅವರ ಐಐಟಿ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ, ನಿರೀಕ್ಷಿತ ಮಟ್ಟದಲ್ಲಿ ಅಂಕಗಳು ಬಾರದೆ ಶಂತನು ತೀವ್ರ ನಿರಾಸೆಗೊಳಗಾಗಿದ್ದರು. ಆ ನೋವಿನಲ್ಲಿ ಕಣ್ಣೀರು ಹಾಕುತ್ತಲೇ ತಮ್ಮ ನೆಚ್ಚಿನ ಗಣಿತ ಶಿಕ್ಷಕ ಜೆಜೆ ಸರ್ ಅವರಿಗೆ ಕರೆ ಮಾಡಿದ್ದರು.
ತನ್ನ ವಿದ್ಯಾರ್ಥಿಯ ಅಳುವನ್ನ ಕೇಳಿದ ಗುರುಗಳು ಅಂದು ಹೇಳಿದ ಒಂದು ಕಿವಿಮಾತು ಅವರ ಜೀವನಕ್ಕೆ ಬಹುದೊಡ್ಡ ಪಾಠವಾಯಿತು. "ಇಂದು ನಿನಗೆ ಈ ವಿಷಯ ಬಹಳ ದೊಡ್ಡದಾಗಿ ಕಾಣಿಸಬಹುದು. ಆದರೆ ಜೀವನದಲ್ಲಿ ನಿನ್ನ ಸರಿಯಾದ ಪ್ರಯತ್ನವನ್ನು ನೀಡು, ಉಳಿದದ್ದನ್ನು ಮರೆತುಬಿಡು. ಎಲ್ಲವೂ ಒಳ್ಳೆಯದೇ ಆಗುತ್ತದೆ" (Do your best and forget the rest) ಎಂದು ಗುರುಗಳು ಸಾಂತ್ವನ ಹೇಳಿದ್ದರು.
ಫಲಿತಾಂಶದ ಬಗ್ಗೆ ಚಿಂತಿಸದೆ ನಮ್ಮ ಪ್ರಯತ್ನವನ್ನು ನೀಡುವುದೇ ಜೀವನದ ಅತಿಮುಖ್ಯ ಪಾಠ ಎಂಬುದನ್ನ ತಾವು ಅವರಿಂದ ಕಲಿತಿದ್ದಾಗಿ ಶಂತನು ನೆನಪಿಸಿಕೊಂಡಿದ್ದಾರೆ.
21 ವರ್ಷಗಳ ನಂತರ ಗುರು ಶಿಷ್ಯರ ಭೇಟಿ
ಬರೋಬ್ಬರಿ 21 ವರ್ಷಗಳ ನಂತರ ಶಂತನು ದೇಶಪಾಂಡೆ ಅವರು ಜೆಜೆ ಸರ್ ಅವರ ಕಚೇರಿಯನ್ನ ಪ್ರವೇಶಿಸಿದಾಗ ನಡೆದ ಗುರು ಶಿಷ್ಯರ ಭೇಟಿಯಾದ ತುಂಬ ಭಾವುಕವಾಗಿತ್ತು. ಕಚೇರಿಯೊಳಗೆ ಕಾಲಿಡುತ್ತಿದ್ದಂತೆಯೇ, "ಅರೇ ಶಂತನು, ಬಾ" ಎಂಬ ಅದೇ ಹಳೆಯ ಧ್ವನಿ ಅವರ ಕಿವಿಗೆ ಬಿತ್ತು. "ಅವರ ಧ್ವನಿ ಕೇಳಿದ ತಕ್ಷಣ 2005ರ ಎಲ್ಲಾ ಭಾವನೆಗಳು ಒಮ್ಮೆಲೆ ಮರುಕಳಿಸಿದವು.
ಬನ್ಸಾಲ್ ತರಗತಿಗಳಲ್ಲಿದ್ದ ಆ ಯುವ ಗಣಿತ ಶಿಕ್ಷಕ, ಈಗ ಅಲೆನ್ ಸಂಸ್ಥೆಯಲ್ಲಿ ಹಿರಿಯ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಆದರೆ ಅವರ ಧ್ವನಿ ಮಾತ್ರ ಹಾಗೆಯೇ ಇತ್ತು. ಅವರನ್ನು ನೋಡಿದಾಗ ನನಗೆ ಮತ್ತೆ 18 ವರ್ಷ ವಯಸ್ಸಾದಂತೆ ಭಾಸವಾಯಿತು" ಎಂದು ಶಂತನು ಬರೆದುಕೊಂಡಿದ್ದಾರೆ.
ಸರಿಯಾದ ಸಮಯದಲ್ಲಿ ಉತ್ತಮ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಮೇಲೆ ಬೀರುವ ಪ್ರಭಾವ ಎಂಥದ್ದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಗುರು-ಶಿಷ್ಯರ ಈ ವೈರಲ್ ವಿಡಿಯೋ ಲಿಂಕ್ಡ್‌ಇನ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರ ಹೃದಯ ಗೆದ್ದಿದೆ. ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮ ಶಾಲಾ ದಿನಗಳನ್ನು ಹಾಗೂ ನೆಚ್ಚಿನ ಶಿಕ್ಷಕರನ್ನು ನೆನಪಿಸಿಕೊಂಡು ಕಾಮೆಂಟ್‌ಗಳನ್ನು ಮಾಡಿದ್ದಾರೆ.
"ಜೆಇಇ ಸಿದ್ಧತೆಯ ಸಮಯದಲ್ಲಿ ನಾನು ತೀವ್ರ ಖಿನ್ನತೆಗೆ ಒಳಗಾಗಿದ್ದೆ. ಆ ಹೊತ್ತಿನಲ್ಲಿ ತಡರಾತ್ರಿ ಜೆಜೆ ಸರ್ ಅವರೊಂದಿಗೆ ಮಾತನಾಡಿದ ಒಂದು ಕರೆ ನನ್ನನ್ನು ಬದಲಾಯಿಸಿತು. ಅವರ ಉತ್ಸಾಹಕ್ಕೆ ಯಾರೂ ಸಾಟಿಯಿಲ್ಲ" ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. "ಕೆಲವು ಶಿಕ್ಷಕರು ಯಾವ ಕಾಲಕ್ಕೂ ಅಳಿಸಲಾಗದಂತಹ ಛಾಪು ಮೂಡಿಸುತ್ತಾರೆ. ಸರಿಯಾದ ಸಮಯದಲ್ಲಿ ಒಬ್ಬ ವ್ಯಕ್ತಿ ಆಡಿದ ಮಾತುಗಳು ಜೀವನಪೂರ್ತಿ ಹೇಗೆ ಉಳಿಯುತ್ತವೆ ಎಂಬುದಕ್ಕೆ ಇದೊಂದು ಸುಂದರ ಉದಾಹರಣೆ. ನಿಮ್ಮ ಸಾಧನೆಯನ್ನ ನೋಡಿ ಜೆಜೆ ಸರ್ ಅವರಿಗೆ ಖಂಡಿತ ಹೆಮ್ಮೆಯಾಗಿರುತ್ತದೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications
