ICICI - Videocon Loan Fraud Case: ಕೊಚ್ಚರ್ ದಂಪತಿ ಬಂಧನ ಕಾನೂನು ಪ್ರಕಾರ ಇಲ್ಲವೆಂದ ಹೈಕೋರ್ಟ್, ಜಾಮೀನು
ಮುಂಬೈ, ಜನವರಿ 09: ವಿಡಿಯೋಕಾನ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಿರಾಗಿದ್ದ ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ಜಾಮೀನು ನೀಡಿದೆ.
ವಿಡಿಯೋಕಾನ್ ಗ್ರೂಪ್‌ಗೆ ಒದಗಿಸಲಾಗಿದ್ದ ಸಾಲದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ತಮ್ಮನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಕೊಚ್ಚರ್ ದಂಪತಿ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದರು.
ನ್ಯಾಯಮೂರ್ತಿ ರೇವತಿ ಮೋಹಿತೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಕೆ ಚವಾಣ್ ಅವರ ವಿಭಾಗೀಯ ಪೀಠವು,' ಅರ್ಜಿದಾರರ ಬಂಧನವು ಕಾನೂನಿನ ಪ್ರಕಾರವಿಲ್ಲ ಮತ್ತು ಕ್ರಿಮಿನಲ್ ಕಾರ್ಯವಿಧಾನದ ಸಂಹಿತೆಯ ಸೆಕ್ಷನ್ 41 ಎಗೆ ಅನುಗುಣವಾಗಿಲ್ಲ' ಎಂದು ಹೇಳಿದೆ.

ವಿಡಿಯೋಕಾನ್-ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಡಿಸೆಂಬರ್ 23, 2022 ರಂದು ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ತಮ್ಮ ಪಾಸ್‌ಪೋರ್ಟ್‌ಗಳನ್ನು ಸಿಬಿಐಗೆ ಒಪ್ಪಿಸುವಂತೆಯೂ ಕೊಚ್ಚರ್ ದಂಪತಿಗಳಿಗೆ ನ್ಯಾಯಾಲಯ ತಿಳಿಸಿದೆ. ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ತಮ್ಮ ಬಂಧನವನ್ನು ಪ್ರಶ್ನಿಸಿ ಚಂದಾ ಕೊಚ್ಚರ್ ಮತ್ತು ಅವರ ಪತಿ ಸಲ್ಲಿಸಿದ ಅರ್ಜಿಗಳ ಮೇಲೆ ಈ ಆದೇಶವನ್ನು ನೀಡಲಾಗಿದೆ.
ಸಿಬಿಐ ಬಂಧನವು ಕಾನೂನುಬಾಹಿರವಾಗಿದೆ ಎಂದು ಇಬ್ಬರೂ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

2019 ರಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಂದಾ ಕೊಚ್ಚರ್, ದೀಪಕ್ ಕೊಚ್ಚಾರ್ ಮತ್ತು ವಿಡಿಯೋಕಾನ್ ಗ್ರೂಪ್ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರ ಹೆಸರನ್ನು ಸಿಬಿಐ ನಮೂದಿಸಿತ್ತು. ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ವಹಿಸುವ ನ್ಯೂಪವರ್ ರಿನ್ಯೂಬಲ್ಸ್ (ಎನ್‌ಆರ್‌ಎಲ್) ಅನ್ನು ಸಿಬಿಐ ಹೆಸರಿಸಿತ್ತು. ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸಿ ಈ ಕಂಪನಿಗಳಿಗೆ 3,250 ಕೋಟಿ ರೂ.ಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಎಂದು ಸಿಬಿಐ ಆರೋಪಿಸಿದೆ.












Click it and Unblock the Notifications