ಅಂಡಮಾನಿನಲ್ಲಿ ಹತ್ಯೆಯಾದ ಅಮೆರಿಕನ್ನನ ಶವ ಸಿಗೋದೇ ಅನುಮಾನ!
ಪೋರ್ಟ್ ಬ್ಲೇರ್(ಅಂಡಮಾನ್), ನವೆಂಬರ್ 23: ಅಂಡಮಾನಿನ ಸೆಂಟಿನಿಲೀಸ್ ಬುಡಕಟ್ಟು ಜನರಿಂದ ಹತ್ಯೆಗೊಳಗಾದ ಅಮೆರಿಕದ ಜಾನ್ ಅಲೆನ್ ಚೌ(27) ಅವರ ದೇಹವನ್ನು ಆದಷ್ಟು ಬೇಗ ಹುಡುಕದೆ ಇದ್ದರೆ ಅದು ಸಿಗುವುದೇ ಅನುಮಾನ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.
ಹೊರಗಡೆಯಿಂದ ಬರುವ ಯಾರನ್ನೂ ಸ್ವೀಕರಿಸಿದ ಸೆಂಟಿನಿಲೀಸ್ ಜನರೇ ಚೌ ನನ್ನು ಕೊಂದಿದ್ದಾರೆಂಬ ಅನುಮಾನದ ಮೇಲೆ ತನಿಖೆ ನಡೆಯುತ್ತಿದೆ. ಆದರೆ ಚೌ ಶವ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ತಮ್ಮ ದ್ವೀಪಕ್ಕೆ ಹೊರಗಿನಿಂದ ಬರುವವರನ್ನು ನಿರ್ದಯವಾಗಿ ಕೊಂದು ಹಾಕುವ ಸೆಂಟಿನಿಲೀಸ್ ಜನರು ವ್ಯಕ್ತಿಯ ಮೃತದೇಹವನ್ನು ಒಂದೆಡೆ ಹೂಳುತ್ತಾರೆ. ನಂತರ ಕೆಲ ದಿನಗಳ ನಂತರ ಆ ದೇಹವನ್ನು ಮತ್ತೆ ಹೂಳಿದ ಜಾಗದಿಂದ ತೆಗೆದು ಮತ್ತೊಮ್ಮೆ ಬೇರೆಡೆ ಹೂಳುತ್ತಾರೆ. ಹೊರಗಿನಿಂದ ಯಾರೇ ಬಂದರೂ ಅವರನ್ನು ನಿಷ್ಕಾರಣವಾಗಿ ಸಾಯಿಸಿ, ಹೂತುಹಾಕುವ ಮೂಲಕ ಆ ದ್ವೀಪಕ್ಕೆ ಮತ್ತ್ಯಾರೂ ಬಾರದಂತೆ ಎಚ್ಚರಿಕೆಯ ಗಂಟೆ ಬಾರಿಸುತ್ತಾರೆ.

ಚೌ ನ ದೇಹವನ್ನೂ ಈಗಾಗಲೇ ಹೂತಿಟ್ಟಿರುವ ಜಾಗದಿಂದ ಕೆಲದಿನಗಳ ನಂತರ ಬೇರೆಡೆಗೆ ಸಾಗಿಸುವ ಸಾಧ್ಯತೆ ಇರುವುದರಿಂದ ನಂತರ ದೇಹವನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗದಿರಬಹುದು. ಆದ್ದರಿಂದ ಆದಷ್ಟು ಶೀಘ್ರವಾಗಿ ಮೃತದೇಹ ಪತ್ತೆ ಮಾಡಬೇಕಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸಾಹಸ ಪ್ರವಾಸವನ್ನು ಇಷ್ಟಪಡುತ್ತಿದ್ದ ಚೌ, ಅಂಡಮಾನಿನ ನಿಷೇಧಿತ ದ್ವೀಪವೊಂದಕ್ಕೆ ಎಚ್ಚರಿಕೆಯ ಹೊರತಾಗಿಯೂ, ಮೀನುಗಾರರಿಗೆ ಹಣ ನೀಡಿ, ಒತ್ತಾಯಿಸಿ ಕರೆದುಕೊಂಡು ಹೋಗಿದ್ದರು. ಆದರೆ ಸೆಂಟಿನಿಲೀಸ್ ಬುಡಕಟ್ಟು ಜನರ ಬಾಣದ ದಾಳಿಗೆ ತುತ್ತಾಗಿ ಮೃತರಾದರು. ಅವರು ಕ್ರೈಸ್ತ ಮತ ಪ್ರಚಾರಕ್ಕೆ ಅಲ್ಲಿಗೆ ತೆರಳಿದ್ದರು ಎಂಬ ದೂರೂ ಕೇಳಿಬರುತ್ತಿದೆ.












Click it and Unblock the Notifications