ಜಲಾಶಯದಲ್ಲಿ ದೋಣಿ ದುರಂತ: ಮೃತರ ಸಂಖ್ಯೆ 24ಕ್ಕೆ
ಸಂಬಾಲಪುರ (ಒಡಿಶಾ), ಫೆ.10: ಸಾಮರ್ಥ್ಯಕ್ಕಿಂತ ಹೆಚ್ಚು ಜನರಿಂದ ತುಂಬಿದ್ದ ದೋಣಿ ಜಲಾಶಯದ ಮಧ್ಯೆ ಆಯತಪ್ಪಿ ಮುಳುಗಿ 24 ಮಂದಿ ಸಾವನ್ನು ಕಂಡಿದ್ದಾರೆ. ಒಡಿಶಾ ರಾಜ್ಯದ ಸಂಬಾಲಪುರ ಜಿಲ್ಲೆಯ ಬುರ್ಲಾದಲ್ಲಿರುವ ಹಿರಾಕುಡ್ ಜಲಾಶಯದಲ್ಲಿ ಈ ದುರಂತ ಸಂಭವಿಸಿದೆ.

ದೋಣಿಯಲ್ಲಿ 100ಕ್ಕೂ ಹೆಚ್ಚು ಮಂದಿ ವಿಹಾರಾರ್ಥ ಪ್ರಯಾಣಿಸುತ್ತಿದ್ದರು. ಮೃತಪಟ್ಟವರಲ್ಲಿ 5 ಮಂದಿ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಇದ್ದಾರೆ. 11 ಮಂದಿ ಕಾಣೆಯಾಗಿದ್ದು, ರಾತ್ರಿಯೇ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳೀಯರ ಪ್ರಕಾರ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚು ಎಂದು ತಿಳಿದುಬಂದಿದೆ.
ಸುಮಾರು 90 ಮಂದಿಯನ್ನು ನೀರಿನಿಂದ ಪಾರುಮಾಡಲಾಗಿದೆ. ಮಹಾನದಿಗೆ ಅಡ್ಡಲಾಗಿ ಕಟ್ಟಿರುವ ಹಿರಾಕುಡ್ ಜಲಾಶಯದಲ್ಲಿ ದೋಣಿ ಮಧ್ಯ ಭಾಗಕ್ಕೆ ಹೋದಾಗ ಈ ದುರಂತ ಸಂಭವಿಸಿದೆ.
ಹೇಗಾಯಿತು ಅನಾಹುತ:

ವಾರದ ರಜಾ ದಿನದಂದು ಪಿಕ್ನಿಕ್ ಹೋಗಿದ್ದವರು ಜಲಾಶಯ ಮತ್ತೊಂದು ಬದಿಯಿಂದ ವಾಪಸಾಗುವಾಗ ಭಾನುವಾರ ಸಂಜೆ 5 ಗಂಟೆಯಲ್ಲಿ ಈ ಅನಾಹುತ ನಡೆದಿದೆ. ದೋಣಿಯಲ್ಲಿ 60 ಮಂದಿಯಷ್ಟೇ ಪ್ರಯಾನಿಸಬಹುದಾಗಿತ್ತು.
ಆದರೆ ನೂರಕ್ಕೂ ಹೆಚ್ಚು ಮಂದಿಯ ದೋಣಿಯಲ್ಲಿದ್ದರು. ದೋಣಿಯಲ್ಲಿ ಜೀವರಕ್ಷಕ ಸಾಧನಗಳು ಯಾವುವೂ ಇರಲಿಲ್ಲ. ಜಲಾಶಯದ ಮಧ್ಯ ಭಾಗಕ್ಕೆ ವಾಪಸಾದಾಗ ದೋಣಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅದಾಗುತ್ತಿದ್ದಂತೆ ದೋಣಿಯಲ್ಲಿ ನೀರು ತುಂಬತೊಡಗಿದೆ. ಹಾಗಾಗಿ ದೋಣಿ ಪೂರ್ತಿ ಮುಳುಗಿದೆ.
ದೊಡ್ಡ ಪಿಕ್ನಿಕ್ ಸ್ಪಾಟ್: Hirakud reservoir ಒಡಿಶಾ ರಾಜ್ಯದ ಹೆಚ್ಚು ವಿಶಾಲ ಜಲಾಶಯ. ಇದರ ಮಧ್ಯೆ ಅನೇಕ ಸಣ್ಣ ಸಣ್ಣ ದ್ವೀಪಗಳಿವೆ. ಜನ ಪ್ರವಾಸಕ್ಕೆಂದು ಇಲ್ಲಿಗೆ ಹೆಚ್ಚಾಗಿ ಬರುತ್ತಿರುತ್ತಾರೆ. ಜಲಾಶಯದ ಮತ್ತೊಂದು ಬದಿಗೆ ವನ್ಯಜೀವಿ ಧಾಮವೂ ಇದೆ. ಜನ ದೋಣಿಯಲ್ಲಿ ತೆರಳಿ ವನ್ಯಜೀವಿಗಳನ್ನು ನೋಡಿಕೊಂಡು ಬರುತ್ತಾರೆ.












Click it and Unblock the Notifications