BMC Results 2026: ಠಾಕ್ರೆ ಆಡಳಿತಕ್ಕೆ ಬ್ರೇಕ್, ಬಿಜೆಪಿ ಮೈತ್ರಿಕೂಟದ ವಿಜಯೋತ್ಸವ, ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ
ಮುಂಬೈ: ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಬಹುಮುಖ್ಯವಾಗಿದ್ದ ಬಿಎಂಸಿ ಚುನಾವಣೆ ಫಲಿತಾಂಶ 2026 (BMC Elections Results 2026) ಇಂದು ಶುಕ್ರವಾರ ಪ್ರಕಟವಾಗಿತು. ಬಿಜೆಪಿ ನೇತೃತ್ವದ ಎನ್‌ಡಿಗೆ ಮೈತ್ರಿಕೂಟಕ್ಕೆ ಜನಾರ್ಶಿರ್ವಾದ ದೊರಕಿದೆ. ಎನ್‌ಡಿಎ 227 ಸ್ಥಾನಗಳ ಪೈಕಿ 112 ರಲ್ಲಿ ಗೆದ್ದು ಸ್ಥಳೀಯ ಅಧಿಕಾರ ಗದ್ದುಗೆ ಏರಿದೆ. ಉದ್ಧವ್ ಠಾಕ್ರೆ ಸಹೋದರ ಮೈತ್ರಿಕೂಟವು (SS+UBT) 77 ಸ್ಥಾನ ಗಳಿಸಿ ಪರಾಭವಗೊಂಡಿತು. ಇನ್ನೂ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ.
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಒಟ್ಟು 13 ಸ್ಥಾನಗಳಿಗಷ್ಟೇ ತೃಪ್ತಿ ಪಟ್ಟುಕೊಂಡಿತು. ಇನ್ನು 25 ಸೀಟುಗಳು ಇತರೆ ಪಕ್ಷಗಳ ಪಾಲಾಗಿವೆ. ಭಾರತದ ಶ್ರೀಮಂತ ಪುರಸಭೆ ಎಂದು ಪರಿಗಣಿಸಲ್ಪಡುವ ಮಹಾರಾಷ್ಟ್ರ ಸ್ಥಳೀಯ ಚುನಾವಣೆ ಫಲಿತಾಂಶವು ದೇಶಾದ್ಯಂತ ಗಮನ ಸೆಳೆದಿತ್ತು. ಇಂದಿನ ಫಲಿತಾಂಶದಲ್ಲಿ ಗೆದ್ದ ಬಿಜೆಪಿ ಮೈತ್ರಿಕೂಟವು 25 ವರ್ಷಗಳಿಂದ ಸ್ಥಳೀಯ ನಾಗರಿಕ ಸಂಸ್ಥೆಗಳಲ್ಲಿ ಆಡಳಿತ ನಡೆಸಿದ್ದ ಉದ್ಧವ್ ಠಾಕ್ರೆ ಆಡಳಿತಕ್ಕೆ ಪೂರ್ಣ ವಿರಾಮ ನೀಡಿತು.

ಚುನಾವಣೆ ಆಯೋಗದ ಪ್ರಕಾರ, 2869 ವಾರ್ಡ್‌ಗಳ ಪೈಕಿ 1281ಗೂ ಅಧಿಕ ವಾರ್ಡ್‌ಗಳಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿತು. ಒಟ್ಟು 29 ಮಹಾನಗರ ಪಾಲಿಕೆಗಳ ಪೈಕಿ 21ರಲ್ಲಿ ಅಧಿಕಾರ ಹಿಡಿದು ಕೇಸರಿ ಪಡೆ ಬೀಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 360 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತು. ಉದ್ಧವ್ ಠಾಕ್ರೆ ಬಣದ ಶಿವಸೇನೆಯು 147 ಸ್ಥಾನಗಳಿಗೆ ಮಾತ್ರವೇ ಸಿಮೀತವಾಯಿತು. ಇನ್ನೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 122 ಸ್ಥಾನ ಗಳಿಸಿ ಕೊನೆ ಸ್ಥಾನದಲ್ಲಿ ಉಳಿಯಿತು.
ಕಣದಲ್ಲಿದ್ದದ್ದು 1700 ಅಭ್ಯರ್ಥಿಗಳು
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಾಲ್ಕು ವರ್ಷ ವಿಳಂಬವಾಗಿದ್ದ ಹಾಗೂ ಒಂಬತ್ತು ವರ್ಷಗಳ ನಂತರ ನಡೆದ ಮಹಾರಾಷ್ಟ್ರ ಬಿಎಂಸಿ ಚುನಾವಣೆಯ 227 ಸ್ಥಾನಗಳಿಗೆ 1700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಎಂಸಿಯ ವಾರ್ಷಿಕ ಬಜೆಟ್ 74,400 ಕೋಟಿ ರೂಪಾಯಿ ಆಗಿದೆ. ಹೀಗಾಗಿ ಇದನ್ನು ದೇಶದ ಶ್ರೀಮಂತ ಪುರಸಭೆಗಳೆಂದು ಪರಿಗಣಿಸಲಾಗಿದೆ.
ಗುರುವಾರ ಜನವರಿ 15ರಂದು ಬೆಳಗ್ಗೆ 7.30ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಿತು. 2017ರಲ್ಲಿ ಇದೇ ಬಿಎಂಸಿ ಚುನಾವಣೆಯಲ್ಲಿ ಒಟ್ಟು ಶೇ. 55.53ರಷ್ಟು ಮತದಾನವಾಗಿತ್ತು. 2026ರಲ್ಲಿ ಶೇಕಡಾ 52.94ರಷ್ಟು ಮಾತ್ರವೇ ಮತದಾನ ನಡೆದಿದೆ. ಈ ಮೂಲಕ ನಿರೀಕ್ಷೆಗಿಂತ ಕಡಿಮೆ ಮತದಾನ ದಾಖಲಾಯಿತು. ಇಂದು ಶುಕ್ರವಾರ (ಜನವರಿ 16) ರಂದು ಬಿಎಂಸಿ ಚುನಾವಣೆ ಫಲಿತಾಂಶ ಪ್ರಕಟವಾಯಿತು.
(ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಪೂರ್ಣ ಫಲಿತಾಂಶ ಪ್ರಕಟವಾಗಿರಲಿಲ್ಲ. ಚುನಾವಣೆ ಫಲಿತಾಂಶ ಅಧಿಕೃತ ಮಾಹಿತಿ ಹೊರಡಿಸಿದ ನಂತರ ಈ ಸುದ್ದಿಯಲ್ಲಿ ಅಂಕಿ ಸಂಖ್ಯೆಗಳು ಅಪ್ಡೇಟ್ ಆಗಲಿವೆ)












Click it and Unblock the Notifications