ಬಿಎಂಸಿ: ಹೊಸ ಇತಿಹಾಸ ಬರೆದ ಬಿಜೆಪಿ, ಠಾಕ್ರೆ ಕುಟುಂಬಕ್ಕೆ ಮುಖಭಂಗ
ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿಯು ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಬಿಎಂಸಿ ಭಾರತದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ಪಾಲಿಕೆಯಾಗಿದೆ. ಮಾತ್ರವಲ್ಲ ಬಿಎಂಸಿಯು ಏಷ್ಯಾದಲ್ಲೇ ದೊಡ್ಡ ಪಾಲಿಕೆಯಾಗಿದೆ. ಇದೀಗ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ಭಾರೀ ಮುನ್ನಡೆ ಸಾಧಿಸಿದ್ದು, ಮುಂಬೈ ಮಹಾನಗರ ಪಾಲಿಕೆಯ ಇತಿಹಾಸ ಸೃಷ್ಟಿ ಮಾಡಲು ಒಂದೇ ಹೆಜ್ಜೆ ಬಾಕಿ ಉಳಿದಿದೆ. ಬಿಎಂಸಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಮುಂಬೈ ಮೇಯರ್ ಆಗಿ ಇತಿಹಾಸವನ್ನು ಬಿಜೆಪಿ ನಿರ್ಮಿಸಲು ಮುಂದಾಗಿದೆ. ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು (ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ ಶಿಂಧೆ ನೇತೃತ್ವದ ಮಹಾಯುತಿ ಮೈತ್ರಿಕೂಟವು) ಬರೋಬ್ಬರಿ 120 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಒಟ್ಟು 227 ವಾರ್ಡ್‌ಗಳಿಗೆ ಈ ಬಾರಿ ಚುನಾವಣೆ ನಡೆದಿತ್ತು. ಈ ಪಾಲಿಕೆಯ ಬಹುಮತಕ್ಕೆ 114 ಸ್ಥಾನಗಳ ಅಗತ್ಯವಿದೆ. ಇದೀಗ ಮಹಾಯುತಿ ಮೈತ್ರಿಕೂಟವು 118 ವಾರ್ಡ್‌ಗಳಲ್ಲಿ ಬಿಜೆಪಿ ಮೈತ್ರಿಕೂಟವು ಗೆಲುವು ಸಾಧಿಸಿದ್ದು, ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಮುಂಬೈ ಮಹಾನಗರ ಪಾಲಿಕೆಯ ಮೊದಲ ಬಿಜೆಪಿ ಮೇಯರ್ ಆಯ್ಕೆಗೆ ಹಾದಿ ಸುಗಮವಾಗಿದೆ.

30 ವರ್ಷಗಳ ಭದ್ರಕೋಟೆ ಛಿದ್ರ ಮಾಡಿದ ಬಿಜೆಪಿ
ಇನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆಯ 227 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಬರೋಬ್ಬರಿ 1,700 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಪಾಲಿಕೆಗಳ ಚುನಾವಣೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ ಇತಿಹಾಸಕ್ಕೆ ಸೇರ್ಪಡೆಯಾಗಿದೆ. ಐತಿಹಾಸಿಕವಾದ ಮತ್ತು ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಗಳಲ್ಲಿ ಒಂದಾಗಿರುವ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಆಗಿ ಒಮ್ಮೆಯೂ ಬಿಜೆಪಿಯ ನಾಯಕರು ಆಯ್ಕೆಯಾಗಿರಲಿಲ್ಲ. ಮೇಯರ್ ಸ್ಥಾನವನ್ನು ಕಾಂಗ್ರೆಸ್, ಶಿವಸೇನೆ ಹಾಗೂ ಆರ್‌ಪಿಐ ಹೊಂದಿತ್ತು. 1997ರಿಂದ 2017ರವರೆಗೂ ಮುಂಬೈ ಮಹಾನಗರ ಪಾಲಿಕೆಗೆ ಶಿವಸೇನೆ ನಾಯಕ ಮೇಯರ್ ಆಗಿದ್ದರು. ಸುದೀರ್ಘ 30 ವರ್ಷಗಳ ಆಡಳಿತ ಇದೀಗ ಅಂತ್ಯವಾಗುತ್ತಿದೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.
ಎರಡು ದಶಕಗಳ ನಂತರ ಒಂದಾಗಿದ್ದ ಠಾಕ್ರೆ ಕುಟುಂಬ
ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯು ಹಲವು ಕಾರಣಗಳಿಗೆ ಸುದ್ದಿಯಾಗಿತ್ತು. ಅದರಲ್ಲಿ ಮುಖ್ಯವಾಗಿ ಸುದೀರ್ಘ 20 ವರ್ಷಗಳ ನಂತರ ಠಾಕ್ರೆ ಸಹೋದರರು ಒಂದಾಗಿದ್ದರು. ಬಿಎಂಸಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದಾಗಿದ್ದರು. ಬಿಎಂಸಿ ಚುನಾವಣೆಯನ್ನು ಒಂದಾಗಿ ಎದುರಿಸಿದ್ದರು. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಶಿವಸೇನೆ(ಯುಬಿಟಿ) ಎಚ್ಚೆತ್ತುಕೊಂಡಿತ್ತು. ಮತ ವಿಭಜನೆ ತಪ್ಪಿಸುವುದು ಹಾಗೂ ಮಹಾಯುತಿ ಮೈತ್ರಿಕೂಟದ ಸವಾಲನ್ನು ಎದುರಿಸುವ ಉದ್ದೇಶದಿಂದ ಎಂಎನ್‌ಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಇನ್ನು 2006ರಲ್ಲಿ ರಾಜ್ ಠಾಕ್ರೆ ಅವರ ತಮ್ಮ ಸೋದರಸಂಬಂಧಿ ಉದ್ಧವ್ ಠಾಕ್ರೆ ಅವರನ್ನು ಅವಿಭಜಿತ ಶಿವಸೇನೆಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕಾಗಿ ಅಸಮಾಧಾನಕ್ಕೆ ಒಳಗಾಗಿದ್ದರು. ಹೀಗಾಗಿ, ಪಕ್ಷದಿಂದ ಹೊರಬಂದಿದ್ದ ಅವರು ಎಂಎನ್‌ಎಸ್ ಪಕ್ಷವನ್ನು ಸ್ಥಾಪಿಸಿದ್ದರು.












Click it and Unblock the Notifications