2030ಕ್ಕೂ ಮುನ್ನವೇ ಅರಳಿದ ನೀಲಕುರಿಂಜಿ: ನೀಲಿಮಯವಾಯ್ತು ಮುನ್ನಾರ್‌ನ ಚೋಕ್ರಮುಡಿ ಬೆಟ್ಟ
Blue Neelakurinji Flowers: ಮುನ್ನಾರ್ ಕೇರಳದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಜನಪ್ರಿಯ ಗಿರಿಧಾಮಗಳಲ್ಲಿ ಒಂದು. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ. ವಿದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅಂದಹಾಗೆ, ಇದು ಭಾರತದ ಪ್ರಸಿದ್ದ ಹನಿಮೂನ್ ತಾಣಗಳಲ್ಲಿಯೂ ಒಂದಾಗಿದೆ. ನವ ವಿವಾಹತಿ ಜೋಡಿಗಳು ಹೆಚ್ಚಾಗಿ ಇಲ್ಲಿನ ಹಿಲ್ ಸ್ಟೇಶನ್‌ಗೆ ಭೇಟಿ ನೀಡುತ್ತಾರೆ.
ಎರವಿಕುಲಂನಲ್ಲಿ ಅರಳಿ ನಿಂತ ನೀಲಕುರಿಂಜಿ (Blue Neelakurinji Flowers)
ಮುನ್ನಾರ್‌ನಲ್ಲಿ ನೋಡುವುದಕ್ಕೆ ಅನೇಕ ಸ್ಥಳಗಳಿವೆ. ಆದರೆ ಇಲ್ಲಿಗೆ ಬಂದಾಗ ಜನರು ತಪ್ಪದೇ ನೋಡುವುದಕ್ಕೆ ಇಷ್ಟಪಡುವ ಜಾಗ ಎಂದರೆ ಎರವಿಕುಲಂ ರಾಷ್ಟ್ರೀಯ ಉದ್ಯಾನವನ. ಇಲ್ಲಿ ಅರಳಿ ನಿಲ್ಲುವ ನೀಲಕುರಿಂಜಿ ಹೂವೇ ಇಲ್ಲಿನ ಅತ್ಯಾಕರ್ಷಣೆ. ಇದು ಪ್ರತಿ 12 ವರ್ಷಗಳಿಗೊಮ್ಮೆ ಅರಳಿ ಕಂಪು ಸೂಸುತ್ತದೆ. 2018 ರಲ್ಲಿ ಇಲ್ಲಿ ನೀಲಕುರಿಂಜಿ ಹೂವು ಅರಳಿತ್ತು. ಲೆಕ್ಕ ಪ್ರಕಾರ ಮತ್ತೆ ಈ ಹೂವು ಅರಳುವುದು 12 ವರ್ಷಗಳ ಬಳಿಕ ಅಂದರೆ 2030 ರಲ್ಲಿ. ನೀಲಕುರಿಂಜಿ ಅಸಾಮಾನ್ಯ ಜೀವನ ಚಕ್ರಕ್ಕೆ ಹೆಸರುವಾಸಿ. ಈ ಸಸ್ಯವು ಸಾಯುವ ಮೊದಲು ಒಮ್ಮೆ ಮಾತ್ರ ಹೂಬಿಡುತ್ತದೆ. ನಂತರ ಅದರ ಬೀಜಗಳು ಮಣ್ಣಿನಲ್ಲಿ ಸೇರಿ ಮೊಳಕೆಯೊಡೆದು ಸಸಿಯಾಗಿ ಆ ಸಸಿ ಹೂ ಬಿಡಲು 12 ವರ್ಷಗಳು ಬೇಕು. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ 2018ಕ್ಕೆ ಈ ಸಸ್ಯ ಹೂ ಬಿಟ್ಟ ಕಾರಣದಿಂದ ಮತ್ತೆ ಹೂವು ಅರಳಿ ನಿಲ್ಲಿವುದು 2030 ಕ್ಕೆ.

ನಾಲ್ಕು ವರ್ಷಗಳ ಮೊದಲೇ ಕಂಡ ದೃಶ್ಯ ವೈಭವ (Blue Neelakurinji Flowers)
ಆದರೆ ಈ ಬಾರಿ ಆಶ್ಚರ್ಯ ಎನ್ನುವಂತೆ ನಾಲ್ಕು ವರ್ಷಗಳ ಮೊದಲೇ ಅಂದರೆ ಜುಲೈನಲ್ಲಿಯೇ ಚೋಕ್ರಮುಡಿ ಮತ್ತು ಮಟ್ಟುಪೆಟ್ಟಿಯ ಸುತ್ತಮುತ್ತಲಿನ ಇಳಿಜಾರಿನಲ್ಲಿ ನೀಲಕುರಿಂಜಿ ಹೂವುಗಳು ಅರಳಲು ಪ್ರಾರಂಭಿಸಿವೆ. ಅಂದರೆ ನಿರೀಕ್ಷೆಗಿಂತ ನಾಲ್ಕು ವರ್ಷಗಳ ಮೊದಲೇ ಈ ಹೂವು ಅರಳಿ ನಿಂತಿದೆ.
ಅಂದ ಹಾಗೆ ಪಶ್ಚಿಮ ಘಟ್ಟಗಳ ಶೋಲಾ ಹುಲ್ಲುಗಾವಲುಗಳಲ್ಲಿ ನೀಲಕುರಿಂಜಿಯ ಬೇರೆ ಬೇರೆ ಪ್ರಭೇದದ ಸಸ್ಯಗಳು ಇವೆ. ಅವೆಲ್ಲವೂ ಒಂದೇ ವರ್ಷದಲ್ಲಿ ಅರಳುವುದಿಲ್ಲ. ಈ ಪ್ರತೀ ಪ್ರಭೇದದ ಸಸ್ಯಗಳು ಹೂವು ಬಿಡುವುದಕ್ಕೆ 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮಟ್ಟುಪೆಟ್ಟಿ-ಕನ್ನಿಮಲದಲ್ಲಿ 1990, 2002 ಮತ್ತು 2014 ರಲ್ಲಿ ಅರಳಿದ್ದ ತಳಿಯ ಹೂವುಗಳು ಈಗ ಅಂದರೆ 2026ರಲ್ಲಿ ಮತ್ತೆ ಕಂಪು ಸೂಸಿವೆ. ಚೋಕ್ರಮುಡಿ -ಕೊಡೈಕನಾಲ್-ಪೂಂಡಿ ತಳಿಯು ಕೂಡಾ 2014 ರಲ್ಲಿ ಹೂ ಬಿಟ್ಟಿತು. ಅಂದರೆ ಇದರ ಸಸ್ಯ ಈಗ ಮತ್ತೆ ಹೂ ಬಿಡುತ್ತಿದೆ.
2018 ರಲ್ಲಿಎರವಿಕುಲಂ ರಾಷ್ಟ್ರೀಯ ಉದ್ಯಾನವನದೊಳಗೆ ಅದ್ಭುತವಾಗಿ ಅರಳಿ ನಿಂತಿದ್ದ ತಳಿ ಮುಂದಿನ ಬಾರಿ 2030ರಲ್ಲೇ ಮತ್ತೆ ಅರಳಲಿದೆ.
ಈ ಸಸ್ಯದ ತಮಿಳು ಹೆಸರು ನೀಲಾ ಅಂದರೆ ನೀಲಿ. ಕುರಿಂಜಿ ಅಂದರೆ ಪರ್ವತದ ಹೂವು. ಇದು ನೀಲಗಿರಿ ಅಥವಾ ನೀಲಿ ಪರ್ವತಗಳು ಎಂಬ ಹೆಸರಿನೊಂದಿಗೂ ಸಂಬಂಧ ಹೊಂದಿದೆ. ಅಕಾಂತೇಸಿ ಫ್ಯಾಮಿಲಿಗೆ ಸೇರಿದ ಈ ನೀಲಕುರಿಂಜಿ ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ 1,500 ರಿಂದ 2,500 ಮೀಟರ್ ಎತ್ತರದಲ್ಲಿ, ಪಶ್ಚಿಮ ಘಟ್ಟಗಳ ಎತ್ತರದ ಹುಲ್ಲುಗಾವಲುಗಳಲ್ಲಿ ಬೆಳೆಯುತ್ತದೆ.
ಮುನ್ನಾರ್ ದೇಶದಲ್ಲಿ ಅತಿ ಹೆಚ್ಚು ನೀಲಕುರಿಂಜಿ (Blue Neelakurinji Flowers)
ಭಾರತದಲ್ಲಿ ದಾಖಲಾಗಿರುವ 146 ಸ್ಟ್ರೋಬಿಲಾಂಥೆಸ್ ಪ್ರಭೇದಗಳಲ್ಲಿ ಸುಮಾರು 43 ಪ್ರಭೇದಗಳು ಕೇರಳದ ಬೆಟ್ಟಗಳಲ್ಲಿ ನೆಲೆಗೊಂಡಿವೆ. ಅದರಲ್ಲಿಯೂ ಮುನ್ನಾರ್ ದೇಶದಲ್ಲಿ ಅತಿ ಹೆಚ್ಚು ನೀಲಕುರಿಂಜಿ ಸಸ್ಯಗಳಿವೆ. ಈ ಹೂವುಗಳು ಸುಮಾರು 3,000 ಹೆಕ್ಟೇರ್ ಬೆಟ್ಟದ ಇಳಿಜಾರಿನಲ್ಲಿ ಹರಡಿವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮಟ್ಟುಪೆಟ್ಟಿ ಬಳಿಯ ಎಡಲಿಮೇಡು, ಸೆವೆನ್ಮಲ, ಗುಂಡಮಲ ಮತ್ತು ಮೀಸಪುಲಿಮಲದ ಎತ್ತರದ ಪ್ರದೇಶಗಳಿಗೆ ಹೂವು ಹರಡುವ ನಿರೀಕ್ಷೆಯಿದೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.
ಸ್ಥಳೀಯರು 2025 ರಲ್ಲಿಯೇ ಈ ಹೂವಿನ ಸಣ್ಣ ಸಮೂಹಗಳನ್ನು ಗುರುತಿಸಿದ್ದರು. ಈ ಪ್ರದೇಶದ ಬುಡಕಟ್ಟು ಸಮುದಾಯಗಳು ಈ ಆರಂಭಿಕ ಹೂವುಗಳನ್ನು ಕಲ್ಲಪೂವ್ ಎಂದು ಕರೆಯುತ್ತವೆ. ಇವು ಮುಖ್ಯ ಹೂಬಿಡುವ ಋತುವಿನ ಮೊದಲು ಕಾಣಿಸಿಕೊಳ್ಳುವ ಹೂವಾಗಿರುತ್ತದೆ. ಈ ವರ್ಷ ಮುನ್ನಾರ್‌ಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಎರವಿಕುಲಂ ರಾಷ್ಟ್ರೀಯ ಉದ್ಯಾನವನದತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು.
ಜನಸಂದಣಿ ನಿರ್ವಹಣೆಗೆ ಶತ ಪ್ರಯತ್ನ
ನಿರೀಕ್ಷಿತ ಜನಸಂದಣಿಯನ್ನು ನಿರ್ವಹಿಸಲು ಇಡುಕ್ಕಿ ಜಿಲ್ಲಾಡಳಿತವು ಕೇರಳ ಅರಣ್ಯ ಅಭಿವೃದ್ಧಿ ನಿಗಮ ಮತ್ತು ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿಯೊಂದಿಗೆ ಕೆಲಸ ಮಾಡುತ್ತಿದೆ. ಆನ್‌ಲೈನ್ ಸಂದರ್ಶಕರ ಸ್ಲಾಟ್‌ಗಳು ಮತ್ತು ಹೆಚ್ಚುವರಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳನ್ನು ಯೋಜಿಸಲಾಗಿದೆ. ಆದರೂ ಅಂತಿಮ ಬುಕಿಂಗ್ ಪ್ರಕ್ರಿಯೆಯನ್ನು ಇನ್ನೂ ಘೋಷಿಸಲಾಗಿಲ್ಲ.
ಪ್ರವಾಸಿಗರಿಗಿದೆ ಮಾರ್ಗಸೂಚಿ
ಇಲ್ಲಿ ಮೀಸಪುಲಿಮಲ ಸೇರಿದಂತೆ ಕೆಲವು ಪರಿಸರ ಸೂಕ್ಷ್ಮ ಪ್ರದೇಶಗಳಿವೆ. ಹೀಗಾಗಿ ಇಲ್ಲಿ ಬರುವ ಪ್ರವಾಸಿಗರಿಗೆ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅವುಗಳೆಂದರೆ ಹೂಗಳನ್ನು ಕೀಳಬಾರದು, ತುಳಿಯಬಾರದು. ಪ್ರವಾಸಿಗರಿಗೆ ನಿಗದಿ ಮಾಡಿದ ಕಾಲುದಾರಿಗಳಲ್ಲಷ್ಟೇ ಸಂಚರಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲಿ ಎಸೆಯುವಂತಿಲ್ಲ. ಅದನ್ನು ಹಿಂತಿರುಗಿ ತರಬೇಕು.
ಚೋಕ್ರಮುಡಿಯಲ್ಲಿ ಈಗ ಅರಳುತ್ತಿರುವ ಹೂವುಗಳು ಇನ್ನು 12 ವರ್ಷಗಳ ನಂತರವೇ ಮತ್ತೆ ಅರಳುವುದು. ಈ ಚಕ್ರದಲ್ಲಿ ಉತ್ಪತ್ತಿಯಾಗುವ ಬೀಜಗಳು ಸಸಿಯಾಗಿ ಮತ್ತೆ ಹೂವು ಇಡುವುದು 2038ದ ಹೊತ್ತಿಗೆಯೇ. ಈ ದೃಶ್ಯವು ಕೇವಲ ಒಂದು ಋತುವಿನಲ್ಲಿ ಮಾತ್ರ ಇರುತ್ತದೆ.
2018ರ ಮುನ್ನಾರ್ ನ ನೀಲಿ ಬೆಟ್ಟಗಳನ್ನು ನೆನಪಿಸಿಕೊಳ್ಳುವವರು ಆ ನಿರ್ದಿಷ್ಟ ತಳಿಯ ಹೂವನ್ನು ಮತ್ತೆ ಕಣ್ತುಬಿಕೊಳ್ಳಬೇಕಾದರೆ ಮತ್ತೆ ಅರಳುವುದನ್ನು ನೋಡಲು 2030ರವರೆಗೆ ಕಾಯಲೇಬೇಕಾಗಬಹುದು.
ಆದರೆ ಈ ವರ್ಷ ಚೋಕ್ರಮುಡಿಯ ಇಳಿಜಾರುಗಳಲ್ಲಿ, ಮತ್ತೊಂದು ತಳಿ ಹೂವು ಬಿಟ್ಟಿದೆ. ಈ ಮೂಲಕ ನೀಲಕುರಿಂಜಿ ಬೆಟ್ಟ ಅಪರೂಪದ ದೃಶ್ಯ ವೈಭವದಿಂದ ತುಂಬಿದೆ.


Click it and Unblock the Notifications
