ಸಿಬಿಐ ಕಾಂಗ್ರೆಸ್‌ಗಾಗಿ ಹೋರಾಡುತ್ತಿದೆ : ಮೋದಿ
ಭೋಪಾಲ್, ಸೆ.25 : ಬಿಜೆಪಿ ನಾಯಕರು ಬುಧವಾರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭೋಪಾಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಮಹಾಕುಂಭ ಸಮಾವೇಶದಲ್ಲಿ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಭೋಪಾಲ್ ಜಂಬೂರೀ ಮೈದಾನ ಬುಧವಾರ ಕೇಸರಿ ಮಯವಾಗಿತ್ತು. ಸುಮಾರು 2 ಲಕ್ಷಕ್ಕೂ ಅಧಿಕ ಜನರು ಸೇರಿದ್ದ ಮೈದಾನದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಮುಂತಾದವರು ಸಮಾವೇಶದಲ್ಲಿ ಯುಪಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್ ವಿರುದ್ಧ ಗುಡುಗಿದ ಮೋದಿ : ಪಂಜರದ ಗಿಳಿಯಂತೆ ಕಾರ್ಯನಿರ್ವಹಿಸುತ್ತಿರುವ ಸಿಬಿಐ, ಕಾಂಗ್ರೆಸ್ ಕೈಗೊಂಬೆಯಾಗಿ ಕಾಂಗ್ರೆಸ್ ಪರ ಹೋರಾಡುತ್ತಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಸಿಬಿಐ ಕಾಂಗ್ರೆಸ್‌ಗಾಗಿ ಹೋರಾಡುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ದೇಶದಲ್ಲಿ ಸುಮಾರು 60 ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಪಕ್ಷ ಸಾಧಿಸಿದ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು?
ಸ್ವಾತಂತ್ರ ನಂತರ ಭಾರತದಲ್ಲಿ ಕಾಂಗ್ರೆಸ್ ಕಿತ್ತುಹಾಕಬೇಕು ಎಂಬುದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಆಶಯವಾಗಿತ್ತು. ಆದರೆ ಕಾಂಗ್ರೆಸ್ ಗಾಂಧಿ ಅವರ ಆಶಯದಂತೆ ನಡೆದುಕೊಂಡಿಲ್ಲ. ಹೀಗಾಗಿ ಮಹಾತ್ಮನ ಆಶಯದಂತೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಸರ್ಕಾರ ಅಧಿಕಾರಕ್ಕೆ ತರಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 10 ವರ್ಷಗಳ ಆಡಳಿತಾವಧಿಯಲ್ಲಿ ಮಧ್ಯಪ್ರದೇಶದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಾಂಗ್ರೆಸೇತರ ಅಧಿಕಾರ ಹೊಂದಿರುವ ರಾಜ್ಯಗಳಲ್ಲಿ ಅಭಿವೃದ್ಧಿಯಾಗಿದೆ ಎಂದು ಮೋದಿ ವಿವರಿಸಿದರು.
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ನಮ್ಮೆಲ್ಲರಿಗೂ 'ಮಾರ್ಗದರ್ಶಿ ದೀಪ'ವಿದ್ದಂತೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡೋಣ ಎಂದು ಮೋದಿ ಹೇಳುವ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿದರು.
ಯುಪಿಎ ತನ್ನ ದಾಖಲೆ ತಾನೇ ಮುರಿಯುತ್ತಿದೆ : ಸಮಾವೇಶಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಯುಪಿಎ ಭ್ರಷ್ಟಾಚಾರದಲ್ಲಿ ತನ್ನ ಸಾಧನೆಯನ್ನು ತಾನೇ ಮುರಿದು ಹೊಸ-ಹೊಸ ಹಗರಣಗಳನ್ನು ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಯುಪಿಎ ಆಡಳಿತಾವಧಿಯಲ್ಲಿ ದೇಶದ ಅಭಿವೃದ್ದಿಗಿಂತ ಭ್ರಷ್ಟಾಚಾರದ ದಾಖಲೆಯೇ ಹೆಚ್ಚಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲಿದ್ದು, ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಸಮಾವೇಶದಲ್ಲಿ ನೆರೆದಿರುವ ಅಪಾರ ಜನಸ್ತೋಮ ನೋಡಿದರೆ ಇದು ಬದಲಾವಣೆಯ ಸಂಕೇತವಾಗಿ ಕಾಣುತ್ತಿದೆ. ಬಿಜೆಪಿಗೆ ಸದಾ ವಿಪಕ್ಷದವರೆಂದು ಕರೆಯಿಸಿಕೊಳ್ಳವ ಇಚ್ಛೆಯೇನಿಲ್ಲ, ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಪಕ್ಷದ ಪ್ರಧಾನಿ ಅಭ್ಯರ್ಥಿ ವೇದಿಕೆಯಲ್ಲಿರುವುದು ನನಗೆ ಗೌರವವಿದೆ. ಉತ್ತಮ ಕೆಲಸಗಳಿಂದಾಗಿ ಪಕ್ಷ ಈ ಸ್ಥಾನಕ್ಕೆ ತಲುಪಿದೆ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಬಗ್ಗೆ ನನಗೆ ಮೆಚ್ಚುಗೆಯಿದೆ. ಗುಜರಾತ್‌ನಲ್ಲಿ ಮೋದಿ ಅವರು ಮಾಡಿರುವ ಅಭಿವೃದ್ಧಿ ಇತರ ರಾಜ್ಯಗಳಿಗೂ ಪ್ರೇರಣೆಯಾಗಿದೆ ಎಂದರು.
ಮೋದಿ ಮೋಡಿ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಎಲ್.ಕೆ.ಅಡ್ವಾಣಿ ಸಮಾವೇಶದಲ್ಲಿ ಒಂದೇ ವೇದಿಕೆ ಹಂಚಿಕೊಂಡರು. ವೇದಿಕೆಯಲ್ಲಿಯೇ ಅಡ್ವಾಣಿ ಕಾಲು ಮುಟ್ಟಿ ನಮಸ್ಕರಿದ ಮೋದಿ ನೆರೆದಿದ್ದ ಲಕ್ಷಾಂತರ ಜನರಿಂದ ಚಪ್ಪಾಳೆ ಗಿಟ್ಟಿಸಿದರು.
ಉಮಾ ಭಾರತಿ ತರಾಟೆ : ಸಮಾವೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ರಾಹುಲ್ ಗಾಂಧಿ ಬಡವರ ಮನೆಗೆ ಹೋಗುವುದನ್ನು ಅಭಿವೃದ್ಧಿ ಎಂದು ಕರೆಯಬಹದುದೇ ಎಂದು ಟೀಕಿಸಿದರು.












Click it and Unblock the Notifications