ಕೊಚ್ಚಿನ್ ಕಾರ್ನಿವಲ್‌ನಲ್ಲಿ ಸುಟ್ಟು ಬೂದಿಯಾಗುವುದಕ್ಕೆ ಸಿದ್ಧಗೊಂಡ ಮೋದಿ ಮುಖದ ಪಪ್ಪಾಂಜಿ: ಕೇರಳದಲ್ಲಿ ಹೊತ್ತಿಕೊಂಡ ವಿವಾದ
ಕೊಚ್ಚಿ, ಡಿಸೆಂಬರ್ 30: ಕೇರಳದ ಅತಿ ದೊಡ್ಡ ಪ್ರವಾಸಿ ಆಕರ್ಷಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಚ್ಚಿ ಕಾರ್ನಿವಲ್ ಗುರುವಾರ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದ ಭಾಗವಾಗಿ ನಿರ್ಮಿಸಲಾಗಿರುವ ಪಪ್ಪಾಂಜಿ(ಪ್ರತಿಕೃತಿ) ಮುಖವು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಿದೆ.
ಪಪ್ಪಂಜಿಯು ಸಂತಾ ತರಹದ ಉದ್ದನೆಯ ಗಡ್ಡದ ವ್ಯಕ್ತಿಯಾಗಿದ್ದು, ಪ್ರಸಿದ್ಧ ಕಲಾವಿದರಿಂದ ಪ್ರತಿ ವರ್ಷ ವಿಶಿಷ್ಟವಾಗಿ ವಿನ್ಯಾಸಗೊಂಡಿದೆ. ಇದು ಪ್ರಸ್ತುತ ಸಾಮಾಜಿಕ ಬೆಳವಣಿಗಗಳ ಕುರಿತು ಬೆಳಕು ಚೆಲ್ಲುತ್ತದೆ.

ಮೊದಲ ದಿನದ ರಾತ್ರಿಯಲ್ಲಿ ಸುಟ್ಟು ಬೂದಿಯಾಗುವ ಪಪ್ಪಾಂಜಿ
ಹೊಸ ವರ್ಷದ, ಮೊದಲ ದಿನದ ರಾತ್ರಿಯಲ್ಲಿ ಪ್ರತಿಕೃತಿಯನ್ನು ಬೆಂಕಿಗೆ ಹಾಕಲಾಗುತ್ತದೆ. ಇದು ಕಾರ್ನಿವಾಲ್‌ನ ವಿಶಿಷ್ಠತೆಯನ್ನು ತೋರಿಸುತ್ತದೆ. ಕಳೆದ ವರ್ಷದ ಎಲ್ಲಾ ಸಂಕಷ್ಟಗಳನ್ನು ಸುಟ್ಟುಹಾಕುವ ರೂಪಕವನ್ನು ಪ್ರತಿಕೃತಿಯ ದಹನದಿಂದ ಕಟ್ಟಿಕೊಡಲಾಗುತ್ತದೆ.
ಸ್ಥಳೀಯ ಬಿಜೆಪಿ ಕಾರ್ಯಕರ್ತರು ಫೋರ್ಟ್ ಕೊಚ್ಚಿ ಬೀಚ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಅಲ್ಲಿ ಕಲಾವಿದರು 65 ಅಡಿ ಪ್ರತಿಕೃತಿಯನ್ನು ಸ್ಥಾಪಿಸಿದ್ದಾರೆ.

ಪ್ರಧಾನ ಮಂತ್ರಿಗೆ ಅವಮಾನ ಎಂದ ಬಿಜೆಪಿ
ಪ್ರತಿಭಟನೆಯ ನಂತರ ಮುಖವನ್ನು ಬದಲಾಯಿಸಲು ಕಾರ್ನಿವಲ್ ಸಂಘಟಕರು ಒಪ್ಪಿಕೊಂಡಿದ್ದಾರೆ ಎಂದು ಕೇಸರಿ ಪಕ್ಷವು ಹೇಳಿಕೊಂಡಿದೆ.
ಪ್ರಧಾನ ಮಂತ್ರಿಯನ್ನು ಅವಮಾನಿಸುವ ಮತ್ತು ವಾರ್ಷಿಕ ಕಾರ್ಯಕ್ರಮದ ಶಾಂತಿಯುತ ನಡವಳಿಕೆಗೆ ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ಬಿಜೆಪಿ ಸ್ಥಳೀಯ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರತಿಭಟನೆಯಿಂದ ಅನಗತ್ಯ ವಿವಾದವನ್ನು ಹುಟ್ಟುಹಾಕಲಾಗುತ್ತಿದೆ ಎಂದು ಕಾರ್ನಿವಲ್ ಆಯೋಜಕರು ಹೇಳಿದ್ದಾರೆ. ಕಾರ್ಯಕ್ರಮದ ಹಿಂದೆ ದುರಾಲೋಚನೆ ಇಲ್ಲವೆಂದು ಆಯೋಜಕರು ಸ್ಪಷ್ಟ ಪಡಿಸಿದ್ದಾರೆ.
ಪಪ್ಪಾಂಜಿಯನ್ನು ಪ್ರಧಾನ ಮಂತ್ರಿಯ ಮುಖದಲ್ಲಿ ಚಿತ್ರಿಸಿದ ಕಾರ್ನಿವಲ್ ಸಮಿತಿಯ ಕ್ರಮವನ್ನು ಖಂಡಿಸಬೇಕು. ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳನ್ನು ಮೀರಿ ಪ್ರಪಂಚದ ವಿವಿಧ ಭಾಗಗಳಿಂದ ಜನರು ಕಾರ್ನಿವಲ್ ಅನ್ನು ವೀಕ್ಷಿಸಲು ಮತ್ತು ಹೊಸ ವರ್ಷವನ್ನು ಸ್ವಾಗತಿಸಲು ಕೊಚ್ಚಿಗೆ ಬರುತ್ತಾರೆ. ಪಪ್ಪಾಂಜಿಗೆ ಪ್ರಧಾನಿ ಮುಖವನ್ನು ತೊಡಿಸುವ ಮೂಲಕ, ಕೊಚ್ಚಿನ್ ಕಾರ್ನಿವಲ್‌ಗೆ, ಕೊಚ್ಚಿಯ ಜನರಿಗೆ ಮತ್ತು ರಾಷ್ಟ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ಶೈಜು ತಿಳಿಸಿದ್ದಾರೆ.
ವಿವಿಧ ಪಕ್ಷಗಳನ್ನು ಪ್ರತಿನಿಧಿಸುವ ಜನರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಕಾರ್ನಿವಲ್ ಸಮಿತಿಯ ಭಾಗವಾಗಿ ಬಿಜೆಪಿ ನಾಯಕರು ಕೂಡ ಇದ್ದಾರೆ.

ಬಿಜೆಪಿ ಪ್ರತಿಭಟನೆ ಅಪಾಯಕಾರಿ ಪ್ರವೃತ್ತಿ ಎಂದ ಆಯೋಜಕ
ಈ ಕುರಿತು ಪ್ರತಿಕ್ರಿಯಿಸಿರುವ ಕೊಚ್ಚಿಯ ಮಾಜಿ ಮೇಯರ್ ಹಾಗೂ ಕಾರ್ಯಕ್ರಮದ ಪ್ರಮುಖ ಆಯೋಜಕರಾದ ಕೆ.ಜೆ. ಸೋಹನ್ ಅವರು ಬಿಜೆಪಿಯ ಪ್ರತಿಭಟನೆಯನ್ನು ಸಂಪೂರ್ಣವಾಗಿ ಅನಗತ್ಯ ಮತ್ತು ಅಪಾಯಕಾರಿ ಪ್ರವೃತ್ತಿ ಎಂದು ಹೇಳಿದ್ದಾರೆ.
'ಪಪ್ಪಾಂಜಿ ಪ್ರತಿಕೃತಿಯ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಪ್ರತಿಕೃತಿಯ ಮುಖಕ್ಕೆ ಆಧಾರವಾಗಿ ಬಳಸಲಾದ ಮುಖವಾಡದಲ್ಲಿ ಮಾತ್ರ ಬಿಜೆಪಿಯು ಪ್ರಧಾನಿಯ ಮುಖದೊಂದಿಗೆ ಹೋಲಿಕೆಯನ್ನು ಕಂಡುಕೊಂಡಿದೆ. ಅಂತಿಮವಾಗಿ ಕಾಣುವ ಮುಖವು ವಿಭಿನ್ನವಾಗಿ ಕಾಣುತ್ತದೆ. ನಾವು ಅದನ್ನು ಅವರಿಗೆ ತಿಳಿಸಿದ್ದೇವೆ. ಈ ರೀತಿಯ ಪ್ರತಿಭಟನೆಗಳು ಸಮಾಜದಲ್ಲಿ ಅನಗತ್ಯ ತೊಂದರೆಗಳನ್ನು ಉಂಟುಮಾಡುವ ಅಪಾಯಕಾರಿ ಪ್ರವೃತ್ತಿಯಾಗಿದೆ' ಎಂದು ಅವರು ಹೇಳಿದ್ದಾರೆ.
'ಈ ಬಾರಿ ಪಪ್ಪಂಜಿ ತನ್ನ ಎಡಗಾಲನ್ನು ಕೊರೊನಾ ವೈರಸ್ ಮೇಲೆ ಇರಿಸಿದ್ದಾನೆ' ಎಂದು ಅವರು ತಿಳಿಸಿದ್ದಾರೆ.
ಕಲಾವಿದ ಜೈಸ್ ಜಾರ್ಜ್ ಪಪ್ಪಾಂಜಿಯನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ಮುಳವುಕಾಡ್ ಮೂಲದ ಗಾಡ್ವಿನ್ ಅದನ್ನು ನಿರ್ಮಿಸಿದ್ದಾರೆ.

ಕೊಚ್ಚಿನ್ ಕಾರ್ನಿವಾಲ್‌ನ ವಿಶೇಷತೆಗಳು
ಇದು ಕೊಚ್ಚಿನ್ ಕಾರ್ನಿವಾಲ್‌ನ 39 ನೇ ಆವೃತ್ತಿಯಾಗಿದೆ. ಪಲ್ಲತ್ತು ರಾಮನ್ ಸ್ಕ್ವೇರ್‌ನಲ್ಲಿ ಚಿತ್ರಕಲಾ ಪ್ರದರ್ಶನ, ಮ್ಯಾರಥಾನ್, ಸೈಕಲ್ ರ್ಯಾಲಿ, ಫುಡ್ ಫೆಸ್ಟ್, ಕೊಂಕಣಿ ಭಾಷಾ ಉತ್ಸವ, ಕಯಾಕಿಂಗ್, ಫುಟ್‌ಬಾಲ್ ಮತ್ತು ಇತರ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ನೀವಲ್‌ನ ಭಾಗವಾಗಿ ನಡೆಯುತ್ತಿವೆ.
ವಿಕಲಚೇತನ ಮಕ್ಕಳ ಯುವಜನೋತ್ಸವ, ಈಜು, ಶಾಲಾ ಬ್ಯಾಂಡ್ ಸ್ಪರ್ಧೆಗಳು, ಮೋಟಾರ್ ಬೈಕ್ ರೇಸ್, ಫ್ಯಾಶನ್ ಶೋ ಮತ್ತು ಕುಸ್ತಿ ಸಹ ನಡೆಯುತ್ತವೆ.












Click it and Unblock the Notifications