ಮೋದಿ ಮದುವೆಯ ಬಗ್ಗೆ ಈಗ ಭಾವಮೈದುನ ವಿವರಣೆ
ವಡೋದರಾ, ಏ.11: ಸೋ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿಚಾರ ಈ ಹಿಂದಿಗಿಂತಲೂ ಈಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ನರೇಂದ್ರ ಮೋದಿ ಅವರ ಅಣ್ಣ ಸೋಮಭಾಯ್ ದಾಮೋದರದಾಸ್ ಮೋದಿ ಅವರು ಜಶೋದಾಬೆನ್ ಜತೆಗಿನ ಮೋದಿ ಮದುವೆ ಬಗ್ಗೆ ಸ್ಪಷ್ಟನೆ ನೀಡಿರುವುದರ ಬೆನ್ನಿಗೆ ಖುದ್ದು ಜಶೋದಾಬೆನ್ ಅವರ ಸೋದರ ಮಾತನಾಡಿದ್ದಾರೆ.
1968ರಲ್ಲಿ ನರೇಂದ್ರ ಮೋದಿ ಮತ್ತು ನನ್ನ ಸೋದರಿಯ ನಡುವೆ ಔಪಚಾರಿಕ ವಿವಾಹ ನಡೆದಿತ್ತು. ಆದರೆ ಜಶೋದಾ ಮತ್ತು ನರೇಂದ್ರ ಒಂದು ದಿನವೂ ಜತೆಯಾಗಿರಲಿಲ್ಲ. ಆಕೆಯೀಗ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದಾರೆ' ಎಂದು ಜಶೋದಾಬೆನ್ ಅವರ ಸಹೋದರ ಕಮಲೇಶ್ ಮೋದಿ ತಿಳಿಸಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ 'ಮೋದಿ ಪ್ರಧಾನಿಯಾಗುವ ನಿಟ್ಟಿನಲ್ಲಿ ಜಶೋದಾ ವ್ರತ ಕೈಗೊಂಡಿದ್ದಾರೆ. ಮೋದಿ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದು, ಸದ್ಯ ತೀರ್ಥ ಕ್ಷೇತ್ರಗಳ ಯಾತ್ರೆ ಕೈಗೊಂಡಿದ್ದಾರೆ. ಅವರು ಅನ್ನ ಸೇವಿಸುವುದನ್ನು ತ್ಯಜಿಸಿದ್ದಾರೆ. ಚಪ್ಪಲಿ ಹಾಕಿಕೊಳ್ಳದೆ ಬರಿಗಾಲಲ್ಲಿ ಸಂಚರಿಸುತ್ತಿದ್ದಾರೆ' ಎಂದೂ ಜಶೋದಾಬೆನ್ ಅವರ ಸಹೋದರ ಕಮಲೇಶ್ ಮೋದಿ ಹೇಳಿದ್ದಾರೆ.
ಈ ಮಧ್ಯೆ, ಮೋದಿ ತಮ್ಮ ವೈವಾಹಿಕ ಜೀವನವನ್ನು ಒಪ್ಪಿಕೊಂಡಿದ್ದಾರೆ. ಆದರೆ ಬೇರೊಬ್ಬ ಮಹಿಳೆಯನ್ನು ಕದ್ದುಮುಚ್ಚಿ ಹಿಂಬಾಲಿಸುವ, ಮತ್ತೊಂದೆಡೆ ಪತ್ನಿಗೆ ಆಕೆಯ ಹಕ್ಕನ್ನು ನಿರಾಕರಿಸುವ ವ್ಯಕ್ತಿಯನ್ನು ಈ ದೇಶದ ಮಹಿಳೆಯರು ನಂಬಬಹುದೇ? ಹಾಗಾಗಿ ಮೋದಿ ವಿರುದ್ಧ ಮತ ಹಾಕಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಮೋದಿ ವಿರುದ್ಧ ಎಂದಿನಂತೆ ಕಟಕಿಯಾಡಿದ್ದಾರೆ.












Click it and Unblock the Notifications