ರಾಜ್ಯಸಭಾ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಖಾತೆ ತೆರೆದ ಬಿಜೆಪಿ: ಗುಜರಾತ್‌ನಿಂದ ಜೈಶಂಕರ್ ಆಯ್ಕೆ
ವಿದೇಶಾಂಗ ಸಚಿವ ಎಸ್ ಜೈಶಂಕರ್, ಟಿಎಂಸಿ ನಾಯಕ ಡೆರೆಕ್ ಓ ಬ್ರಿಯಾನ್ ಸೇರಿದಂತೆ 10 ನಾಯಕರು ಇಂದು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ, ಯಾವುದೇ ಎದುರಾಳಿ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಎಂದು ಘೊಷಿಸಲಾಗುತ್ತದೆ.
ಆರು ಟಿಎಂಸಿ ಮತ್ತು ಐದು ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಈ ಅಭ್ಯರ್ಥಿಗಳ ವಿರುದ್ಧ ಯಾವುದೇ ಎದುರಾಳಿ ನಾಮಪತ್ರ ಸಲ್ಲಿಸಿಲ್ಲ. ರಾಜ್ಯಸಭಾ ಸದಸ್ಯರ ಅವಧಿ ಮುಗಿದಿರುವ ಕಾರಣ ತೆರವಾಗುತ್ತಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಗುಜರಾತಿನಿಂದ ಆಯ್ಕೆಯಾಗಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಸ್ಥಾನವೂ ಸೇರಿದೆ.

ಜೈಶಂಕರ್, ದಿನೇಶ್ಚಂದ್ರ ಜೆಮಲ್‌ಭಾಯ್ ಅನವಾಡಿಯಾ ಮತ್ತು ಲೋಖಂಡವಾಲಾ ಜುಗಲ್‌ಸಿನ್ಹ್ ಮಾಥುರ್ಜಿ ಗುಜರಾತ್‌ನ ಮೂವರು ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದು, ಆಗಸ್ಟ್ 18ರಂದು ಸೇವಾ ಅವಧಿ ಕೊನೆಯಾಗಲಿದೆ. ಗೋವಾ ಬಿಜೆಪಿ ಬಿಜೆಪಿ ರಾಜ್ಯಸಭಾ ಸದಸ್ಯ ವಿನಯ್ ಡಿ. ತೆಂಡೂಲ್ಕರ್ ಅವರ ಅವಧಿ ಜುಲೈ 28 ರಂದು ಕೊನೆಗೊಳ್ಳಲಿದೆ.
ಪಶ್ಚಿಮ ಬಂಗಾಳದಲ್ಲಿ ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಟಿಎಂಸಿ ಸಂಸದರಾದ ಡೆರೆಕ್ ಒ'ಬ್ರಿಯಾನ್, ಡೋಲಾ ಸೇನ್, ಸುಶ್ಮಿತಾ ದೇವ್, ಶಾಂತಾ ಛೆಟ್ರಿ ಮತ್ತು ಸುಖೇಂದು ಶೇಖರ್ ರೇ ಅವರ ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಸಂಸದ ಪ್ರದೀಪ್ ಭಟ್ಟಾಚಾರ್ಯ ಅವಧಿ ಆಗಸ್ಟ್ 18 ಕ್ಕೆ ಮುಗಿಯಲಿದೆ.
ಬಂಗಾಳದಲ್ಲಿ ಬಿಜೆಪಿ ಪ್ರಥಮ
ಬಂಗಾಳದ ಒಟ್ಟು ಏಳು ಸ್ಥಾನಗಳಲ್ಲಿ, ಟಿಎಂಸಿ ಆರು ಸ್ಥಾನಗಳನ್ನು ಪಡೆದರೆ, ಬಿಜೆಪಿಯ ಅನಂತ ರೈ 'ಮಹಾರಾಜ್' ರಾಜ್ಯದಿಂದ ರಾಜ್ಯಸಭೆಗೆ ಪಕ್ಷದ ಮೊದಲ ಚುನಾಯಿತ ಸದಸ್ಯರಾದರು. ಗೋವಾದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಡೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಗುಜರಾತ್‌ನಿಂದ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದ ಜೈಶಂಕರ್, ಕಳೆದ ವಾರ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದರು, ಅವರು ಕೂಡ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಗುಜರಾತ್‌ನಿಂದ ಮೂರು ರಾಜ್ಯಸಭಾ ಸ್ಥಾನಗಳು ಕೂಡ ಅವಿರೋಧವಾಗಿ ಆಯ್ಕೆಯಾಗಲಿದೆ.
ರಾಜ್ಯಸಭೆಯಲ್ಲಿ ಎನ್‌ಡಿಎ-ಯುಪಿಎ ಬಲಾಬಲ
ಈ ಚುನಾವಣೆ ನಂತರ ಬಿಜೆಪಿ ರಾಜ್ಯಸಭಾ ಸದಸ್ಯರ ಸಂಖ್ಯೆ 93ಕ್ಕೆ ಏರಲಿದೆ. ಒಬ್ಬರು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಸದನದಲ್ಲಿ ಐದು ನಾಮನಿರ್ದೇಶಿತ ಸಂಸದರು ಸೇರಿದಂತೆ ಎನ್‌ಡಿಎ ರಾಜ್ಯಸಭಾ ಸದಸ್ಯರ ಸಂಖ್ಯೆ 105ಕ್ಕೆ ಏರಿಕೆಯಾಗಲಿದೆ. ಕಾಂಗ್ರೆಸ್ ಒಂದು ಸ್ಥಾವನ್ನು ಕಳೆದುಕೊಂಡು 30ಕ್ಕೆ ಇಳಿಯಲಿದೆ.
ರಾಜ್ಯಸಭೆಯ ಪ್ರಸ್ತುತ ಬಲ 238 ಆಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ಬಂಗಾಳದಿಂದ ಒಂದು ಮತ್ತಯ ಎರಡು ನಾಮನಿರ್ದೇಶಿತ ಸ್ಥಾನಗಳು ಇನ್ನೂ ಖಾಲಿ ಇವೆ. ಒಟ್ಟು ಸದಸ್ಯರ ಸಂಖ್ಯೆ 245 ಆಗಿದೆ. ಬಿಜೆಪಿ 93, ಕಾಂಗ್ರೆಸ್ 30, ಟಿಎಂಸಿ 12, ಎಎಪಿ ಮತ್ತು ಡಿಎಂಕೆ ತಲಾ 10, ಬಿಜೆಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ತಲಾ 9 ಸದಸ್ಯರನ್ನು ಹೊಂದಿವೆ.












Click it and Unblock the Notifications