ಕರ್ನಾಟಕ ಚುನಾವಣೆ ಸೋಲಿನ ಬಳಿಕ ಎಚ್ಚೆತ್ತ ಬಿಜೆಪಿ: 5 ರಾಜ್ಯಗಳಲ್ಲಿ ಬಿಜೆಪಿ ಅಧ್ಯಕ್ಷರ ದಿಢೀರ್ ಬದಲಾವಣೆ!
ನವದೆಹಲಿ: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದರು ಬಿಜೆಪಿ ನಾಯಕರು. ಆದರೆ ಆಗಿದ್ದೇ ಬೇರೆ ಬಿಜೆಪಿ ಕೇವಲ 66 ಸ್ಥಾನ ಪಡೆದು ವಿಪಕ್ಷ ಸ್ಥಾನದಲ್ಲಿ ಕೂತಿದೆ. ಹೀಗೆ ಕರ್ನಾಟಕದಲ್ಲಿ ಹೀನಾಯ ಸೋಲು ಕಂಡ ಬಿಜೆಪಿ ನಾಯಕರು ಎಚ್ಚೆತ್ತಿದ್ದಾರೆ. ಅದರಲ್ಲೂ ದೆಹಲಿ ಬಿಜೆಪಿ ಲೀಡರ್ಸ್ ಅಲರ್ಟ್ ಆಗಿದ್ದು, 5 ರಾಜ್ಯಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನ ಬದಲಾಯಿಸಿದ್ದಾರೆ.
ಹೌದು, ಇನ್ನೇನು 2024ರ ಲೋಕಸಭೆ ಚುನಾವಣೆ ಬಂದೇ ಬಿಡುತ್ತೆ. ಹೀಗೆ ಸುಮ್ಮನಿದ್ದರೆ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುತ್ತೆ ಅನ್ನೋದು ಬಿಜೆಪಿಯ ಕೇಂದ್ರ ನಾಯಕರಿಗೆ ಈಗ ಮನವರಿಕೆ ಆಗಿದೆ. ಹೀಗಾಗಿಯೇ ಬಿಜೆಪಿ ರಾಜ್ಯ ಘಟಕಗಳಿಗೆ ಮೇಜರ್ ಸರ್ಜಾರಿ ಮಾಡಿ, ಹೊಸ ದಾಳ ಉರುಳಿಸಿದ್ದಾರೆ. ಕೆಲವೇ ತಿಂಗಳಲ್ಲಿ ಚುನಾವಣೆ ಎದುರಿಸಲಿರುವ ತೆಲಂಗಾಣ ಸೇರಿದಂತೆ ಆಂಧ್ರ ಪ್ರದೇಶ, ರಾಜಸ್ಥಾನ, ಜಾರ್ಖಂಡ್ ಹಾಗೂ ಪಂಜಾಬ್ ರಾಜ್ಯಗಳ ರಾಜ್ಯ ಘಟಕದ ಮುಖ್ಯಸ್ಥರನ್ನ ಅಂದರೆ ರಾಜ್ಯಾಧ್ಯಕ್ಷರನ್ನ ಬದಲಾಯಿಸಿದೆ ಬಿಜೆಪಿ. ಈ ನಡುವೆ ಕರ್ನಾಟಕದ ಬಿಜೆಪಿ ಅಧ್ಯಕ್ಷರ ಆಯ್ಕೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಹಾಗಾದ್ರೆ ಕರ್ನಾಟಕದ ಬಿಜೆಪಿ ಅಧ್ಯಕ್ಷರು ಯಾರಾಗಬಹುದು? ಇಲ್ಲಿದೆ ಮಾಹಿತಿ.

5 ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಇವರೇ ನೋಡಿ
1) ತೆಲಂಗಾಣ : ಜಿ.ಕಿಶನ್ ರೆಡ್ಡಿ
2) ರಾಜಸ್ಥಾನ : ಗಜೇಂದ್ರ ಸಿಂಗ್
3) ಆಂಧ್ರ ಪ್ರದೇಶ: ದಗ್ಗುಬಾಟಿ ಪುರಂದೇಶ್ವರಿ
4) ಪಂಜಾಬ್: ಸುನೀಲ್ ಜಾಖಡ್
5) ಜಾರ್ಖಂಡ್ : ಬಾಬೂಲಾಲ್ ಮರಾಂಡಿ
ತೆಲಂಗಾಣದಲ್ಲಿ ಬಿಜೆಪಿ ಮೇಜರ್ ಸರ್ಜರಿ!
ಅಂದಹಾಗೆ ಈಗ ಇಡೀ ದೇಶದ ಕಣ್ಣು ತೆಲಂಗಾಣದ ಮೇಲೆ ನೆಟ್ಟಿದೆ. ಏಕೆಂದರೆ ಇನ್ನೇನು ಕೆಲವೇ ತಿಂಗಳಲ್ಲಿ ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಇದೇ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಿಗ್ ಫೈಟ್ ಶುರುವಾಗಿದೆ. ಅತ್ತ ಕಾಂಗ್ರೆಸ್ ಗೆಲ್ಲಲೇಬೇಕು ಅಂತಾ ತೊಡೆತಟ್ಟಿದ್ದರೆ, ಇತ್ತ ಬಿಜೆಪಿ ಕೂಡ ರಣಕಹಳೆ ಮೊಳಗಿಸಿದೆ. ಈಗ ಆಡಳಿತದಲ್ಲಿ ಇರುವ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಕೂಡ ಭರದ ಸಿದ್ಧತೆ ಆರಂಭಿಸಿದೆ. ಈ ಹೊತ್ತಲ್ಲಿ ಬಿಜೆಪಿ ಸರ್ಪ್ರೈಸ್ ಕೊಟ್ಟಿದೆ. ತೆಲಂಗಾಣದ ಬಿಜೆಪಿಗೆ ಅಧ್ಯಕ್ಷರಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ನೇಮಕವಾಗಿದ್ದಾರೆ. ಇನ್ನು ನಾಯಕತ್ವ ಬದಲಾವಣೆ ಮಾಡುವ ಚಿಂತನೆ ನಡೆಸಿದ್ದ ಬಿಜೆಪಿ ವರಿಷ್ಠರು, ಅಚ್ಚರಿಯ ಆಯ್ಕೆ ಮಾಡಿದ್ದಾರೆ.
ತೆಲಂಗಾಣದಲ್ಲಿ ದಿಢೀರ್ ಬದಲಾವಣೆ ಏಕೆ?
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇಂದು ಅಧಿಕೃತವಾಗಿ ಘೋಷಿಸಲಾಗಿದೆ. ಇನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಂಡಿ ಸಂಜಯ್ ಜಾಗಕ್ಕೆ ಕಿಶನ್ ರೆಡ್ಡಿ ನೇಮಿಸಲಾಗಿದೆ. ಬಂಡಿ ಸಂಜಯ್ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಸ್ಥಾನ ಪಡೆವ ಸಾಧ್ಯತೆಯಿದೆ ಎನ್ನಲಾಗಿದೆ. ಕಿಶನ್ ರೆಡ್ಡಿ, ಡಾ ಕೆ ಲಕ್ಷ್ಮಣ್, ಸಂಜಯ್, ರಾಜೇಂದರ್, ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ, ಅರುಣಾ ಮತ್ತು ರಾಜ್ಯ ಘಟಕದ ಇತರ ಪ್ರಮುಖ ವ್ಯಕ್ತಿಗಳು ಸೇರಿದಂತೆ ಪಕ್ಷದ ಮುಖಂಡರ ನಡುವೆ ಸುದಿರ್ಘ ಚರ್ಚೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆಂಧ್ರ ಪ್ರದೇಶದಲ್ಲೂ ಅಚ್ಚರಿಯ ಆಯ್ಕೆ!
ಇದರ ಜೊತೆಗೆ ಆಂಧ್ರ ಪ್ರದೇಶದಲ್ಲೂ ಅಚ್ಚರಿಯ ಆಯ್ಕೆ ಮಾಡಿರುವ ಬಿಜೆಪಿ ವರಿಷ್ಠರು, ಆಂಧ್ರ ಪ್ರದೇಶ ಮಾಜಿ ಸಿಎಂ ಹಾಗೂ ತೆಲುಗು ಚಿತ್ರರಂಗದ ದಂತಕಥೆ ಎನ್‌ಟಿಆರ್ ಅವರ ಪುತ್ರಿ ದಗ್ಗುಬಾಟಿ ಪುರಂದೇಶ್ವರಿ ಅವರಿಗೆ ಅವಕಾಶ ನೀಡಿದ್ದಾರೆ. ಜೊತೆಯಲ್ಲಿ ಪುರಂದೇಶ್ವರಿ ಅವರು ಚಂದ್ರಬಾಬು ನಾಯ್ಡು ಅವರಿಗೂ ಸಂಬಂಧಿ ಆಗಬೇಕು. ಹೀಗೆ ಮತ್ತೊಮ್ಮೆ ತನ್ನ ಹಳೆಯ ದೋಸ್ತಿ ಜೊತೆ ಸೇರಿ, ಚುನಾವಣೆ ಎದುರಿಸಲು ಬಿಜೆಪಿ ನಾಯಕರು ಸಜ್ಜಾದಂತೆ ಕಾಣುತ್ತಿದೆ. ಕಳೆದ ತಿಂಗಳು ಚಂದ್ರಬಾಬ್ ನಾಯ್ಡು ಎನ್‌ಡಿಎ ಮೈತ್ರಿಕೂಟಕ್ಕೆ ವಾಪಸ್ ಆಗಲಿದ್ದಾರೆ ಎನ್ನಲಾಗಿತ್ತು.
ವಿಪಕ್ಷಗಳಿಗೆ ಕಾದಿದೆಯಾ ಮತ್ತಷ್ಟು ಶಾಕ್!
ಈಗಿನ ಬೆಳವಣಿಗೆ ನೋಡುತ್ತಿದ್ದರೆ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಬಿಜೆಪಿ ಒಗ್ಗಟ್ಟಿನ ಹೋರಾಟ ನಡೆಸುವುದು ಬಹುತೇಕ ಪಕ್ಕಾ. ಅದ್ರಲ್ಲೂ ಪುರಂದೇಶ್ವರಿ ಆಂಧ್ರದ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅಚ್ಚರಿ ತರಿಸಿದೆ. ಏಕೆಂದರೆ ಈಗಾಗಲೇ ವಿಪಕ್ಷಗಳಿಗೆ ಶಾಕ್ ಕೊಡುತ್ತಿರುವ ಬಿಜೆಪಿ, ವಿರೋಧ ಪಕ್ಷಗಳ ಒಗ್ಗಟ್ಟಿನ ವಿರುದ್ಧ ತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ ಎನ್‌ಡಿಎ ಮೈತ್ರಿಕೂಟ ಬಿಟ್ಟುಹೋಗಿದ್ದ ನಾಯ್ಡು ಜೊತೆ ಚರ್ಚೆಗಳು ನಡೆಯುತ್ತಿವೆ. ಅಕಸ್ಮಾತ್ ಎನ್‌ಡಿಎ ಒಕ್ಕೂಟಕ್ಕೆ ಹಳೆಯ ದೋಸ್ತಿಗಳು ವಾಪಸ್ ಬಂದರೆ ಬಲ ಮತ್ತಷ್ಟು ಹೆಚ್ಚಾಗಲಿದೆ.
ಕರ್ನಾಟಕದಲ್ಲಿ ಹೊಸ ಅಧ್ಯಕ್ಷರ ಆಯ್ಕೆ?
ಇಷ್ಟೆಲ್ಲದರ ನಡುವೆ ಕರ್ನಾಟಕದ ಹಾಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವಧಿಯು ಅಂತ್ಯಗೊಂಡಿದೆ. ಹೀಗಾಗಿ ಕರ್ನಾಟಕಕ್ಕೂ ನೂತನ ರಾಜ್ಯಧ್ಯಕ್ಷರ ಆಯ್ಕೆಗೆ ಕಸರತ್ತು ಬಲು ಜೋರಾಗಿದೆ. ಆದರೆ ಮೊದಲು ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಬಳಿಕ ಕರ್ನಾಟಕ ಬಿಜೆಪಿ ಘಟಕಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಮಾಡಲಾಗುವುದು. ಮತ್ತೊಂದ್ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವು ಹಿರಿಯ ನಾಯಕರ ಹೆಸರುಗಳು ಕೇಳಿಬಂದಿವೆ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಸಿಟಿ ರವಿ, ಶೋಭಾ ಕರಂದ್ಲಾಕೆ, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ, ಮಾಜಿ ಸಚಿವ ಸುನೀಲ್ ಕುಮಾರ್ ಹೀಗೆ ಕೆಲವರ ಹೆಸರು ಮುಂಚೂಣಿಯಲ್ಲಿದೆ. ಶೀಘ್ರದಲ್ಲೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.












Click it and Unblock the Notifications