ಭ್ರಷ್ಟಾಚಾರದಲ್ಲಿ ಬಿಜೆಪಿ ವಿಶ್ವಚಾಂಪಿಯನ್: ರಾಹುಲ್ ಗಾಂಧಿ
ರಾಜನಂದಗೌನ್ (ಛತ್ತೀಸಗಢ), ನ 8: ಒಂದೆಡೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ವಿರುದ್ದ ಹರಿಹಾಯುತ್ತಿದ್ದರೆ, ಇತ್ತ ಛತ್ತೀಸಗಢದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ' ಬಿಜೆಪಿ ಭ್ರಷ್ಟಾಚಾರದಲ್ಲಿ ವಿಶ್ವಚಾಂಪಿಯನ್' ಎಂದು ಲೇವಡಿ ಮಾಡಿದ್ದಾರೆ.
ಚುನಾವಣಾ ಹೊಸ್ತಿಲಲ್ಲಿರುವ ಛತ್ತೀಸಗಢದ ರಾಜನಂದಗೌನ್ ನಲ್ಲಿ ಶುಕ್ರವಾರ (ನ 8) ಚುನಾವಣಾ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ನೈಸರ್ಗಿಕ ಸಂಪತ್ತಿನಲ್ಲಿ ಸಮೃದ್ದವಾಗಿರುವ ಛತ್ತೀಸಗಢ ರಾಜ್ಯವನ್ನು ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂದಿದ್ದಾರೆ.
ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗುತ್ತಿದ್ದೇವೆ ಎನ್ನುವ ಬಿಜೆಪಿಯ ಮಾತು ಬರೀ ಸುಳ್ಳಿನ ಕಂತೆ.
ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಭ್ರಷ್ಟಾಚಾರದಲ್ಲಿ ವಿಶ್ವಚಾಂಪಿಯನ್ ಆಗಿದೆಯೇ ಹೊರತು ಅಭಿವೃದ್ದಿಯ ವಿಚಾರದಲ್ಲಿ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಕ್ಸಲ್ ಸಮಸ್ಯೆಯನ್ನು ಬಿಜೆಪಿ ಸರಕಾರಕ್ಕೆ ಹತ್ತಿಕ್ಕಲು ಆಗುತ್ತಿಲ್ಲ. ಮಹಿಳೆಯರಿಗೆ ರಾಜ್ಯದಲ್ಲಿ ಬೆಲೆ ಮತ್ತು ರಕ್ಷಣೆ ಇಲ್ಲ. ಇಂತಹ ಸರಕಾರ ಇದ್ದರೆ ಎಷ್ಟು, ಬಿಟ್ಟರೆ ಎಷ್ಟು.

RTI ಕಾನೂನನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ. ಭಾರತದ ಯಾವುದೇ ಪ್ರಜೆ ಈ ಕಾನೂನಿನ ಮೂಲಕ ಭಾರತ ಸರಕಾರದ ಕಾರ್ಯ ವೈಖರಿಯನ್ನು ಪ್ರಶ್ನಿಸಬಹುದು ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಹೇಳಿದ್ದಾರೆ.
ಆಹಾರ ಮಸೂದೆ ಕಾಯ್ದೆಯನ್ನು ಇಡೀ ಭಾರತೀಯರಿಗೆ ಅನುಕೂಲವಾಗಲಿ ಎಂದು ಕಾಂಗ್ರೆಸ್ ಸರಕಾರ ಜಾರಿಗೆ ತಂದಿತು. ಭೂ ಮಸೂದೆಯನ್ನೂ ಜಾರಿಗೆ ತಂದಿತು.
ಆದರೆ ಛತ್ತೀಸಗಢ ಸರಕಾರ ಕೈಗಾರಿಕೋದ್ಯಮಿಗಳ ಜೊತೆ ಶಾಮೀಲಾಗಿ ಬಡವರಿಗೆ ಸಿಗಬೇಕಾಗಿದ್ದ ಭೂಮಿಯನ್ನು ಉದ್ಯಮಿಗಳಿಗೆ ಮಾರಿದ್ದಾರೆ.
ಬಡಜನರ ಮತ್ತು ಆದಿವಾಸಿಗಳ ಪರ ಕಾಂಗ್ರೆಸ್ ಪಕ್ಷ. ಎಲ್ಲರಿಗೂ ಒಂದೇ ನೀತಿ, ಸಹಬಾಳ್ವೆ ಎನ್ನುವುದು ಕಾಂಗ್ರೆಸ್ ಪಕ್ಷದ ಘೋಷಣೆ. ಜಾತಿ ಜಾತಿ ನಡುವೆ ವಿಷಬೀಜ ಬಿತ್ತಿ ರಾಜಕೀಯ ಮಾಡುವ ದುರ್ಗತಿ ಬಿಜೆಪಿಗೆ ಇದೆಯೇ ಹೊರತು ಕಾಂಗ್ರೆಸ್ಸಿಗಿಲ್ಲ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಚುನಾವಣಾ ಹೊಸ್ತಿಲಲ್ಲಿರುವ ಛತ್ತೀಸಗಢ ಮತದಾರರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರುತ್ತಿದ್ದೇನೆ, ನಾವು ರಾಜ್ಯವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.












Click it and Unblock the Notifications