ಕರ್ನಾಟಕದಂತೆಯೇ ಪಂಚ ರಾಜ್ಯ ಚುನಾವಣೆಯಲ್ಲೂ ಬಿಜೆಪಿಗೆ ಸಂಕಷ್ಟ: ಮೋದಿ ಕೇಂದ್ರಿತ ರಾಜಕಾರಣವೇ ಮಾರಕ- ಸಮೀಕ್ಷೆಗಳು ಹೇಳುವುದೇನು?
ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಗಗಳು ನಿಗದಿಯಾಗಿವೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಹಾಗೂ ಮಿಜೋರಾಂಗೆ ಚುನಾವಣೆಗಳು ನಡೆಯಲಿವೆ. ಕರ್ನಾಟಕದ ಚುನಾವಣೆಯಂತೆಯೇ ಈ ಐದು ರಾಜ್ಯಗಳಲ್ಲಿ ಬಿಜೆಪಿ ಸಂಕಷ್ಟವನ್ನು ಎದುರಿಸುತ್ತಿರುವುದು ಕಂಡುಬಂದಿದೆ. ಈ ವರೆಗೆ ಬಂದಿರುವ ಚುನಾವಣಾ ಸಮೀಕ್ಷೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ.
2023 ರ ಅಂತ್ಯಕ್ಕೆ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಅಲೆ ಇರುವುದು ಸಮೀಕ್ಷೆಗಳಿಂದ ಗೊತ್ತಾಗಿದೆ.
ಈ ಸಮೀಕ್ಷೆಗಳ ಪ್ರಕಾರ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿ ಸೋಲುವ ಸಾಧ್ಯತೆಗಳು ಹೆಚ್ಚಾಗಿವೆ. ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದ್ದರೂ, ಮತದಾರರು ಮತ್ತೆ ಗೆಹ್ಲೋಟ್ ಸರ್ಕಾರಕ್ಕೆ ಮಣೆ ಹಾಕಬಹುದು ಎಂದು ಸಮೀಕ್ಷೆಗಳು ಹೇಳುತ್ತಿದೆ.

ಜುಲೈನಲ್ಲಿ ನಡೆಸಿದ ರಾಜಸ್ಥಾನದ ಸಮೀಕ್ಷೆಯಲ್ಲಿ ಬಿಜೆಪಿ 43 ಸ್ಥಾನಗಳಲ್ಲಿ ಕಾಂಗ್ರೆಸ್‌ಗಿಂತ ಮುಂದಿತ್ತು. ಸೆಪ್ಟೆಂಬರ್‌ನಲ್ಲಿ ನಡೆದ ಸಮೀಕ್ಷೆಯಲ್ಲಿ (ಇತ್ತೀಚಿನ ಸಮೀಕ್ಷೆ) ಆ ಮುನ್ನಡೆ ಕೇವಲ ನಾಲ್ಕು ಸ್ಥಾನಗಳಿಗೆ ಇಳಿದಿದೆ. ಈಗ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸಮಬಲದ ಪೈಪೋಟಿ ಕಂಡುಬರುತ್ತಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಭಾರೀ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ತೆಲಂಗಾಣದಲ್ಲಿ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರವನ್ನು ಉರುಳಿಸುವ ಗುರಿ ಹೊಂದಿದ್ದ ಬಿಜೆಪಿ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಪರ ಗಾಳಿ ಬೀಸಿರುವುದು ಚಂದ್ರಶೇಖರ್ ರಾವ್ ಅವರ ಆತಂಕಕ್ಕೆ ಕಾರಣವಾಗಿದೆ.
ಛತ್ತೀಸ್‌ಗಢದಲ್ಲಿ ಬಿಜೆಪಿ ಬಹುಮತ ಗಳಿಸುವುದು ಅಸಾಧ್ಯದ ಮಾತು ಎಂದು ಸಮೀಕ್ಷೆಗಳು ಹೇಳಿವೆ. ಛತ್ತೀಸ್‌ಗಢದಲ್ಲಿ ಸೋಲು ಅನುಭವಿಸುವ ಸಾಧ್ಯತೆಗಳನ್ನು ಕಂಡುಕೊಂಡಿರುವ ಬಿಜೆಪಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ತೀವ್ರ ಕಸರತ್ತು ನಡೆಸಿದೆ.
ವಿಧಾನಸಭಾ ಚುನಾವಣೆಯಲ್ಲಿನ ಪ್ರತಿಕೂಲ ಫಲಿತಾಂಶಗಳು 2024 ರ ಲೋಕಸಭೆ ಚುನಾವಣೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಬಿಜೆಪಿ ಆತಂಕಕ್ಕೊಳಗಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗಿದೆ ಎಂಬ ನಿರೂಪಣೆಯನ್ನು ಕಟ್ಟಿಕೊಡಬಹುದು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಉತ್ತೇಜನ ನೀಡಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಬಿಜೆಪಿಯಲ್ಲಿ ಅಧಿಕಾರದ ವ್ಯಾಮೋಹ
ಬಿಜೆಪಿ ತನ್ನದೇ ರಾಜಕೀಯ ತಂತ್ರಗಳಿಗೆ ಬೆಲೆ ತೆರುತ್ತಿರುವ ಎಲ್ಲ ಮುನ್ಸೂಚನೆಗಳು ಗೋಚರಿಸುತ್ತಿವೆ. ಕೇಂದ್ರ ನಾಯಕತ್ವದ ಅಧಿಕಾರದ ವ್ಯಾಮೋಹ ಈಗ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಚರ್ಚೆಗಳೂ ಮುನ್ನೆಲೆಗೆ ಬಂದಿವೆ.
ಚುನಾವಣೆಯನ್ನು ಗೆಲ್ಲಲು ಯಾವುದೇ ಹಂತಕ್ಕೆ ಹೋಗುವ ಚಾಳಿಯನ್ನು ಬಿಜೆಪಿ ಬೆಳೆಸಿಕೊಂಡಿದೆ. ಬಿಜೆಪಿ ಚುನಾವಣಾ ಯಂತ್ರವಾಗಿ ಮಾರ್ಪಟ್ಟಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 2018ರಲ್ಲಿ ಕರ್ನಾಟಕ ಅಥವಾ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಜನಾದೇಶ ಇರಲಿಲ್ಲ. ಆದರೆ, ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿದೆ. ರಾಜಸ್ಥಾನದಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ಬಿಜೆಪಿ ಮಾಡಿತು. ಆದರೆ, ಅದರಲ್ಲಿ ಯಶಸ್ಸು ಕಾಣಲಿಲ್ಲ.
ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಪರೇಷನ್ ಕಮಲದ ಮೇಲಿನ ಜನರ ಅಭಿಪ್ರಾಯ ಬಹಿರಂಗಗೊಂಡಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿತು. ಇದು ಮಧ್ಯಪ್ರದೇಶದಲ್ಲೂ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ.
ಮೋದಿ ಮೇಲೆ ಹೆಚ್ಚು ಅವಲಂಬನೆ
2014 ರಿಂದ ಬಿಜೆಪಿಯು ಮೋದಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬಿಜೆಪಿಯೊಳಗಿನ ಪ್ರಬಲ ರಾಜ್ಯ ನಾಯಕರನ್ನು ಹಿನ್ನೆಲೆಗೆ ತಳ್ಳುವ ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡಿಕೊಂಡು ಬಂದಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಛತ್ತೀಸ್‌ಗಢದ ಮಾಜಿ ಸಿಎಂ ರಮಣ್ ಸಿಂಗ್ (ಛತ್ತೀಸ್‌ಗಢ) ಹಾಗೂ ಕರ್ನಾಟಕ ಮಾಜಿ ಸಿಎಂ ಯಡಿಯೂರಪ್ಪನವರಂತಹ ಪ್ರಬಲ ನಾಯಕರನ್ನು ಬಿಜೆಪಿ ಕಡೆಗಣಿಸಿದೆ ಎಂಬುದು ಸ್ಪಷ್ಟವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚೌಹಾಣ್ ಮತ್ತು ರಾಜೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಬಿಂಬಿಸದಿರಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಕೇಂದ್ರ ನಾಯಕತ್ವ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಕ್ಕಾಗಿಯೇ ಕರ್ನಾಟಕ ಸೋಲಿಗೆ ಬಹುಮುಖ್ಯ ಕಾರಣ ಎನ್ನಬಹುದು. ಪ್ರಧಾನಿ ಮೋದಿ ಅವರ ಮೇಲೆ ಬಿಜೆಪಿ ತೀವ್ರವಾಗಿ ಅವಲಂಬಿತವಾಗಿರುವುದು ಪಕ್ಷಕ್ಕೆ ಹಿನ್ನೆಡೆ ಉಂಟುಮಾಡಲಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗುತ್ತದೆ.
ಅಧಿಕಾರ ಕೇಂದ್ರೀಕರಣದತ್ತ ಬಿಜೆಪಿ, ವಿಕೇಂದ್ರೀಕರಣದತ್ತ ಕಾಂಗ್ರೆಸ್
ಬಿಜೆಪಿಯು ಕೇವಲ ಮೋದಿ ವರ್ಚಸ್ಸನ್ನೇ ನಂಬಿಕೊಂಡಿದೆ. ಸ್ಥಳೀಯ ಅಥವಾ ರಾಜ್ಯ ಮಟ್ಟದ ನಾಯಕರನ್ನು ಬಿಜೆಪಿ ಹೈಕಮಾಂಡ್ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿಯ ಕೇಂದ್ರ ನಾಯಕತ್ವವು ಅಧಿಕಾರ ಕೇಂದ್ರಿಕರಣದತ್ತ ಸಾಗುತ್ತಿದೆ. ದೆಹಲಿ ಕೇಂದ್ರಿತ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇದು ಬಿಜೆಪಿ ನಷ್ಟ ಉಂಟು ಮಾಡುತ್ತಿದೆ.
ಆದರೆ, ಕಾಂಗ್ರೆಸ್ ಪಕ್ಷವು ರಾಜಕೀಯ ವಿಕೇಂದ್ರೀಕರಣದತ್ತ ಸಾಗುತ್ತಿದೆ. ಸ್ಥಳೀಯ ನಾಯಕತ್ವದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಸಾಬೀತಾಗಿದೆ. ಸ್ಥಳೀಯ ನಾಯಕತ್ವ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಮುಂದುಮಾಡಿ ಕಾಂಗ್ರೆಸ್ ಚುನಾವಣೆಯನ್ನು ಎದುರಿಸುತ್ತಿದೆ. ಇದು ಕಾಂಗ್ರೆಸ್‌ಗೆ ಲಾಭವನ್ನೂ ತಂದುಕೊಡುತ್ತಿದೆ.












Click it and Unblock the Notifications