ರಾಹುಲ್ ಗಾಂಧಿಯನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸುವಂತೆ ಖರ್ಗೆಗೆ ಒತ್ತಾಯಿಸಿದ ಬಿಜೆಪಿ
ನವದೆಹಲಿ, ಡಿಸೆಂಬರ್ 17: ಸಂಸದ ರಾಹುಲ್ ಗಾಂಧಿಯನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಒತ್ತಾಯಿಸಿದೆ.
ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತೀಯ ಸೈನಿಕರನ್ನು ಚೀನಾ ಸೈನಿಕರು ಥಳಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಬಿಜೆಪಿ ಒತ್ತಾಯ ಮಾಡಿದೆ.
ಭಾರತದ ಸಶಸ್ತ್ರ ಪಡೆಗಳ ನೈತಿಕತೆಯನ್ನು ಕುಗ್ಗಿಸುವ ಕೆಲಸ ರಾಹುಲ್ ಗಾಂಧಿಯಿಂದ ನಡೆಯುತ್ತಿದೆ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಈ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ಗೌರವ್ ಭಾಟಿಯಾ, 'ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಿಮೋಟ್ ಕಂಟ್ರೋಲ್ ಆಗಿಲ್ಲದಿದ್ದರೆ, ರಾಹುಲ್ ಅವರನ್ನು ಹೊರಹಾಕಬೇಕು' ಎಂದು ಪ್ರತಿಪಾದಿಸಿದರು.
'ಭಾರತೀಯ ಸಶಸ್ತ್ರ ಪಡೆಗಳ ವಿರುದ್ಧ ಗಾಂಧಿ ಅವರ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವೂ ದೇಶದೊಂದಿಗೆ ನಿಲ್ಲಬೇಕಿದೆ. ಈ ಕಾರಣದಿಂದ ಅವರನ್ನು ಪಕ್ಷದಿಂದ ಹೊರಹಾಕಬೇಕು' ಎಂದು ಅವರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗೌರವ್ ಭಾಟಿಯಾ, 'ಭಾರತೀಯರು ಭಾರತೀಯ ಸೇನೆಯ ಬಗ್ಗೆ ಹೆಮ್ಮೆಪಡುತ್ತಾರೆ. ಗಡಿಯಲ್ಲಿ ಚೀನಾ ಸೇನೆಯನ್ನು ಸದೆಬಡಿಯುತ್ತಿರುವ ಸೈನಿಕರು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ನಮ್ಮ ಸೇನೆಯ ನೈತಿಕ ಸ್ಥೈರ್ಯವನ್ನು ಹತ್ತಿಕ್ಕುವ ಕೆಲಸವನ್ನು ಏಕೆ ಮಾಡುತ್ತಿದ್ದಾರೆ' ಎಂದು ಪ್ರಶ್ನೆ ಮಾಡಿದ್ದಾರೆ.

'ಇದು 1962 ರ ಭಾರತವಲ್ಲವೆಂದು ನಾನು ರಾಹುಲ್ ಗಾಂಧಿಯವರಿಗೆ ಹೇಳುತ್ತೇನೆ. ಭಾರತದ ಒಂದು ಇಂಚು ಭೂಮಿಯೂ ಯಾರ ನಿಯಂತ್ರಣದಲ್ಲಿಲ್ಲ. ಅದನ್ನು ತೆಗೆದುಕೊಳ್ಳುವ ಧೈರ್ಯ ಯಾರಿಗೂ ಇಲ್ಲ. ನಮ್ಮಲ್ಲಿ ವಿಶ್ವದ ಅತ್ಯಂತ ಧೈರ್ಯಶಾಲಿ ಸೈನ್ಯವಿದೆ. ನಾವು ರಾಜತಾಂತ್ರಿಕವಾಗಿ ಸಮರ್ಥರಾಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಯಾರಿಂದಲೂ ನಮ್ಮ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಬಾಟಿಯಾ ಹೇಳಿದ್ದಾರೆ.
'ನಮ್ಮ ಸೇನೆಯು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದಾಗ ಪ್ರತಿಯೊಬ್ಬ ಭಾರತೀಯನ ಎದೆಯು 56 ಇಂಚುಗಳಷ್ಟು ಗಾತ್ರಕ್ಕೆ ಉಬ್ಬುತ್ತದೆ. ಇದು ರಾಹುಲ್ ಗಾಂಧಿ ಮತ್ತು ಶತ್ರು ರಾಷ್ಟ್ರ ಇಬ್ಬರಿಗೆ ಮಾತ್ರ ನೀಡಿದೆ' ಎಂದು ಟೀಕಿಸಿದ್ದಾರೆ.
'ನಮ್ಮ ಸಶಸ್ತ್ರ ಪಡೆಗಳಿಂದಾಗಿ ಪ್ರತಿಯೊಬ್ಬ ಭಾರತೀಯನ ಎದೆಯು 56 ಇಂಚಿನಷ್ಟು ಹಿಗ್ಗುತ್ತದೆ. ರಾಹುಲ್ ಗಾಂಧಿಯವರ ಎದೆ ಮಾತ್ರ 6 ಇಂಚುಗಳಿಗೆ ಕುಗ್ಗುತ್ತದೆ' ಎಂದು ಭಾಟಿಯಾ ತಿಳಿಸಿದ್ದಾರೆ.

ಭಾರತೀಯ ಸಶಸ್ತ್ರ ಪಡೆಗಳಿಗೆ ಅವಿರತ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಬಿಜೆಪಿ ವಕ್ತಾರ, 'ರಾಹುಲ್ ಗಾಂಧಿ ಅವರು ಮನೆಯ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತಿರುವಾಗ, ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗಡಿಯಲ್ಲಿ ಸೇನೆಯೊಂದಿಗೆ ನಿಂತಿದ್ದರು' ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಅವರ ಹೇಳಿಕೆಯು ವಿರೋಧ ಪಕ್ಷದ ದೃಷ್ಟಿಕೋನವನ್ನು ಸೂಚಿಸುತ್ತದೆ ಎಂದೂ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್, ರಾಜಕೀಯ ಪಕ್ಷದಿಂದ ಭಾರತ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿ ವಿಕಸನಗೊಂಡಿದೆ ಎಂದು ಬಿಜೆಪಿ ವಕ್ತಾರರು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?
ಅರುಣಾಚಲ ಪ್ರದೇಶದ ಗಡಿಗಳಲ್ಲಿ ಚೀನಾ ಹಳ್ಳಿಗಳನ್ನು ನಿರ್ಮಿಸುತ್ತಿದೆ. ಅದು ಯುದ್ದಕ್ಕೆ ಸಿದ್ದತೆ ನಡೆಸಿದೆ. ಹೀಗಿರುವಾಗ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿದ್ರೆ ಮಾಡುತ್ತಿದೆ ಎಂದು ರಾಹುಲ್ ಹೇಳಿದ್ದರು.
ಗಡಿಯಲ್ಲಿ ಚೀನಾದ ಸಿದ್ದತೆ ನೋಡುತ್ತಿದ್ದರೆ, ಅದು ಗಡಿಯಲ್ಲಿ ಕೇವಲ ಪ್ರಚೋದನೆ ಮಾಡುತ್ತಿಲ್ಲ. ಯುದ್ದಕ್ಕೆ ಸಿದ್ದತೆ ನಡೆಸಿದೆ. ಇದನ್ನು ಭಾರತ ಸರ್ಕಾರ ಮುಚ್ಚಿಡುತ್ತಿದೆ. ಈ ತರಹದ ಗಂಭೀರ ವಿಚಾರವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವೇ ಇಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು. ಅವರು ನಿನ್ನೆ ರಾಜಸ್ಥಾನದಲ್ಲಿ ಈ ಬಗ್ಗೆ ಮಾತನಾಡಿದ್ದರು.












Click it and Unblock the Notifications