ಪಾಸ್ ಪೋರ್ಟ್ ಗೆ ಬರ್ತ್ ಸರ್ಟಿಫಿಕೇಟ್ ಕಡ್ಡಾಯವಲ್ಲ!
ಪಾಸ್ ಪೋರ್ಟ್ ಪಡೆಯಲು ಜನನ ಪ್ರಮಾಣ ಪತ್ರ ಕಡ್ಡಾಯ ನಿಯಮ ಬದಲು. ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ವಿವರಣೆಯಲ್ಲಿ ಕೇಂದ್ರ ಸರ್ಕಾರದ ಹೇಳಿಕೆ.
ನವದೆಹಲಿ, ಜುಲೈ 24: ಪಾರ್ಸ್ ಪೋರ್ಟ್ ಮಾಡಿಸಲು ಅತ್ಯಗತ್ಯವಾಗಿದ್ದ ಜನನ ಪ್ರಮಾಣ ಪತ್ರದ ನಿಯಮವನ್ನು ಶೀಘ್ರವೇ ಕೈ ಬಿಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಪಾಸ್ ಪೋರ್ಟ್ ನಿಯಮಗಳ ಸರಳೀಕರಣ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ.ಕೆ. ಸಿಂಗ್, ಈ ಕುರಿತಂತೆ ವಿವರಣೆ ನೀಡಿದ್ದಾರೆ.
ಇನ್ನು, ಜನನ ಪ್ರಮಾಣ ಪತ್ರದ ಬದಲಿಗೆ, ಪಾರ್ಸ್ ಅರ್ಜಿಯ ಜತೆಗೆ ಅರ್ಜಿದಾರನು ಸಲ್ಲಿಸುವ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ನಲ್ಲಿರುವ ಜನನ ದಿನಾಂಕವನ್ನೇ ಪರಿಗಣಿಸುವುದಾಗಿ ಸಿಂಗ್ ತಿಳಿಸಿದರು.
1980ರ ಪಾಸ್ ಪೋರ್ಟ್ ಅಧಿನಿಯಮಗಳ ಪ್ರಕಾರ, 1989ರ ಜನವರಿ 26ರ ನಂತರ ಹುಟ್ಟಿದವರು ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಜನನ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು.

ಎಸ್ಎಸ್ಎಲ್ ಸಿ ಅಂಕಪಟ್ಟಿ ಸಾಕು
ಆದರೀಗ, ಹೊಸ ನಿಯಮದಂತೆ, ತಮ್ಮ ಜನನ ದಿನಾಂಕವನ್ನು ಖಾತ್ರಿಪಡಿಸಲು, ಶಾಲೆಗಳಲ್ಲಿ ನೀಡಲಾಗುವ ವರ್ಗಾವಣೆ ಪತ್ರ (ಟಿಸಿ) , ಎಸ್ಎಸ್ಎಲ್ ಸಿ ಅಂಕಪಟ್ಟಿ ನೀಡಬಹುದು ಎಂದು ವಿಕೆ ಸಿಂಗ್, ಸಂಸತ್ತಿಗೆ ಸ್ಪಷ್ಟಪಡಿಸಿದ್ದಾರೆ.

ವಿಮಾ ಪಾಲಿಸಿಯಾದರೂ ಸರಿ
ಪ್ಯಾನ್, ಆಧಾರ್, ಇ- ಆಧಾರ್, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್), ಚುನಾವಣಾ ಗುರುತಿನ ಪತ್ರ (ವೋಟರ್ ಐಡಿ ಕಾರ್ಡ್) ಅಥವಾ ಎಲ್ ಐಸಿ ಪಾಲಿಸಿಯ ಯಾವುದೇ ದಾಖಲೆಗಳನ್ನು ನೀಡಬಹುದಾಗಿದೆ.

ನಿವೃತ್ತರು ಇಷ್ಟು ನೀಡಿದರೆ ಸಾಕು
ಇನ್ನು, ಸರ್ಕಾರಿ ಅಧಿಕಾರಿಗಳು ಹಾಗೂ ನಿವೃತ್ತ ಸರ್ಕಾರಿ ಉದ್ಯೋಗಿಗಳು ಕ್ರಮವಾಗಿ ತಮ್ಮ ಸೇವಾ ದಾಖಲೆಗಳು (ಸರ್ವೀಸ್ ರೆಕಾರ್ಡ್ಸ್) ಅಥವಾ ಪಿಂಚಣಿ ದಾಖಲೆಗಳನ್ನು ನೀಡಬಹುದಾಗಿದೆ ಎಂದು ವಿಕೆ ಸಿಂಗ್, ಸಂಸತ್ತಿಗೆ ತಿಳಿಸಿದ್ದಾರೆ.

ಇಂಥವರಿಗೆ ಅನಾಥಾಯಗಳ ಪ್ರಮಾಣ ಪತ್ರ ಬೇಕು
ಇನ್ನು, ಹೆತ್ತವರನ್ನು ಕಳೆದುಕೊಂಡ ಅಥವಾ ಹೆತ್ತವರಿಂದ ಪರಿತ್ಯಕ್ತಗೊಂಡು ಅನಾಥಾಲಯಗಳಲ್ಲಿ ಜೀವಿಸುತ್ತಿರುವ ಮಕ್ಕಳು ಪಾಸ್ ಪೋರ್ಟ್ ಗಾಗಿ ಅರ್ಜಿಗಳನ್ನು ಹಾಕುವಾಗ ತಂದೆ-ತಾಯಿಯ ಮರಣ ಪ್ರಮಾಣ ಪತ್ರ (ಹೆತ್ತವರು ಸಾವನ್ನಪ್ಪಿದ್ದರೆ) ಅಥವಾ ತಂದೆ-ತಾಯಿಯ ವಿಚ್ಛೇದನ ಅರ್ಜಿಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಸಿಂಗ್, ಸಂಸತ್ತಿಗೆ ತಿಳಿಸಿದ್ದಾರೆ. ಅಂಥ ಮಕ್ಕಳು ತಮ್ಮ ಅನಾಥಾಲಯಗಳಿಂದ ಪ್ರಮಾಣ ಪತ್ರವನ್ನು ನೀಡಿದರೆ ಸಾಕೆಂದು ಸಿಂಗ್ ಹೇಳಿದ್ದಾರೆ.












Click it and Unblock the Notifications