Passport: ಪಾಸ್‌ಪೋರ್ಟ್ ಪಡೆಯುವ ನಿಯಮ ಬದಲು, ತಿಳಿಯಿರಿ
ನವದೆಹಲಿ, ಮಾರ್ಚ್ 02: ಪಾಸ್‌ಪೋರ್ಟ್ ಪಡೆಯುವ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಈ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಆದೇಶವನ್ನು ಹೊರಡಿಸಿದೆ. ಪಾಸ್‌ಪೋರ್ಟ್ ಪಡೆಯಲು ಸಲ್ಲಿಸಬೇಕಾದ ದಾಖಲೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸದಾಗಿ ಪಾಸ್‌ಪೋರ್ಟ್ ಪಡೆಯಲು ಅರ್ಜಿ ಸಲ್ಲಿಕೆ ಮಾಡುವ ಜನರು ಈ ಕುರಿತು ಮಾಹಿತಿ ತಿಳಿಯುವುದು ಅಗತ್ಯವಾಗಿದೆ.
ಹೊಸ ನಿಯಮದ ಪ್ರಕಾರ ಪಾಸ್‌ಪೋರ್ಟ್ ಪಡೆಯುವಾಗ ಜನನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. 2023ರ ಅಕ್ಟೋಬರ್ 1ರ ಬಳಿಕ ಹುಟ್ಟಿದವರು ಪಾಸ್‌ಪೋರ್ಟ್ ಪಡೆಯುವಾಗ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು ಎಂದು ನಿಯಮವನ್ನು ಬದಲಾವಣೆ ಮಾಡಲಾಗಿದೆ.

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು-2023ರ ಅನ್ವಯ ಶುಕ್ರವಾರ ಈ ಕುರಿತು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಅಧಿಕೃತ ಆದೇಶವನ್ನು ಹೊರಡಿಸಿದೆ. 2025ರ ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮ ಎಂದು ಇದನ್ನು ಕರೆಯಲಾಗಿದೆ.
ಜನನ ಪ್ರಮಾಣ ಪತ್ರ ಕಡ್ಡಾಯ: ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮ-2055ರ ಅನ್ವಯ 2023ರ ಅಕ್ಟೋಬರ್ 1ರ ಬಳಿಕ ಹುಟ್ಟಿದ ಪ್ರತಿಯೊಬ್ಬರು ಪಾಸ್‌ಪೋರ್ಟ್ ಪಡೆಯುವಾಗ ಜನನ ಪ್ರಮಾಣ ಪತ್ರ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಆದರೆ ಈ ದಿನಾಂಕಕ್ಕಿಂತ ಮೊದಲು ಜನಿಸಿದವರು ಜನನ ಪುರಾವೆಯಾಗಿ ಪರ್ಯಾಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹೊಸ ಆದೇಶದ ಪ್ರಕಾರ ಅಕ್ಟೋಬರ್ 1, 2023ಕ್ಕಿಂತ ಮೊದಲು ಜನಿಸಿದವರು ಈ ದಾಖಲೆಗಳನ್ನು ಸಲ್ಲಿಕೆ ಮಾಡಬಹುದು.
* ಜನನ ಮತ್ತು ಮರಣಗಳ ನೋಂದಣಿಯ ಕಾಯ್ದೆ, 1969 ಅಡಿಯಲ್ಲಿ ಅಧಿಕಾರ ಹೊಂದಿರುವ ಜನನ ಮತ್ತು ಮರಣಗಳ ನೋಂದಣಾಧಿಕಾರಿ ಅಥವಾ ಮಹಾನಗರ ಪಾಲಿಕೆ ಅಥವಾ ಯಾವುದೇ ಇತರ ಪ್ರಾಧಿಕಾರದಿಂದ ನೀಡಿದ ಜನನ ಪ್ರಮಾಣಪತ್ರ.
* ಅರ್ಜಿ ಸಲ್ಲಿಸಿದವರ ಜನ್ಮದಿನಾಂಕವನ್ನು ಹೊಂದಿರುವ, ಗುರುತಿಸಲ್ಪಟ್ಟ ಶಾಲೆಯು ಕೊನೆಯ ಬಾರಿ ಹಾಜರಾಗಿದ್ದ ಅಥವಾ ಗುರುತಿಸಲ್ಪಟ್ಟ ಶಿಕ್ಷಣ ಮಂಡಳಿಯಿಂದ ನೀಡಿದ ವರ್ಗಾವಣೆ ಅಥವಾ ಶಾಲೆ ಬಿಟ್ಟು ಹೋಗುವ ಅಥವಾ ಮೆಟ್ರಿಕ್ಯುಲೇಶನ್ ಪ್ರಮಾಣ ಪತ್ರ.
* ಅರ್ಜಿದಾರರ ಜನನ ದಿನಾಂಕವನ್ನು ತಿಳಿಸುವ ಹಣಕಾಸು ಸಚಿವಾಲಯವು ನೀಡುವ ಪಾನ್ ಸಂಖ್ಯೆ.
* ಅರ್ಜಿದಾರರ ಸೇವಾ ದಾಖಲೆ ಅಥವಾ ವೇತನ ಪಿಂಚಣಿ ಆದೇಶದ ಪ್ರತಿಯೊಂದು ನಕಲು (ಇವು ಎರಡೂ ಸರ್ಕಾರದ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ), ಸಂಬಂಧಿತ ಇಲಾಖೆಯ ಆಡಳಿತಾಧಿಕಾರಿಯಿಂದ ಸರಿಯಾಗಿ ದೃಢೀಕರಿಸಲ್ಪಟ್ಟಿರಬೇಕು, ಇದರಲ್ಲಿ ಅರ್ಜಿದಾರರ ಜನ್ಮ ದಿನಾಂಕವಿರಬೇಕು.
* ಸಂಬಂಧಿತ ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯಿಂದ ನೀಡಲಾದ ಚಾಲನಾ ಪರವಾನಗಿ, ಇದರಲ್ಲಿ ಅರ್ಜಿದಾರರ ಜನ್ಮ ದಿನಾಂಕವಿರಬೇಕು.
* ಭಾರತದ ಚುನಾವಣಾ ಆಯೋಗದಿಂದ ನೀಡಲ್ಪಟ್ಟ, ಅಭ್ಯರ್ಥಿಯ ಜನ್ಮ ದಿನಾಂಕ ಹೊಂದಿರುವ ಚುನಾವಣಾ ಫೋಟೋ ಗುರುತಿನ ಕಾರ್ಡ್.
* ಭಾರತೀಯ ಜೀವ ವಿಮಾ ನಿಗಮ ಅಥವಾ ಸಾರ್ವಜನಿಕ ಕಂಪನಿಗಳಿಂದ ನೀಡಲ್ಪಟ್ಟ, ವಿಮಾ ಪಾಲಿಸಿಯ ಜನ್ಮ ದಿನಾಂಕ ಹೊಂದಿರುವ ಪಾಲಿಸಿ ಬಾಂಡ್.
ಆದೇಶದ ಪ್ರಕಾರ ಸರ್ಕಾರವು ಪಾಸ್‌ಪೋರ್ಟ್ ಪಡೆಯುವ ಇತರ ಯಾವುದೇ ನಿಯಮಗಳಲ್ಲಿ ಬದಲಾವಣೆ ಮಾಡಿಲ್ಲ. ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಅಥವಾ ಹಳೆಯ ಪಾಸ್‌ಪೋರ್ಟ್ ಅನ್ನು ನವೀಕರಿಸಲು ಇಚ್ಛಿಸುವ ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ ವಿದೇಶಾಂಗ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications