ಬಿಹಾರ ವಿಧಾನಸಭೆ ಚುನಾವಣೆ: 12 ಕ್ಯಾಬಿನೆಟ್ ಸಚಿವರು ಕಣದಲ್ಲಿ, 1,302 ಅಭ್ಯರ್ಥಿಗಳು
Bihar Assembly Elections 2025: ಬಿಹಾರ ವಿಧಾನಸಭೆ ಚುನಾವಣೆ ರಂಗೇರಿದೆ. ಎರಡನೇ ಹಾಗೂ ಅಂತಿಮ ಹಂತದ ಬಿಹಾರ ವಿಧಾನಸಭೆ ಚುನಾವಣೆ 2025 ಮಂಗಳವಾರ ನಡೆಯುತ್ತಿದ್ದು, ಇಂದಿನ (ನವೆಂಬರ್ 11)ಚುನಾವಣೆಯಲ್ಲಿ ಬಿಹಾರದ 12 ಕ್ಯಾಬಿನೆಟ್ ಸಚಿವರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದೆಹಲಿಯ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಭಾರೀ ಭದ್ರತೆಯ ನಡುವೆ ಚುನಾವಣೆ ನಡೆಯುತ್ತಿದೆ. ಇಲ್ಲಿನ ಪೂರ್ವ ಚಂಪಾರಣ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮುನ್ನಾದಿನದಂದು ಚುನಾವಣಾ ಅಧಿಕಾರಿಗಳು ಇವಿಎಂಎಸ್‌ಗಳನ್ನು ಸಂಗ್ರಹಿಸಿದ್ದರು.
ಮಂಗಳವಾರ ಎರಡನೇ ಹಂತದ ಚುನಾವಣೆಗಳು ನಡೆಯುತ್ತಿದ್ದು, ಇಂದು 1,302 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧಾರವಾಗಲಿದೆ. ಅವರಲ್ಲಿ 12 ಕ್ಯಾಬಿನೆಟ್ ಸಚಿವರು, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ರಾಮ್, ಮಾಜಿ ಉಪ ಮುಖ್ಯಮಂತ್ರಿ ಮತ್ತು 30 ಮಾಜಿ ಸಚಿವರು ಸಹ ಸೇರಿದ್ದಾರೆ ಎನ್ನುವುದು ವಿಶೇಷ. ನವೆಂಬರ್ 6 ರಂದು ನಡೆದ ಮೊದಲ ಹಂತದಲ್ಲಿ ದಾಖಲೆಯ 65% ಮತದಾನ ನಡೆದಿತ್ತು. ಎರಡನೇ ಹಂತದಲ್ಲೂ ಹೆಚ್ಚು ಪ್ರಮಾಣದ ಮತದಾನ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇಂದು 45,399 ಕೇಂದ್ರಗಳಲ್ಲಿ ಮತದಾನ ನಡೆಯುತ್ತಿದ್ದು, 3.7 ಕೋಟಿಗೂ ಹೆಚ್ಚು ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಪ್ರಾರಂಭಕ್ಕೂ ಮುಂಚೆ ಭಾರೀ ಹೈಡ್ರಾಮಾ ನಡೆದಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅಂತಿಮವಾಗಿ ಅಂತಿಮ ಹಂತದ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಸಿಂಗ್ ಗುಂಜಿಯಾಲ್ ಅವರು 20 ಜಿಲ್ಲೆಗಳಲ್ಲಿ ಎಲ್ಲಾ ಸಿದ್ಧತೆಗಳೊಂದಿಗೆ ಮತದಾನ ನಡೆಯಲಿದೆ ಎಂದಿದ್ದಾರೆ. 122 ಕ್ಷೇತ್ರಗಳಲ್ಲಿ ನಿಯೋಜಿಸಲಾದ ತಂಡಗಳಿಗೆ ಇವಿಎಂಗಳು ಮತ್ತು ವಿವಿಪಿಎಟಿ ಘಟಕಗಳನ್ನು ಎಲ್ಲಾ ಪರಿಶೀಲನೆಯ ನಂತರ ಹಂಚಲಾಗಿದೆ.
ಪ್ರಮುಖ ಆರು ಬಿಜೆಪಿ ಸಚಿವರು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರೇಮ್ ಕುಮಾರ್ (ಗಯಾ ಟೌನ್), ರೇಣು ದೇವಿ (ಬೆಟ್ಟಿಯಾ), ನಿತೀಶ್ ಮಿಶ್ರಾ (ಝಂಝರ್ಪುರ್), ವಿಜಯ್ ಕುಮಾರ್ ಮಂಡಲ್ (ಸಿಕ್ತಿ), ಕೃಷ್ಣ ನಂದನ್ ಪಾಸ್ವ್ (ಹರ್ಸಿದ್ಧಿ ಸಿಂಗ್). ಸಿಪಿಐ(ಎಂಎಲ್) ಲಿಬರೇಶನ್‌ನ ಮೆಹಬೂಬ್ ಆಲಂ ಮತ್ತು ಕಾಂಗ್ರೆಸ್‌ನ ಶಕೀಲ್ ಅಹ್ಮದ್ ಖಾನ್ ಹಲವರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕತಿಹಾರ್‌ನಿಂದ ಮಾಜಿ ಉಪ ಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್ ಅವರು ಐದನೇ ಬಾರಿ ಗೆಲುವಿನ ಹಾದಿಯಲ್ಲಿದ್ದಾರೆ.
ಎನ್‌ಡಿಎ ಸಣ್ಣ ಮಿತ್ರಪಕ್ಷಗಳಿಗೆ ಇದು ಸವಾಲಿನ ಚುನಾವಣೆಯಾಗಿದೆ. ಅಲ್ಲದೇ ಇಂಡಿಯಾ ಮೈತ್ರಿ ಕೂಟಕ್ಕೂ ಇದು ಸುಲಭವಾಗಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications