ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೊ ಯಾತ್ರೆ: ಆಂಧ್ರ ಪ್ರದೇಶದಲ್ಲೂ ರಾಹುಲ್‌ಗೆ ಅಭೂತಪೂರ್ವ ಸ್ವಾಗತ

|
Google Oneindia Kannada News

ಕರ್ನೂಲ್‌, ಅಕ್ಟೋಬರ್‌ 18: ಬಳ್ಳಾರಿಯಲ್ಲಿ ಒಂದು ದಿನದ ವಿರಾಮದ ನಂತರ ಆಂಧ್ರಪ್ರದೇಶದ ಕರ್ನೂಲ್‌ನಿಂದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಮತ್ತೆ ಆರಂಭವಾಗಿದೆ. ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆಯು ಈಗಾಗಲೇ ತಮಿಳು ನಾಡು, ಕೇರಳ ಹಾಗೂ ಕರ್ನಾಟಕವನ್ನು ಕ್ರಮಿಸಿದೆ. ಈ ಮೂರು ರಾಜ್ಯಗಳಲ್ಲಿ ಯಾತ್ರೆಗೆ ಸಿಕ್ಕಿರುವ ಅಭೂತಪೂರ್ವ ಜನಬೆಂಬಲ, ರಾಹುಲ್‌ ಹಾಗೂ ಕಾಂಗ್ರೆಸ್‌ಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ.

ಕರ್ನೂಲ್‌ ಜಿಲ್ಲೆಯ ಆಲೂರು ಕ್ಷೇತ್ರದಲ್ಲಿ ಬರುವ ಹಾಲಹರ್ವಿ ಎಂಬ ಸ್ಥಳವನ್ನು ತಲುಪುವ ಮೂಲಕ ಆಂಧ್ರಪ್ರದೇಶವನ್ನು ಭಾರತ್‌ ಜೋಡೊ ಯಾತ್ರೆ ಪ್ರವೇಶಿಸಿತು. ಛತ್ರಗುಡಿಯ ಹನುಮಾನ್ ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿದ ಬಳಿಕ ರಾಹುಲ್ ಪಾದಯಾತ್ರೆ ಮುಂದುವರಿಸಿದರು.

ಆಂಧ್ರದಲ್ಲೂ ಜೊತೆಯಾದ ಸಾವಿರಾರು ಜನ

ಕರ್ನಾಟಕದಂತೆ ಆಂಧ್ರ ಪ್ರದೇಶದಲ್ಲೂ ರಾಹುಲ್‌ಗೆ ಸ್ವಾಗತ ನೀಡಿರುವ ಸಾವಿರಾರು ಕಾರ್ಯಕರ್ತರು ಹಾಗೂ ನಾಗರಿಕರು, ಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ. ಅಕ್ಟೋಬರ್‌ 21ರ ವರೆಗೂ ಆಂಧ್ರ ಪ್ರದೇಶದಲ್ಲಿ ಸಾಗುವ ಭಾರತ್‌ ಜೋಡೊ ಯಾತ್ರೆಯು, ಆ ಬಳಿಕ ತೆಲಂಗಾಣವನ್ನು ಪ್ರವೇಶಿಸಲಿದೆ. ತೆಲಂಗಾಣನ ರಾಜಧಾನಿ ಹೈದರಾಬಾದ್‌ನಲ್ಲಿ ಸಂಚರಿಸಲಿರುವ ಯಾತ್ರೆಗೆ ಕಾಂಗ್ರೆಸ್‌ ಪಕ್ಷ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಕರ್ನಾಟಕದಂತೆ ಆಂಧ್ರ ಪ್ರದೇಶದಲ್ಲೂ ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ಉದ್ಯೋಗ ಆಕಾಂಕ್ಷಿಗಳ ಜೊತೆ ರಾಹುಲ್‌ ಸಂವಾದ ನಡೆಸಲಿದ್ದಾರೆ ಎಂದು ಪಕ್ಷವು ತಿಳಿಸಿದೆ.

Bharat Jodo Yatra Enters Andra Pradesh With Vigour Rahul Gandhi Gets Grand Welcome

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 96ರಷ್ಟು ಮತದಾನ

ಸೋಮವಾರ ನಡೆದ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 96ರಷ್ಟು ಮತದಾನವಾಗಿದೆ. ಪಕ್ಷದ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್‌ ಕಣದಲ್ಲಿದ್ದಾರೆ. ಅಕ್ಟೋಬರ್‌ 19 ರಂದು ಫಲಿತಾಂಶ ಹೊರಬೀಳಲಿದೆ. ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ಮತ ಎಣಿಕೆ ನಡೆಯಲಿದೆ.

ಮತದಾನ ಪ್ರಕ್ರಿಯೆಯು ಬೆಳಗ್ಗೆ 10ರಿಂದ ಆರಂಭವಾಗಿ 4 ಗಂಟೆಗೆ ಮುಕ್ತಾಯಗೊಂಡಿತು. ದೇಶದಾದ್ಯಂತ ಒಟ್ಟು 9,915 ಪ್ರತಿನಿಧಿಗಳ ಪೈಕಿ 9,497 ಪ್ರತಿನಿಧಿಗಳು ಮತ ಚಲಾಯಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧ್ಯತೆ

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜನ ಖರ್ಗೆ ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಹಿರಿಯ ನಾಯಕರಾಗಿರುವ ಖರ್ಗೆ ಅವರಿಗೆ ಗಾಂಧಿ ಪರಿವಾರದ ಬೆಂಬಲವಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಇದನ್ನು ಖರ್ಗೆ ಅಲ್ಲಗಳೆದಿದ್ದಾರೆ. ಕಾಂಗ್ರೆಸ್‌ ಕೆಲ ಪ್ರಮುಖ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಖರ್ಗೆ ಅವರು ಅಧ್ಯಕ್ಷರಾಗಿ ಆಯ್ಕೆ ಆಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.

ಐತಿಹಾಸಕ ದಿನವೆಂದು ಕಾಂಗ್ರೆಸ್‌ ನಾಯಕರು

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ ದಿನವನ್ನು ಚಾರಿತ್ರಿಕ ದಿನವೆಂದು ಕಾಂಗ್ರೆಸ್‌ ನಾಯಕರು ಬಣ್ಣಿಸಿದ್ದಾರೆ. ದೆಹಲಿಯಲ್ಲಿ ಮತ ನೀಡಿ ಮಾತನಾಡಿರುವ ಹಿರಿಯ ನಾಯಕ ಜೈರಾಮ್‌ ರಮೇಶ, 'ಭಾರತದ ಯಾವುದೇ ರಾಜಕೀಯ ಪಕ್ಷಗಳು ಅಧ್ಯಕ್ಷೀಯ ಚುನಾವಣೆ ನಡೆಸಿಲ್ಲ. ಆದರೆ, ಕಾಂಗ್ರೆಸ್‌ ನಡೆಸಿದೆ. ಇದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವಕ್ಕೆ ಸಾಕ್ಷಿ' ಎಂದು ತಿಳಿಸಿದ್ದಾರೆ.

ಭಾರತ್‌ ಜೋಡೊ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಕರ್ನಾಟಕದ ಬಳ್ಳಾರಿಯಲ್ಲಿ ಮತ ಚಲಾಯಿಸಿದ್ದಾರೆ. ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮತದಾನ ಮಾಡಿ ಪ್ರತಿಕ್ರಿಯಿಸಿರುವ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, 'ಈ ಸಮಯಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ' ಎಂದು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯದ ನಾಯಕರು ಹಾಗೂ ಪ್ರತಿನಿಧಿಗಳು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು.

English summary
Congress party resumed its ‘Bharat Jodo Yatra’ from Kurnool in Andhra Pradesh with renewed vigour and a band performance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X