
ಭಾರತ್ ಜೋಡೊ ಯಾತ್ರೆ ಹಿನ್ನೆಲೆ: ಚಳಿಗಾಲದ ಅಧಿವೇಶನಕ್ಕೆ ರಾಹುಲ್ ಗಾಂಧಿ ಗೈರಾಗುವ ಸಾಧ್ಯತೆ
ನವದೆಹಲಿ, ನವೆಂಬರ್ 03: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಹಲವು ಹಿರಿಯ ನಾಯಕರು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಚಳಿಗಾಲದ ಅಧಿವೇಶದ ಸಂದರ್ಭದಲ್ಲಿ ರಾಹುಲ್ ಗಾಂಧಿ ಹಾಗೂ ಇತರ ನಾಯಕರು ಭಾರತ್ ಜೋಡೊ ಯಾತ್ರೆಯನ್ನು ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ.

ಶನಿವಾರ ಸಂಜೆ ಕಾಂಗ್ರೆಸ್ ನಾಯಕರ ಸಭೆ
ಇಂದು ಸಂಜೆ 4 ಗಂಟೆಗೆ ಪಕ್ಷದ ಮಹತ್ವದ ಸಭೆ ನಡೆಯಲಿದ್ದು, ಇದರಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಆದ್ದರಿಂದ, ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮುಂದುವರಿಸುವ ಬಗ್ಗೆ ಕಾಂಗ್ರೆಸ್ ನಿರ್ಧರಿಸಬೇಕಾಗಿದೆ.

ಮಧ್ಯಪ್ರದೇಶದಲ್ಲಿ ಭಾರತ್ ಜೋಡೊ ಯಾತ್ರೆ ಅಂತ್ಯ
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ಮಧ್ಯಪ್ರದೇಶದಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿರುವುದು ಕಾಂಗ್ರೆಸ್ ನಾಯಕರಲ್ಲಿ ಹುರುಪು ತಂದಿದೆ. ಇದೊಂದು ಐತಿಹಾಸಿಕ ಯಾತ್ರೆ ಎಂದು ಕಾಂಗ್ರೆಸ್ ನಾಯಕರು ಬಣ್ಣಿಸಿದ್ದಾರೆ.
ಮಧ್ಯಪ್ರದೇಶದ ಬುರ್ಹಾನ್‌ಪುರ, ಖಾಂಡ್ವಾ, ಖಾರ್ಗೋನ್, ಇಂದೋರ್ ಹಾಗೂ ಅಗರ್ ಮಾಲ್ವಾ ಜಿಲ್ಲೆಗಳ ಮೂಲಕ ಯಾತ್ರೆ ಹಾದುಹೋಗಿದೆ. ಬಿಜೆಪಿ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಭಾರತ್ ಜೋಡೊ ಯಾತ್ರೆಗೆ ಜನ ಬೆಂಬಲ ಸಿಕ್ಕಿರುವುದು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಲಾಭ ತಂದು ಕೊಡಲಿದೆ ಎಂದು ಹೇಳಲಾಗುತ್ತಿದೆ.
ಯಾತ್ರೆಯಲ್ಲಿ ಸಾಮಾಜಿಕ ಹೋರಾಟಗಾರರು, ಕುಶಲ ಕರ್ಮಿಗಳು, ಕಲಾವಿದರು, ಸಿನಿಮಾ ನಟರು, ಕಾರ್ಮಿಕರು, ಮಾಜಿ ಸೈನಿಕರು ಸೇರಿದಂತೆ ಲಕ್ಷಾಂತರ ಜನರು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಡಿಸೆಂಬರ್ 4 ರಂದು ಯಾತ್ರೆ ರಾಜಸ್ಥಾನಕ್ಕೆ ಪ್ರವೇಶಿಸಲಿದ್ದು, ಅಲ್ಲಿ ಅದ್ದೂರಿ ತಯಾರಿಯನ್ನು ಮಾಡಿಕೊಳ್ಳಲಾಗಿದೆ.

ಹಿಮಾಚಲ, ಗುಜರಾತ್ ಚುನಾವಣೆಯಲ್ಲೂ ಸಕ್ರಿಯರಾಗದ ರಾಹುಲ್
ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗಳ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿಲ್ಲ. ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಒಂದು ಬಾರಿ ಕಾಣಿಸಿಕೊಂಡಿಲ್ಲ. ಆದರೆ, ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಕೇವಲ ಒಂದು ದಿನ ಮಾತ್ರ ರಾಹುಲ್ ಪಾಲ್ಗೊಂಡಿದ್ದರು. ಇದು ಪಕ್ಷಕ್ಕೆ ಹಿನ್ನೆಡೆಯನ್ನು ಉಂಟು ಮಾಡಲಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ರಾಹುಲ್ ಗಾಂಧಿ ಅವರು ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದನ್ನು ವಿರೋಧ ಪಕ್ಷಗಳೂ ಟೀಕಿಸಿದ್ದವು, ಆದರೆ, ಭಾರತ್ ಜೋಡೊ ಯಾತ್ರೆಯಿಂದ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚಿದ್ದು, ಪಕ್ಷ ಮತ್ತೆ ಪುಟಿದೇಳಲಿದೆ ಎಂಬುದು ಕಾಂಗ್ರೆಸ್‌ನ ಪ್ರಮುಖ ನಾಯಕರ ವಾದವಾಗಿದೆ.

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ರಾಹುಲ್, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಪ್ರಜಾಪ್ರಭುತ್ವದ ಎಲ್ಲ ದಾರಿಗಳನ್ನೂ ಮುಚ್ಚಿಹಾಕಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಮಾಧ್ಯಮ ರಂಗಗಳ ಮೇಲೆ ಮೋದಿ ಸರ್ಕಾರ ಹಿಡಿತ ಸಾಧಿಸಿದೆ. ಈ ಎಲ್ಲ ರಂಗಗಳ ಸೂಕ್ಷ್ಮ ಸ್ಥಾನಗಳಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಜನರು ಬಂದು ಕುಳಿತಿದ್ದಾರೆ ಎಂದು ಹರಿಹಾಯ್ದಿದ್ದರು.

ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿರುವ ಭಾರತ್ ಜೋಡೊ ಯಾತ್ರೆ
ತಮಿಳು ನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೊ ಯಾತ್ರೆ ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಈಗಾಗಲೇ ಭಾರತದ ಏಳು ರಾಜ್ಯಗಳಲ್ಲಿ ಸಾಗಿರುವ ಯಾತ್ರೆಯು ಡಿಸೆಂಬರ್ 4ರಂದು ರಾಜಸ್ಥಾನ ತಲುಪಲಿದೆ. ಮಧ್ಯಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಸಾಗಿರುವ ಯಾತ್ರೆಗೆ ಭಾರೀ ಜನಬೆಂಬಲ ದೊರೆತಿದೆ. ಭಾರತ್ ಜೋಡೊ ಯಾತ್ರೆಯು 3500 ಕಿಮೀ ಕ್ರಮಿಸಲಿದೆ.