ಈ ವಾರದಲ್ಲೇ ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ WHO ಅನುಮೋದನೆ ಸಾಧ್ಯತೆ
ನವದೆಹಲಿ, ಸೆಪ್ಟೆಂಬರ್ 13: ಭಾರತದಲ್ಲಿ ಅಭಿವೃದ್ಧಿಯಾಗಿರುವ ಕೊರೊನಾ ಲಸಿಕೆ 'ಕೋವ್ಯಾಕ್ಸಿನ್'ಗೆ ಈ ವಾರದಲ್ಲೇ ವಿಶ್ವ ಆರೋಗ್ಯ ಸಂಸ್ಥೆ- WHO ಅನುಮೋದನೆ ನೀಡುವ ಸಾಧ್ಯತೆಯಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ತಿಳಿಸಿದೆ.
ಭಾರತದಲ್ಲಿ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ಹಲವು ದೇಶಗಳಿಗೆ ಈ ಲಸಿಕೆಯನ್ನು ರಫ್ತು ಮಾಡಲಾಗಿದೆ. ಇದಾಗ್ಯೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ದೊರೆತಿಲ್ಲ.
ಈ ವಾರವೇ ಅನುಮೋದನೆ ದೊರೆಯುವ ಸಾಧ್ಯತೆಯಿದ್ದು, ಅನುಮೋದನೆ ದೊರೆತರೆ ಕೋವ್ಯಾಕ್ಸಿನ್ ಲಸಿಕೆಯನ್ನು ಇನ್ನಷ್ಟು ದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗಲಿದೆ. ಜೊತೆಗೆ ಈ ಲಸಿಕೆ ಪಡೆದ ಜನರಿಗೆ ಅಂತರರಾಷ್ಟ್ರೀಯ ಪ್ರಯಾಣವನ್ನು ಸರಾಗಗೊಳಿಸಲಿದೆ.

ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ದತ್ತಾಂಶ ಕೊರತೆ ಕಾರಣವಾಗಿ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಲು ಹಿಂದೇಟು ಹಾಕಿತ್ತು. ಲಸಿಕೆಯ ವೈದ್ಯಕೀಯ ಪ್ರಯೋಗಗಳ ಮಾಹಿತಿ ಕೊರತೆಯನ್ನು ಉಲ್ಲೇಖಿಸಿದ್ದ ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಕ ಸಂಸ್ಥೆ, ಈ ಲಸಿಕೆಯ ತುರ್ತು ಬಳಕೆಯ ದೃಢೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದು ವಿದೇಶಗಳಲ್ಲಿ ಅನುಮೋದನೆ ಪಡೆಯಲು ಕೋವ್ಯಾಕ್ಸಿನ್‌ಗೆ ಅಡೆತಡೆ ಉಂಟು ಮಾಡಿದೆ. ದೇಶದಲ್ಲಿ ಉತ್ಪಾದನೆಯಾಗುತ್ತಿರುವ "ಕೋವ್ಯಾಕ್ಸಿನ್" ದಕ್ಷತೆ ಬಗ್ಗೆ ಮೊದಲಿನಿಂದಲೂ ಕೆಲವು ಆಕ್ಷೇಪಗಳು ಕೇಳಿಬಂದಿದ್ದವು. ಮೂರನೇ ಹಂತದ ಪ್ರಯೋಗದ ವರದಿಯಿಲ್ಲದೇ ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದ್ದಕ್ಕೆ ವಿರೋಧಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕಿದ ಸಂಗತಿಗಳೂ ನಡೆದಿದ್ದವು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಬೇರೆ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡಲು ಭಾರತ್ ಬಯೋಟೆಕ್‌ಗೆ ತುರ್ತು ಬಳಕೆ ಪಟ್ಟಿ (EUL) ಅವಶ್ಯಕವಾಗಿದೆ. ಕೊರೊನಾ ಲಸಿಕೆಯ ಗುಣಮಟ್ಟ, ಸುರಕ್ಷತೆ ಹಾಗೂ ದಕ್ಷತೆಯನ್ನು ಈ EUL ಅಡಿಯಲ್ಲಿ ಪರೀಕ್ಷೆ ಮಾಡಲಾಗುತ್ತದೆ.
ಇಲ್ಲಿಯವರೆಗೆ ಆಸ್ಟ್ರಾಜೆನೆಕಾ- ಆಕ್ಸ್‌ಫರ್ಡ್‌ನ ಕೋವಿಶೀಲ್ಡ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್, ಫೈಜರ್, ಸಿನೋಫಾರ್ ಹಾಗೂ ಸಿನೋವ್ಯಾಕ್ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.

ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವಂತೆ ಭಾರತ್ ಬಯೋಟೆಕ್ ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ತುರ್ತು ಬಳಕೆಯ ಪಟ್ಟಿಗೆ (ಇಯುಎಲ್) ಸೇರಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿಕೊಂಡಿದೆ.
"ನಾವು ಕೋವ್ಯಾಕ್ಸಿನ್ ದತ್ತಾಂಶಗಳ ಮೇಲೆ ಗಮನ ಹರಿಸಿದ್ದೇವೆ. ಪ್ರಸ್ತುತ ಇಯುಎಲ್‌ನೊಂದಿಗೆ ಆರು ಲಸಿಕೆಗಳನ್ನು ಅನುಮೋದಿಸಿದ್ದೇವೆ ಮತ್ತು ನಮ್ಮ ಸ್ಟ್ರಾಟೆಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್ (ಎಸ್‌ಎಜಿಇ) ಯಿಂದ ಹಲವು ಲಸಿಕೆಗಳ ಶಿಫಾರಸುಗಳನ್ನು ಪಡೆದಿದ್ದೇವೆ. ಕೋವ್ಯಾಕ್ಸಿನ್ ಕುರಿತು ಶೀಘ್ರವೇ ನಿರ್ಧಾರ ಪ್ರಕಟಿಸಲಿದ್ದೇವೆ' ಎಂದು ಈಚೆಗೆ ಡಬ್ಲುಎಚ್‌ಒ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಅನುಮೋದನೆ ದೊರೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭೇಟಿ ಸಂದರ್ಭ ತಿಳಿಸಿದ್ದರು.
ಭಾರತದಲ್ಲಿ ಆರಂಭಿಕವಾಗಿ ಅನುಮೋದನೆ ಪಡೆದ ಎರಡು ಕೊರೊನಾ ಲಸಿಕೆಗಳಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯೂ ಒಂದು. ಈ ಲಸಿಕೆ ಕೊರೊನಾ ಸೋಂಕಿನ ವಿರುದ್ಧ 78% ಪರಿಣಾಮಕಾರಿ ಎನ್ನಲಾಗಿದೆ. ಇದೀಗ ಈ ವಾರದೊಳಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆಯನ್ನು ಭಾರತ್ ಬಯೋಟೆಕ್ ಪಡೆಯುವ ಭರವಸೆ ವ್ಯಕ್ತವಾಗಿದೆ.












Click it and Unblock the Notifications