Bengaluru Second Airport: 2033ರವರೆಗೆ ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣ ಇಲ್ಲ: ಕೇಂದ್ರ ಸರ್ಕಾರ
ಬೆಂಗಳೂರು: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಕರ್ನಾಟಕಕ್ಕೆ ಭಾರೀ ಹಿನ್ನಡೆ ಆಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಭಾರೀ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಭವಿಷ್ಯದ ದೃಷ್ಟಿಯಿಂದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಮುಂದಾಗಿತ್ತು. ಆದರೆ, ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸದ್ಯಕ್ಕೆ ನೋ ಎಂದಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
2033ರವರೆಗೆ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 25 ವರ್ಷ ತುಂಬುವವರೆಗೆ - 2033ರ ವರೆಗೆ ಬೆಂಗಳೂರಿನಲ್ಲಿ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅವಕಾಶ ಇರುವುದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೊಲ್ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಸಮಯದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದು. ಈ ವಿಚಾರವನ್ನು ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಹುದಿನಗಳ ಕನಸಿಗೆ ತಣ್ಣೀರೆರಚಿದಂತೆ ಆಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದ 150 ಕಿ.ಮೀ. ವೈಮಾನಿಕ ವ್ಯಾಪ್ತಿಯಲ್ಲಿ ಮೈಸೂರು ಹಾಗೂ ಹಾಸನ ವಿಮಾನ ನಿಲ್ದಾಣ ಹೊರತುಪಡಿಸಿದರೆ ಬೇರೆ ವಿಮಾನ ನಿಲ್ದಾಣಗಳ ಅಭಿವೃದ್ಧಿ ಅಥವಾ ನಿರ್ಮಾಣಕ್ಕೆ ಅನುಮತಿ ಇರುವುದಿಲ್ಲ. ಈ ವಿಚಾರವಾಗಿ ಈ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣ: ವೈಮಾನಿಕ ಅಂತರವೂ ಕಾರಣ
ಇನ್ನು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವು ವಿಳಂಬವಾಗುವುದಕ್ಕೆ ಹಾಗೂ 2033ರವರೆಗೆ ಮುಂದೂಡುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದಿಂದ 150 ಕಿ.ಮೀ ವೈಮಾನಿಕ ಅಂತರದ ಒಳಗೆ ಸಾಮಾನ್ಯವಾಗಿ ಗ್ರೀನ್‌ಫೀಲ್ಡ್ ನಿಲ್ದಾಣದ ಅಭಿವೃದ್ಧಿಗೆ ಅನುಮತಿ ಕಲ್ಪಿಸುವುದಿಲ್ಲ. ಆದಾಗ್ಯೂ, ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳ ಮೇಲೆ ಹೊಸ ವಿಮಾನ ನಿಲ್ದಾಣ ನಿರ್ಮಾಣದಿಂದ ಯಾವುದೇ ಪರಿಣಾಮ ಆಗಲ್ಲ ಎಂದಾದರೆ, ಈ ಅಂಶಗಳನ್ನು ಪರಿಶೀಲಿಸಬಹುದು. ಅಲ್ಲದೇ ಪ್ರಕರಣದಿಂದ ಪ್ರಕರಣಕ್ಕೆ ಅನುಗುಣವಾಗಿ ಅನುಮತಿಸಲು ಅವಕಾಶ ಇರಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಈ ಮೂಲಕ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇನ್ನೂ ಒಂದು ಸಣ್ಣ ಅವಕಾಶವೂ ಇದೆ ಎನ್ನುವಂತಾಗಿದೆ. ಆದರೆ ತಾತ್ಕಾಲಿಕವಾಗಿ ಈ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆ ಆದಂತೆ ಆಗಿದೆ.
ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಮೂರರಿಂದ ಐದು ಜಾಗಗಳನ್ನು ಗುರುತಿಸಲಾಗಿತ್ತು. ಮೂರು ಪ್ರದೇಶಗಳಲ್ಲಿ ಕೇಂದ್ರ ತಂಡವು ಬಂದು ಪರಿಶೀಲನೆಯನ್ನೂ ಮಾಡಿತ್ತು. ಆದರೆ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇದೀಗ ಭಾರೀ ಹಿನ್ನಡೆ ಎದುರಾದಂತೆ ಆಗಿದೆ.
ಇನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದ ವಿಮಾನ ನಿಲ್ದಾಣಗಳ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಅನುವು ಮಾಡಿಕೊಟ್ಟರೆ ಪ್ರಾಧಿಕಾರಕ್ಕೆ ಕೇಂದ್ರ, ರಾಜ್ಯ ಸರ್ಕಾರ ಅಥವಾ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವವರು ಪರಿಹಾರ ನೀಡಬೇಕು ಎಂಬ ನಿಯಮ ಇದೆ. ಆದರೆ, ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಗರಿಷ್ಠ ಮಟ್ಟಕ್ಕೆ ತಲುಪದ ಸಂದರ್ಭದಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದೂ ಹೇಳಲಾಗಿದೆ.












Click it and Unblock the Notifications