SWR: ರಾಜ್ಯೋತ್ಸವದಂದು ಕನ್ನಡಿಗರಿಗೆ ಸಿಹಿ ಸುದ್ದಿ! ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ ರೈಲಿಗೆ ಇಂದು ಚಾಲನೆ
ಬೆಂಗಳೂರು: ಕನ್ನಡಿಗರ ಬಹುದಿನಗಳ ಬೇಡಿಕೆ ರಾಜ್ಯೋತ್ಸವದ ಶುಭ ಗಳಿಗೆಯಂದೇ ಈಡೇರಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಇಂದು ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಬೆಂಗಳೂರು-ಮುಂಬೈ ಸಂಪರ್ಕಿಸುವ ವಂದೇ ಬಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು (Bengaluru-Mumbai Vande Bharat Sleeper) ಸೇವೆಗೆ ಹಸಿರು ಚಾಲನೆ ನೀಡಿದರು. ಅತೀ ಕಡಿಮೆ ಸಮಯದಲ್ಲಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ತಲುಪಬಹುದಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ರೈಲ್ವೆ ಖಾತೆ ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಮತ್ತು ಸಿ.ಎನ್. ಮಂಜುನಾಥ್ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯರಾದ ಲಹರ್ ಸಿಂಗ್ ಸಿರೋಯಾ ಮತ್ತು ನಟ ಜಗ್ಗೇಶ್ ಸೇರಿದಂತೆ ಅನೇಕ ಬಿಜೆಪಿ ಗಣ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರುಣ್ಣ ಅವರು, ರೈಲು ಯೋಜನೆಗಳಿಗೆ ಅಡಿಪಾಯ ಹಾಕುವುದು ಮತ್ತು ಅವುಗಳ ಉದ್ಘಾಟನೆಯನ್ನು ಒಂದೇ ಸರ್ಕಾರವು ಮಾಡಬೇಕೆಂಬುದು ಪ್ರಧಾನಿ ಮೋದಿಯವರ ತತ್ವವಾಗಿದೆ ಎಂದರು. ಇನ್ನೂ ಬಹುನಿರೀಕ್ಷೆಯ ದಕ್ಷಿಣ ಭಾರತದ ಮೊದಲ ಹಾಗೂ ಭಾರತದ ಎರಡನೇಯ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಲಭ್ಯವಾಗುವಂತೆ ಮಾಡಿದ ಕೇಂದ್ರ ವೈಷ್ಣವ್ ಅವರಿಗೆ ಕಾರ್ಯಕ್ರಮದಲ್ಲಿ ಧನ್ಯವಾದ ತಿಳಿಸಿದರು.
ಕೇಂದ್ರ ರೈಲ್ವೆ ಇಲಾಖೆಯು ಉತ್ತರ ಕರ್ನಾಟಕ ಹಾಗೂ ಮಧ್ಯ ಮತ್ತು ದಕ್ಷಿಣ ಭಾಗದ ರೈಲುಗಳ ಸುಧಾರಣೆ, ಹೊಸ ಯೋಜನೆ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ರಾಜ್ಯದ ರೈಲ್ವೆ ಅಭಿವೃದ್ಧಿಗಾಗಿ "ಕಳೆದ ಐದು ವರ್ಷಗಳಲ್ಲಿ 52,000 ಕೋಟಿ ರೂ.ಗಿಂತಲೂ ಹೆಚ್ಚು ಅನದಾನ ನೀಡಲಾಗಿದೆ. ದೇಶಾದ್ಯಂತ 14,000 ರೈಲ್ವೆ ಮೇಲ್ಸೇತುವೆಗಳನ್ನು (overbridges) ನಿರ್ಮಿಸಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ನಿರ್ಮಿಸಲಾದ 900ಕ್ಕೂ ಹೆಚ್ಚು ಮೇಲ್ಸೇತುವೆಗಳು ಸೇರಿವೆ ಎಂದು ವಿವರಿಸಿದರು.
ಮುಂಬೈ-ಬೆಂಗಳೂರು ವಿಬಿ ಸ್ಲೀಪರ್ ರೈಲು
ಪ್ರಸ್ತುತ ರೈಲು ಕರ್ನಾಟಕದ ದಕ್ಷಿಣ ಭಾಗದಿಂದ ಸಾಗಿ, ಆಂಧ್ರ ಪ್ರದೇಶ, ಕಲ್ಯಾಣ ಕರ್ನಾಟಕ, ಮಹಾರಾಷ್ಟ್ರವನ್ನು ತಲುಪುತ್ತದೆ. ನೈಋತ್ಯ ರೈಲ್ವೆ (SWR)ಯು ಈ ರೈಲನ್ನು ನಿರ್ವಹಣೆ ಮಾಡಲಿದೆ. ಬೆಂಗಳೂರಿನ ಎಸ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊಡುವ ಸ್ಲೀಪರ್ ವಂದೇ ಭಾರತ್ ರೈಲು (27652) ಸಂಜೆ 7.45ಕ್ಕೆ ಹೊರಟು, ಮರುದಿನ ಬೆಳಗ್ಗೆ 11.55ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ತಲುಪುತ್ತದೆ.
ಮುಂಬೈಗೆ 16 ಗಂಟೆಗಳಲ್ಲಿ ಸಂಚಾರ
ಮರಳಿ CSMT ನಿಂದ ವಂದೇ ಭಾರತ್ ಸ್ಲೀಪರ್ ರೈಲು (27651) ಮುಂಬೈನಿಂದ ರಾತ್ರಿ 8.10ಕ್ಕೆ ಹೊರಟು, ಮರುದಿನ ಮಧ್ಯಾಹ್ನ SMVT ಬೆಂಗಳೂರಿಗೆ ಆಗಮಿಸಲಿದೆ. ಒಟ್ಟು 22 ಗಂಟೆಗಳ ಪ್ರಯಾಣವನ್ನು ಈ ರೈಲು ಸುಮಾರು 16 ಗಂಟೆಗಳಿಗೆ ತಗ್ಗಿದೆ. ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದು, ಪ್ರಯಾಣಿಕರಿಗೆ ಅತ್ಯಂತ ಸುರಕ್ಷಿತ, ಆರಾಮದಾಯ ಸೇವೆ ನೀಡುತ್ತದೆ. ಸುದೀರ್ಘ ರಾತ್ರಿ ಪ್ರಯಾಣಕ್ಕೆ ಹೇಳಿ ಮಾಡಿಸಿದ ರೈಲು ಇದಾಗಿದೆ.
ಸಂಚಾರ ಮಾರ್ಗ, ನಿಲುಗಡೆ ನಿಲ್ದಾಣಗಳು
ಈ ರೈಲು ವಾರದಲ್ಲಿ ಆರು ದಿನ ಸಂಚಾರ ಮಾಡಲಿದ್ದು, ಬೆಂಗಳೂರಿನಿಂದ ಸೋಮವಾರ, ಮುಂಬೈನಿಂದ ಮಂಗಳವಾರ ಸಂಚಾರ ಮಾಡುವುದಿಲ್ಲ. ಬೆಂಗಳೂರಿನಿಂದ ಅನಂತಪುರ, ಗುಂತಕಲ್ ಜಂಕ್ಷನ್, ರಾಯಚೂರು ಜಂಕ್ಷನ್, ಯಾದಗಿರಿ, ಕಲಬುರಗಿ ಜಂಕ್ಷನ್, ಸೋಲಾಪುರ, ಪುಣೆ ಜಂಕ್ಷನ್, ಕಲ್ಯಾಣ್ ಮಾರ್ಗವಾಗಿ ಸಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಉದ್ಘಾಟನಾ ಸಂಚಾರ ನಡೆಸಿದೆ. ಈ ವೇಳೆ ವಿವಿಧ ವಿಭಾಗೀಯ ರೈಲ್ವೆ ಅಧಿಕಾರಿಗಳು, ಸಚಿವರು, ಶಾಸಕರು ರೈಲಿನಲ್ಲಿ ಸಂಚರಿಸಿ ಹೊಸ ಅನುಭವ ಪಡೆದುಕೊಂಡಿದ್ದಾರೆ.


Click it and Unblock the Notifications
