ಜಾಮೀನು ದಂಧೆ, ಕಳ್ಳಾಟಕ್ಕೆ ಸುಪ್ರೀಂ ಕಡಿವಾಣ

ಬೆಂಗಳೂರಿನಲ್ಲಿಯೂ ನಡೆಯುತ್ತದೆ ದಂಧೆ:
ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತೆ ಜಾಮೀನು ಪಡೆದು ಜೈಲಿನಿಂದ ಹೊರಬಂದ ಕೈದಿ ಕಾನೂನಿನಿಂದ ನುಣುಚಿಕೊಂಡರೆ ಭದ್ರತೆಯಾಗಿ ನಿಂತ ವ್ಯಕ್ತಿಯೇ ಜೈಲಿಗೆ ಹೋಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಇದು ನಿಜಕ್ಕೂ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಆದರೆ ಸಮಾಜದಲ್ಲಿ ದುಷ್ಟರು ಹೆಚ್ಚಾಗುತ್ತಿದ್ದಾರೆಂದೂ ಮಾನವ ಹಕ್ಕಿನ ಸೋಗಿನಲ್ಲಿ ಅಪರಾಧಿಗಳನ್ನು ರಕ್ಷಿಸುವ ಯತ್ನಗಳು ನಡೆಯುತ್ತಿವೆಯೆಂದು ಜಾಮೀನು ಕಳ್ಳಾಟಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಲು ಮುಂದಾಗಿದೆ.
ವಾಸ್ತವವಾಗಿ ಜಾಮೀನು ಪ್ರಕ್ರಿಯೆ ದೊಡ್ಡ ದಂಧೆ, ಖದೀಮರು ನಡೆಸುವ ಆಟಾಟೋಪ. ಬೆಂಗಳೂರಿನಲ್ಲಂತೂ ಇಂತಹ ಜಾಮೀನು ದಂಧೆ, ಕಳ್ಳಾಟಗಳು ನ್ಯಾಯಾಧೀಶರ ಮೂಗಿನಡಿಯಲ್ಲೇ ನಡೆಯುತ್ತಿರುವುದು ದೌರ್ಭಾಗ್ಯವೇ ಸರಿ.
ಬೆಂಗಳೂರಿನ ಒಂದಷ್ಟು ನ್ಯಾಯಾಲಯಗಳಲ್ಲಿ ಏನಾಗುತ್ತಿದೆಯೆಂದರೆ ಜಾಮೀನು ಪ್ರಕ್ರಿಯೆ ದೊಡ್ಡ ದಂಧೆಯಾಗಿದೆ. ಜಾಮೀನು ದೊರಕಿಸುವುದಕ್ಕಾಗಿಯೇ ಜನ ಕಾದುಕುಳಿತಿರುತ್ತಾರೆ. ಆರೋಪಿ/ಅಪರಾಧಿಯ ಮುಖಮೂತಿ ಗೊತ್ತಿರುವುದಿಲ್ಲ. ಆದರೆ ದುಡ್ಡಿನಾಸೆಗೆ ಸದರಿ ಆರೋಪಿ/ಅಪರಾಧಿ ನನ್ನ ಜನ್ಮಬಂಧುವೆಂದು ಹೇಳಿ ಜಾಮೀನು ದೊರಕಿಸಿಕೊಡುತ್ತಾರೆ. ಕೋರ್ಟು ಇಂತಿಷ್ಟು ಖಾತ್ರಿ ಹಣ ನೀಡಿ ಜಾಮೀನು ಪಡೆಯಬಹುದು ಎಂದು ಆದೇಶಿಸಿದರೆ ಆರೋಪಿ/ಅಪರಾಧಿ ಪರ ವಕೀಲ ತಕ್ಷಣ ಎಚ್ಚೆತ್ತುಕೊಳ್ಳುತ್ತಾನೆ.
ಕೋರ್ಟ್ ಅಂಗಳದಲ್ಲೇ ಬೀಡುಬಿಟ್ಟಿರುವ ಪುಡಾರಿಗಳನ್ನು ಆಯ್ಕೆ ಮಾಡಿಕೊಂಡು ಜಾಮೀನು ಪ್ರಕ್ರಿಯೆ ಸಲೀಸಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಇದರಲ್ಲಿ ಆತನಿಗೂ ಪಾಲು ಸಲ್ಲುತ್ತದೆ. ಇದು ಯಾವ ಮಟ್ಟದಲ್ಲಿದೆಯೆಂದರೆ ಒಂದೊಮ್ಮೆ ರೊಕ್ಕ ಲಕ್ಷಗಳಲ್ಲಿದ್ದು, ವೃಥಾ ಹಣವನ್ನೇಕೆ ಖಾತ್ರಿಯಾಗಿ ನೀಡಬೇಕು ಎಂದು ಜಮೀನು ಅಡ ಇಡುತ್ತಾರೆ. ಚೋದ್ಯವೆಂದರೆ ಅಸಲಿಗೆ ಆ ಜಮೀನು ಜಾಮೀನುದಾರನ ಹೆಸರಿನಲ್ಲೇ ಇರುವುದಿಲ್ಲ. ಅದು ಪಕ್ಕಾ ಫೋರ್ಜರಿಯಾಗಿರುವ ಯಾರದೋ ಸ್ಥಿರಾಸ್ತಿ.
ಇನ್ನೂ ತಮಾಷೆಯೆಂದರೆ ಒಂದೇ ಜಮೀನನ್ನು ಹತ್ತಾರು ಜಾಮೀನುಗಳಿಗೂ ಒತ್ತೆಯಾಗಿಡುವ ಪ್ರಕರಣಗಳು ಹತ್ತಾರಿವೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈಜೋಡಿಸುತ್ತದೆ. ಕೊನೆಗೆ ರೆವೆನ್ಯೂ ಇಲಾಖೆ ಸಹ. ಒಟ್ಟಾರೆಯಾಗಿ ಇಡೀ ದುಷ್ಟ ಕೂಟವೇ ಕೋರ್ಟ್ ಅಂಗಳದಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರೆಚುತ್ತಾರೆ.
ಬಹುಶಃ ಆ ಮಣ್ಣು ಕಣ್ಣಿಗೆ ಬೀಳುವುದು ಬೇಡವೆಂದೇ ನ್ಯಾಯದೇವತೆ ಕಣ್ಮುಚ್ಚಿಕೊಂಡಿರುವುದು ಅನಿಸುವಷ್ಟರ ಮಟ್ಟಿಗೆ ಈ ಜಾಮೀನು ದಂಧೆ, ಕಳ್ಳಾಟಗಳು ಯಾವುದೇ ಎಗ್ಗಿಲ್ಲದೆ ನಡೆಯುತ್ತದೆ. ಆದರೆ ಸುಪ್ರೀಂ ಕೋರ್ಟಿನ ಈಗಿನ ತೀರ್ಪನ್ನು ನೋಡಿದರೆ ಇಂತಹ ದಂಧೆ ಕಡಿವಾಣ ಬೀಳಲಿದೆ ಎಂದು ಆಶಿಸಬಹುದು.
ಸುಪ್ರೀಂ ಕೋರ್ಟ್ ಏನು ಹೇಳಿದೆಯೆಂದರೆ ಶಿಕ್ಷೆಯಾಗಿ ಜೈಲಿನಲ್ಲಿರುವವರು ಜಾಮೀನು ಪಡೆದುಕೊಂಡು ಬಿಡುಗಡೆಯಾಗಿ ಮಾಯವಾಗುತ್ತಿರುವ ಪ್ರಕರಣಗಳನ್ನು ನೋಡಿ ಮೂಕಪ್ರೇಕ್ಷಕನಂತೆ ಸುಮ್ಮನಿರುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಕೈದಿಗೆ ಜೈಲಿನಿಂದ ಹೊರಬರಲು ಜಾಮೀನಿಗೆ ಭದ್ರತೆಯಾಗಿ ನಿಂತ ವ್ಯಕ್ತಿಯ ವಿರುದ್ಧವೇ ಕ್ರಮ ಕೈಗೊಳ್ಳೂವಂತೆ ಸೂಚಿಸಿದೆ.
ಭೂಗತನಾದ ಕೈದಿಯನ್ನು ಬಂಧಿಸಿ ಮರಳಿ ನ್ಯಾಯಾಲಯಕ್ಕೆ ಕರೆತಲು ವಿಫಲರಾದರೆ ಮೇಲ್ಮನವಿಯನ್ನು ವಜಾಗೊಳಿಸುವ ಅಧಿಕಾರ ನ್ಯಾಯಾಲಯಗಳಿಗಿದೆ. ನ್ಯಾಯಾಲಯಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಕೈದಿಗಳು ಶಿಕ್ಷೆಯ ಅವಧಿ ಮುಗಿಯುವ ಮೊದಲೇ ಉದ್ದೇಶಪೂರ್ವಕವಾಗಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಭೂಗತರಾಗುವ ಪ್ರವೃತ್ತಿ ಹೆಚ್ಚಿದರೆ ಸಮಾಜದ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯಕ್ಕೆ ಭಂಗವಾಗುವ ಸಾಧ್ಯತೆಯಿದೆ ಎಂಬುದೂ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿದೆ.












Click it and Unblock the Notifications