ಪುಣೆ ಪೋರ್ಶೆ ಕಾರು ಅಪಘಾತ; ಬಾಲಕನ ಜಾಮೀನು ರದ್ದು
ಪುಣೆ, ಮೇ 22: ಪುಣೆಯಲ್ಲಿ ಪುಣೆ ಪೋರ್ಶೆ ಕಾರು ಅಪಘಾತ ನಡೆಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣನಾದ ಬಾಲಕನಿಗೆ ನೀಡಿದ್ದ ಜಾಮೀನು ರದ್ದುಗೊಳಿಸಲಾಗಿದೆ. ಈಗಾಗಲೇ ಈ ಪ್ರಕರಣದಲ್ಲಿ ಬಾಲಕನ ತಂದೆಯನ್ನು ಬಂಧಿಸಲಾಗಿದ್ದು, ಅವರು ಪೊಲೀಸ್ ವಶದಲ್ಲಿದ್ದಾರೆ.
ಮದ್ಯದ ನಶೆಯಲ್ಲಿ ಐಷಾರಾಮಿ ಪೋರ್ಶೆ ಕಾರು ಓಡಿಸಿ ಇಬ್ಬರು ಟೆಕ್ಕಿಗಳ ಸಾವಿಗೆ 17 ವರ್ಷದ ಬಾಲಕ ಕಾರಣನಾಗಿದ್ದ. ಬಾಲ ನ್ಯಾಯ ಮಂಡಳಿ ಎರಡು ದಿನಗಳ ಹಿಂದೆ ಬಾಲಕನಿಗೆ ಮಂಜೂರು ಮಾಡಿದ್ದ ಜಾಮೀನು ರದ್ದುಗೊಳಿಸಲಾಗಿದೆ.

ರಿಯಲ್ ಎಸ್ಟೇಟ್ ಡೆವಲಪರ್ ಪುತ್ರ ಜೂನ್ 5ರ ತನಕ ರಿಮಾಂಡ್ ಹೋಂನಲ್ಲಿಯೇ ಇರಬೇಕಾಗುತ್ತದೆ. ಬಾಲ ನ್ಯಾಯಮಂಡಳಿ ಮುಂದೆ ಬಾಲಕನನ್ನು ಹಾಜರುಪಡಿಸಿದಾಗ ತಾತನ ವಾಗ್ದಾನ ಮತ್ತು 7,500 ರೂ. ಗಳ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿತ್ತು, ಈಗ ಅದು ರದ್ದಾಗಿದೆ.
ಪ್ರಬಂಧ ಬರೆಯಲು ಹೇಳಿತ್ತು: ಬಾಲ ನ್ಯಾಯಮಂಡಳಿ 17 ವರ್ಷದ ಬಾಲಕನಿಗೆ ಜಾಮೀನು ನೀಡುವಾಗ ರಸ್ತೆ ಅಪಘಾತದ ಬಗ್ಗೆ ಪ್ರಬಂಧ ಬರೆಯಬೇಕು ಎಂದು ಹೇಳಿತ್ತು. ಬಾಲಕನ ತಾತ ಅಧ್ಯಯನ ಅಥವ ವೃತ್ತಿ ಜೀವನಕ್ಕೆ ಉಪಯುಕ್ತವಾಗುವ ಕೋರ್ಸ್ ಕಲಿಸುತ್ತೇನೆ. ಕೆಟ್ಟ ಸಹವಾಸದಿಂದ ದೂರವಿಡುತ್ತೇನೆ. ತನಗೆ ವಿಧಿಸಿರುವ ಷರತ್ತು ಪಾಲಿಸಲು ಆತ ಸಿದ್ಧನಿದ್ದಾನೆ ಎಂದು ಹೇಳಿಕೆ ನೀಡಿದ್ದರು.
ಕಾನೂನು ಸಂಘರ್ಷದಲ್ಲಿ ಸಿಲುಕಿದ ಬಾಲಕನಿಗೆ ಜಾಮೀನು ನೀಡುವುದು ನ್ಯಾಯ ಸಮ್ಮತವಾಗಿದೆ ಎಂದು ಹೇಳಿದ್ದ ಬಾಲ ನ್ಯಾಯ ಮಂಡಳಿ (ಜೆಜೆಬಿ) ಜಾಮೀನು ಮಂಜೂರು ಮಾಡಿತ್ತು. ಈಗ ಜಾಮೀನು ರದ್ದು ಮಾಡಿ, ರಿಮಾಂಡ್ ಹೋಂನಲ್ಲಿ ಜೂನ್ 5ರ ತನಕ ಇರುವಂತೆ ಆದೇಶಿಸಲಾಗಿದೆ.
ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಬಾಲಕ ಓಡಿಸುತ್ತಿದ್ದ ಐಷಾರಾಮಿ ಪೋರ್ಶೆ ಕಾರು ಅಪಘಾತವಾಗಿತ್ತು. ಬೈಕ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಟೆಕ್ಕಿಗಳಾದ ಅನಿಸ್ ಅವಾಧಿಯ (24), ಅಶ್ವಿನಿ ಕಾಸ್ಟಾ ಮೃತಪಟ್ಟಿದ್ದರು.
ಕಾರು ಓಡಿಸುವ ಮುನ್ನ ಮದ್ಯ ಕುಡಿಯಲು ಬಾಲಕ 48,000 ರೂ. ಖರ್ಚು ಮಾಡಿದ್ದ. ಬಾಲಕನಿಗೆ ಮದ್ಯ ಪೂರೈಕೆ ಮಾಡಿದ್ದ ಎರಡು ರೆಸ್ಟೋರೆಂಟ್‌ಗಳಿಗೆ ಬೀಗ ಜಡಿಯಲಾಗಿದೆ. ಪುಣೆ ಜಿಲ್ಲಾಧಿಕಾರಿಗಳ ಆದೇಶದಂತೆ ಮಹಾರಾಷ್ಟ್ರ ಅಬಕಾರಿ ಇಲಾಖೆ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಶನಿವಾರ ರಾತ್ರಿ 9.30ರಿಂದ ಮಧ್ಯರಾತ್ರಿ 1 ಗಂಟೆಯ ತನಕ ಎರಡು ರೆಸ್ಟೋರೆಂಟ್‌ಗಳಲ್ಲಿ ಬಾಲಕ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಮತ್ತಿನಲ್ಲಿಯೇ ಕಾರು ಚಲಾಯಿಸಿಕೊಂಡು ಬಂದಿದ್ದ. ಆಗ ಕಾರು ಬೈಕ್‌ಗೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದರು.
ಈ ಐಷಾರಾಮಿ ಪೋರ್ಶೆ ಕಾರು ಅಪಘಾತ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು.
ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಮಾತನಾಡಿ, "ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಪುಣೆಯ ಉಸ್ತುವಾರಿ ಸಚಿವ, ಡಿಸಿಎಂ ಅಜಿತ್ ಪವಾರ್ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ" ಎಂದು ಹೇಳಿದ್ದರು.
ರಸ್ತೆ ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣನಾದ 17 ವರ್ಷದ ಬಾಲಕನಿಗೆ ಯರೇವಾಡ ಠಾಣೆಯ ಅಧಿಕಾರಿ ಪಿಜ್ಜಾ, ಬರ್ಗರ್ ತರಿಸಿಕೊಟ್ಟಿದ್ದಾರೆ. ಒಂದು ವ್ಯವಸ್ಥೆ ಬಡವರಿಗೆ ಮತ್ತು ಶ್ರೀಮಂತರಿಗೆ ಹೇಗೆ ಭಿನ್ನವಾಗಿರುತ್ತದೆ? ಎನ್ನುವುದನ್ನು ಇದು ತೋರಿಸುತ್ತದೆ ಎಂದು ವಕೀಲ ಹಾಗೂ ಬಹುಜನ ಅಘಾಡಿ ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಆರೋಪಿಸಿದ್ದಾರೆ.












Click it and Unblock the Notifications