ಮಕ್ಕಳನ್ನು ಕೊರೊನಾದಿಂದ ರಕ್ಷಿಸಲು ಆಯುಷ್ ಸಚಿವಾಲಯದಿಂದ 'ಬಾಲ ರಕ್ಷಾ ಕಿಟ್'
ನವದೆಹಲಿ, ಸೆಪ್ಟೆಂಬರ್ 30: ಕೊರೊನಾ ಸೋಂಕಿನ ಮೂರನೇ ಅಲೆ ಭೀತಿ ನಡುವೆ, ಅಖಿಲ ಭಾರತ ಆಯುರ್ವೇದ ಸಂಸ್ಥೆ ಕೇಂದ್ರ ಆಯುಷ್ ಸಚಿವಾಲಯದ ಅಡಿಯಲ್ಲಿ, ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು 'ಬಾಲ ರಕ್ಷಾ ಕಿಟ್' ಪರಿಚಯಿಸಿದೆ.
16 ವರ್ಷದೊಳಗಿನ ಮಕ್ಕಳಿಗೆ ಸದ್ಯ ಕೊರೊನಾ ಸೋಂಕಿನ ವಿರುದ್ಧ ಲಸಿಕೆಯೂ ಲಭ್ಯವಿಲ್ಲದ ಕಾರಣ ಅವರ ದೇಹದಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಗೆ ಈ ಕಿಟ್ ಪರಿಚಯಿಸಲಾಗಿದೆ ಎಂದು ತಿಳಿಸಿದೆ.
ರಾಷ್ಟ್ರೀಯ ಆಯುರ್ವೇದ ದಿನವಾದ ನವೆಂಬರ್ 2ರಂದು ಉಚಿತವಾಗಿ ಸುಮಾರು ಹತ್ತು ಸಾವಿರ ಕಿಟ್‌ಗಳನ್ನು ವಿತರಣೆ ಮಾಡುತ್ತಿರುವುದಾಗಿ ತಿಳಿಸಿದೆ.

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹಾಗೂ ಮಕ್ಕಳನ್ನು ಆರೋಗ್ಯವಾಗಿಡಲು ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಬೇಕಿದೆ. ಈ ಕಿಟ್ ಅನ್ನು ಅದೇ ಉದ್ದೇಶದೊಂದಿಗೆ ಹೊರತರಲಾಗುತ್ತಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಸದ್ಯ ಇನ್ನೂ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಿಲ್ಲ. ಈ ಕಾರಣ ಬಾಲ ಸುರಕ್ಷಾ ಕಿಟ್ ಅನ್ನು ಅವರ ಆರೋಗ್ಯಕ್ಕಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
'ಬಾಲ ರಕ್ಷಾ ಕಿಟ್'ನಲ್ಲಿನ ಔಷಧದ ಕುರಿತು ಸಚಿವಾಲಯ ವಿವರಗಳನ್ನು ಹಂಚಿಕೊಂಡಿದ್ದು, ತುಳಸಿ, ದಾಲ್ಚಿನ್ನಿ, ಒಣದ್ರಾಕ್ಷಿ ಹಾಗೂ ಇತರೆ ಆಯುರ್ವೇದ ಔಷಧಿಗಳನ್ನು ಬಳಸಿ ಸಿರಪ್ ತಯಾರಿಸಲಾಗಿದೆ. ಇದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಇದರ ನಿರಂತರ ಸೇವನೆಯಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು ಖಚಿತ ಎಂದು ಮಾಹಿತಿ ನೀಡಿದೆ.

ಕಹಿ ಎಂಬ ಕಾರಣಕ್ಕಾಗಿ ಮಕ್ಕಳು ಕಷಾಯ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಅಂಥವರಿಗೆ ಈ ಸಿರಪ್ ಅತ್ಯುತ್ತಮ ಆಯ್ಕೆಯಾಗಿದೆ. ಈ ಸಿರಪ್‌ನಲ್ಲಿ ಬೇರೆ ಔಷಧಗಳ ಮಿಶ್ರಣವೂ ಇದ್ದು, ಶೀತ ಹಾಗೂ ಕೆಮ್ಮನ್ನು ತಡೆಗಟ್ಟಲಿದೆ ಎಂದು ಎಐಐಎ ನಿರ್ದೇಶಕಿ ಡಾ. ತನುಜಾ ನೇಸರಿ ವಿವರಿಸಿದ್ದಾರೆ.
ಈ ಔಷಧಿಯನ್ನು ಆಯುಷ್ ಸಚಿವಾಲಯದ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಅಡಿಯಲ್ಲಿ ತಯಾರಿಸಲಾಗಿದೆ. ಉತ್ತರಾಖಂಡದಲ್ಲಿನ ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್ (IMPCL) ಈ ಔಷಧಿ ತಯಾರಿಯಲ್ಲಿ ತೊಡಗಿಕೊಂಡಿದೆ.
ರಾಷ್ಟ್ರೀಯ ಆಯುರ್ವೇದ ದಿನದಂದು ಕಿಟ್ ಜೊತೆಗೆ ಐದು ಸಾವಿರ ಮಕ್ಕಳಿಗೆ ಸುರ್ವಣ ಪ್ರಾಶನವನ್ನು ನೀಡಲಾಗುತ್ತಿದೆ. 'ಈ ಉದ್ದೇಶದೊಂದಿಗೆ ನಾವು ಈಗಾಗಲೇ ದೆಹಲಿಯ ಶಾಲೆಗಳನ್ನು ಸಂಪರ್ಕಿಸಿದ್ದೇವೆ' ಎಂದು ಡಾ. ನೇಸರಿ ತಿಳಿಸಿದ್ದಾರೆ. ಮಕ್ಕಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸ್ವರ್ಣಪ್ರಾಶನ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.
ಬಾಲ ರಕ್ಷಾ ಕಿಟ್ ಹೊರತಾಗಿ AIIA ಈ ಹಿಂದೆ ಸ್ವಾಸ್ಥ್ಯ ಕಿಟ್, ಆರೋಗ್ಯ ರಕ್ಷಾ ಕಿಟ್ ಹಾಗೂ ಆಯು ರಕ್ಷಾ ಕಿಟ್ ತಯಾರಿಸಿ ಹೆಸರುವಾಸಿಯಾಗಿತ್ತು. ಇದೀಗ ಮಕ್ಕಳ ಸಮಗ್ರ ಆರೋಗ್ಯಕ್ಕಾಗಿ ಹೊಸ ಕಿಟ್ ಬಿಡುಗಡೆ ಮಾಡಿದೆ.
ಅಕ್ಟೋಬರ್- ನವೆಂಬರ್ ವೇಳೆಗೆ ಭಾರತದಲ್ಲಿ ಮೂರನೇ ಅಲೆ ಉಲ್ಬಣವಾಗಲಿದ್ದು, ಈ ಸಮಯದಲ್ಲಿ ಮಕ್ಕಳ ಮೇಲೆ ಕೊರೊನಾ ಸೋಂಕು ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಅಂದಾಜು ಮಾಡಿದ್ದಾರೆ. ಹೀಗಾಗಿ ದೇಶದಲ್ಲಿ ಮಕ್ಕಳ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಸದ್ಯಕ್ಕೆ ಭಾರತದಲ್ಲಿ 12-17 ವರ್ಷದ ಮಕ್ಕಳಿಗೆ ನೀಡಲು ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ನ ಕೊರೊನಾ ಲಸಿಕೆ ಝೈಕೋವ್-ಡಿಗೆ ಅನುಮೋದನೆ ನೀಡಲಾಗಿದೆ.
ಮುಂದಿನ ತಿಂಗಳಿನಿಂದ ಕ್ಯಾಡಿಲಾ ಹೆಲ್ತ್ ಕೇರ್‌ನ ಝೈಕೋವ್-ಡಿ ಲಸಿಕೆಯ ಸರಬರಾಜು ಆರಂಭವಾಗಲಿದ್ದು, ವರ್ಷಕ್ಕೆ 100ರಿಂದ 120 ದಶಲಕ್ಷ ಡೋಸ್‌ಗಳ ಲಸಿಕೆಯನ್ನು ಉತ್ಪಾದನೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.
ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ ಎಂದು ಕರೆಸಿಕೊಂಡಿರುವ ಝೈಕೋವ್-ಡಿ ಮೂರು ಡೋಸ್‌ಗಳ ಲಸಿಕೆಯಾಗಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿನ ಕ್ಯಾಡಿಲಾ ಹೆಲ್ತ್ ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಝೈಕೋವ್-ಡಿ ಕೊರೊನಾ ಲಸಿಕೆ ದಕ್ಷತೆಯು ಶೇ.66.60ರಷ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಡೆಲ್ಟಾ ಪ್ರಭೇದದ ವಿರುದ್ಧ ಪರಿಣಾಮಕಾರಿಯಾಗಿದೆ ಎಂದಿದೆ.












Click it and Unblock the Notifications