ಆರ್ಥಿಕವಾಗಿ ಭಾರತ ಶ್ರೀಮಂತವಾಯ್ತು, ಆದ್ರೆ ಜನರ ಜೀವನಮಟ್ಟ ಸುಧಾರಿಸಿತೇ? ಆಸ್ಟ್ರಿಯನ್ ಉದ್ಯಮಿಯ ವೈರಲ್ ಪೋಸ್ಟ್

ಜಾಗತಿಕ ಮಟ್ಟದಲ್ಲಿ ಭಾರತ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಹಾಗೆಯೇ, ದೇಶದಲ್ಲಿ ಉದ್ಯಮಿಗಳ ಹಾಗೂ ಮಿಲಿಯನೇರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ನಿಜಕ್ಕೂ ಸಾಮಾನ್ಯ ಜನರ ದೈನಂದಿನ ಜೀವನಮಟ್ಟ ಸುಧಾರಿಸಿದೆಯೇ?

ಕಳೆದ 22 ವರ್ಷಗಳಿಂದ ಭಾರತಕ್ಕೆ ಭೇಟಿ ನೀಡುತ್ತಿರುವ, ಇಂಡೋ-ಯುರೋಪಿಯನ್ ಬ್ಯುಸಿನೆಸ್ ಡೆವಲಪ್ಮೆಂಟ್ ಮಾಡೆಲ್‌ಗಳ ಮೇಲೆ ಕೆಲಸ ಮಾಡುವ ಆಸ್ಟ್ರಿಯಾದ ವಾಣಿಜ್ಯ ಸಲಹೆಗಾರ ವೋಲ್ಫ್‌ಗ್ಯಾಂಗ್ ಬರ್ಗ್‌ಥಾಲರ್ ಅವರು ಇತ್ತೀಚೆಗೆ ಹಂಚಿಕೊಂಡಿರುವ ಬರಹವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Austrian Consultant

ಬರ್ಗ್‌ಥಾಲರ್ ಅವರು " ಭಾರತದಲ್ಲಿ ವ್ಯಾಪಾರ ಅವಕಾಶಗಳಿಗೆ ಮಿತಿಯಿಲ್ಲ. ಮಿಲಿಯನೇರ್ ಆಗಲು ಭಾರತ ಉತ್ತಮ ಸ್ಥಳವಾಗಿದೆ," ಎಂದು ಹೇಳಿದ್ದಾರೆ. ಆದರೆ, ಇದೇ ವೇಳೆ ಅವರು ಶುದ್ಧ ಗಾಳಿ, ಕುಡಿಯುವ ನೀರು, ಸಾವಯವ ಆಹಾರ ಮತ್ತು ಖಾಸಗಿತನದಂತಹ ಮೂಲಭೂತ ಅವಶ್ಯಕತೆಗಳ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದ್ದಾರೆ. ದೇಶ ಶ್ರೀಮಂತವಾಗುತ್ತಿರುವ ವೇಗದಲ್ಲಿ ಜನಸಾಮಾನ್ಯರ ಮೂಲಸೌಕರ್ಯಗಳು ಮತ್ತು ಭಾರತದ ಜೀವನಮಟ್ಟ ಸುಧಾರಿಸುತ್ತಿಲ್ಲ ಎಂಬುದು ಅವರ ಕಳವಳ.

ಕಳಪೆ ಆಹಾರ ಪದ್ಧತಿ

"ಜನರು ಶ್ರೀಮಂತರಾದರು, ಆದರೆ ಅವರ ಆಹಾರ ಪದ್ಧತಿ ಕಳಪೆಯಾಯಿತು". ಇಂದು ಜಂಕ್ ಫುಡ್ ಮತ್ತು ಫಾಸ್ಟ್ ಫುಡ್‌ಗಳ ಲಭ್ಯತೆ ಎಲ್ಲೆಡೆ ಹೆಚ್ಚಾಗಿದೆ. ದೈಹಿಕ ಶ್ರಮ ಹಾಗೂ ಕ್ರೀಡೆಗಳ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ ಜನರು ತಮ್ಮ ಆರೋಗ್ಯದ ವಿಚಾರದಲ್ಲಿ ದೊಡ್ಡ ಬೆಲೆ ತೆರುತ್ತಿದ್ದಾರೆ ಎಂದು ಬರ್ಗ್‌ಥಾಲರ್ ಅಭಿಪ್ರಾಯಪಟ್ಟಿದ್ದಾರೆ.

ವ್ಯಾಪಾರೀಕರಣಗೊಂಡ ಮಾನವ ಸಂಬಂಧಗಳು

ಹಾಗೆಯೇ ಸಂಬಂಧಗಳು ಕೂಡಾ ಹೇಗೆ ವ್ಯಾಪಾರೀಕರಣಗೊಂಡಿವೆ ಎಂಬುದರ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. "ಇಲ್ಲಿ ಎಲ್ಲವೂ ಒಂದು ಬ್ಯುಸಿನೆಸ್ ಆಗಿ ಬದಲಾಗಿದೆ. ಭಾರತೀಯರು ಹಣ ಸಂಪಾದಿಸುವುದರಲ್ಲಿ ಯಾವಾಗಲೂ ಮುಂದಿದ್ದಾರೆ. ಆದರೆ ಇಂದು ಆರೋಗ್ಯ, ಶಿಕ್ಷಣ ಮತ್ತು ಸ್ನೇಹ ಕೂಡಾ ಲಾಭ-ನಷ್ಟದ ಲೆಕ್ಕಾಚಾರದಂತೆ ಭಾಸವಾಗುತ್ತಿದೆ. ಯಾವುದೇ ಲಾಭದ ನಿರೀಕ್ಷೆ ಇಲ್ಲದ ಮುಗ್ಧ ಸಂಬಂಧಗಳಿಗೆ ಜಾಗ ಎಲ್ಲಿದೆ?" ಎಂದು ಅವರು ಪ್ರಶ್ನಿಸಿದ್ದಾರೆ.

ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆಯೂ ಅವರು ಬರೆದಿದ್ದು, ಜನರು ಸದಾ ಮೊಬೈಲ್ ಸ್ಕ್ರೋಲ್ ಮಾಡುತ್ತಿರುತ್ತಾರೆ. ಒಂದು ಕಾಲದಲ್ಲಿ ಗಂಟೆಗಟ್ಟಲೆ ನಡೆಯುತ್ತಿದ್ದ ಮಾತುಕತೆಗಳು ಈಗ ಇಲ್ಲವಾಗಿವೆ. "ಜನರ ಏಕಾಗ್ರತೆಯ ಸಮಯ ಗಂಟೆಗಳಿಂದ ಕೇವಲ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಇಳಿದಿದೆ" ಎಂದು ಅವರು ಹೇಳಿದ್ದಾರೆ. ಜೊತೆಗೆ, ಜಾಗತಿಕ ಕಂಪನಿಗಳು ಹಾಗೂ ಹೊಸ ತಂತ್ರಜ್ಞಾನಗಳಿದ್ದರೂ, ಭಾರತದಲ್ಲಿ ಹಳೆಯ ಶ್ರೇಣೀಕೃತ ವ್ಯವಸ್ಥೆಗಳು ಹಾಗೆಯೇ ಉಳಿದುಕೊಂಡಿವೆ ಎಂದಿದ್ದಾರೆ.

ಪ್ರಗತಿಗೆ ಭಾರತೀಯರು ತೆರುತ್ತಿರುವ ದೊಡ್ಡ ಬೆಲೆ

ಬರ್ಗ್‌ಥಾಲರ್ ಅವರ ಪ್ರಕಾರ, ಭಾರತವು ಹಿಂದಕ್ಕೆ ಹೋಗುತ್ತಿದೆ ಎಂದರ್ಥವಲ್ಲ. ದೇಶವು ನಂಬಲಾಗದಷ್ಟು ಪ್ರಗತಿ ಸಾಧಿಸಿದೆ, ಆದರೆ ಅದಕ್ಕಾಗಿ ಭಾರತೀಯರು ಅತಿ ದೊಡ್ಡ ಬೆಲೆ ತೆರುತ್ತಿದ್ದಾರೆ. ಅವರ ಈ ಪೋಸ್ಟ್ ಅನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮೋನಿಕಾ ಜಸುಜಾ, "ನಿಮ್ಮ ಆದಾಯ ದ್ವಿಗುಣಗೊಂಡು, ನೀವು ಉಸಿರಾಡುವ ಗಾಳಿ, ಕುಡಿಯುವ ನೀರು, ಟ್ರಾಫಿಕ್ ಮತ್ತು ದೈನಂದಿನ ಜೀವನದ ಗುಣಮಟ್ಟ ಹದಗೆಟ್ಟರೆ, ನೀವು ನಿಜಕ್ಕೂ ಉತ್ತಮ ಸ್ಥಿತಿಯಲ್ಲಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.

ಈ ಪೋಸ್ಟ್ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನ ಹುಟ್ಟುಹಾಕಿದೆ. ಕೆಲವರು ಮಹಾನಗರಗಳು ಮತ್ತು ಟೆಕ್ ಸಿಟಿಗಳಲ್ಲಿ ಆಗಿರುವ ದೊಡ್ಡ ಮಟ್ಟದ ಅಭಿವೃದ್ಧಿ, ಸ್ಟಾರ್ಟ್‌ಅಪ್‌ಗಳ ಏರಿಕೆ ಮತ್ತು ಮೂಲಸೌಕರ್ಯಗಳ ವಿಸ್ತರಣೆಯನ್ನ ಬೆಂಬಲಿಸಿ ಮಾತನಾಡಿದ್ದಾರೆ. ಆದರೆ, ಬಹುಪಾಲು ಜನರು ಬರ್ಗ್‌ಥಾಲರ್ ಅವರ ಮಾತುಗಳಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿನ ಕಲುಷಿತ ವಾತಾವರಣ, ಟ್ರಾಫಿಕ್ ದಟ್ಟಣೆ, ಕಳಪೆ ರಸ್ತೆಗಳು, ಕಲಬೆರಕೆ ಆಹಾರ ಮತ್ತು ಸಾರ್ವಜನಿಕ ಮೂಲಸೌಕರ್ಯಗಳ ದುಸ್ಥಿತಿಯ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಕೇವಲ ಜಿಡಿಪಿ (GDP) ಏರಿಕೆ, ಷೇರು ಮಾರುಕಟ್ಟೆಯ ಜಿಗಿತ ಅಥವಾ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವುದು ಮಾತ್ರ ದೇಶದ ಪ್ರಗತಿಯ ಅಳತೆಗೋಲಾಗಬೇಕೇ? ಅಥವಾ ಸಾಮಾನ್ಯ ಮನುಷ್ಯನ ದೈನಂದಿನ ಜೀವನದ ಗುಣಮಟ್ಟವೂ ಅಷ್ಟೇ ಮುಖ್ಯವೇ ಎಂಬ ದೊಡ್ಡ ಚರ್ಚೆ ಈಗ ರಾಷ್ಟ್ರಮಟ್ಟದಲ್ಲಿ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+