ಮನಾಲಿ ಮಳೆ: ನೀರಿನ ಹರಿವಿಗೆ ಕೊಚ್ಚಿ ಹೋದ ಎಸ್‌ಬಿಐ ಬ್ಯಾಂಕ್‌ನ ಎಟಿಎಂ, ಅಂಗಡಿಗಳು- ವಿಡಿಯೋ
ದೇಶದ ಹಲವೆಡೆ ಮಳೆಯ ಅರ್ಭಟ ಜೋರಾಗಿದ್ದು ಎಲ್ಲೆಡೆ ನದಿ ನೀರು ಉಕ್ಕಿ ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ರಸ್ತೆಗಳು ಜಲಾವೃತಗೊಂಡಿವೆ. ಮನೆಗಳಿಗೆ ಮಳೆ ನೀರು ನುಗ್ಗಿ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಮನಾಲಿಯಲ್ಲಿ ಎಡಬಿಡದೆ ಭಾರೀ ಮಳೆ ಸುರಿಯುತ್ತಿದ್ದು, ನೀರಿನ ಹರಿವಿಗೆ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಮತ್ತು ಅಂಗಡಿಗಳು ಕೊಚ್ಚಿ ಹೋಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ, ಹಿಮಾಚಲ ಪ್ರದೇಶ ಸೇರಿದಂತೆ ಭಾರಿ ಮಳೆಯಾಗುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಳೆಯಿಂದಾದ ಹಾನಿಯ ಬಗ್ಗೆ ತೋರಿಸುತ್ತಿವೆ.

ದೆಹಲಿ, ಹರಿಯಾಣ, ಚಂಡೀಗಢ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಜುಲೈ 9 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತದೆ. ಭಾನುವಾರ ಕುಲು ಬಳಿಯ ಬಿಯಾಸ್ ನದಿಯಲ್ಲಿ ಕಾರೊಂದು ಕೊಚ್ಚಿ ಹೋಗುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೋವೊಂದರಲ್ಲಿ ನಿಲುಗಡೆ ಮಾಡಲಾದ ಕಾರು ನದಿಯಲ್ಲಿ ಮುಳುಗಲು ಪ್ರಾರಂಭಿಸುತ್ತದೆ. ನಂತರ ನದಿಯ ಭಾರೀ ಹರಿವಿನೊಂದಿಗೆ ಕೊಚ್ಚಿ ಹೋಗುವುದನ್ನು ಕಾಣಬಹುದು.
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಭಾರೀ ಮಳೆಯಾದ ಹಿನ್ನೆಲೆ ನದಿಗಳು ಉಕ್ಕಿ ಹರಿಯುತ್ತಿದೆ. ಮಳೆಯ ಆರ್ಭಟಕ್ಕೆ ಶಿಮ್ಲಾ-ಕಲ್ಕಾ ಪಾರಂಪರಿಕ ರೈಲು ಹಳಿಗಳು ಮುಳುಗಿದ್ದು, ರೈಲ್ವೇ ಸಂಚಾರವನ್ನು ಸದ್ಯ ರದ್ದುಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
#Watch: SBI Bank ATM and shops swept away by the heavy water flow in Manali.#Kullu #MANALI #Kullu #landslide #HimachalPradesh #flood #floods #flooding #ndrf #Rescue #Exclusive #BreakingNews #BREAKING pic.twitter.com/HpgiySV5dr
— upuknews (@upuknews1) July 9, 2023
ಹಿಮಾಚಲ ಪ್ರದೇಶದಲ್ಲಿ ಭೂಕುಸಿತಗಳು ಹಿಮಾಚಲ ಪ್ರದೇಶದ ಶಿಮ್ಲಾ, ಲಾಹೌಲ್, ಸ್ಪಿತಿ, ಚಂಬಾ ಮತ್ತು ಸೋಲನ್ ಜಿಲ್ಲೆಗಳಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹವು ಹಲವಾರು ರಸ್ತೆಗಳನ್ನು ನಿರ್ಬಂಧಿಸಿದೆ. ಹಿಮಾಚಲ ಪ್ರದೇಶದ ಗ್ರಾಮಪು ಗ್ರಾಮ ಮತ್ತು ಚೋಟಾದಲ್ಲಿ ಭಾನುವಾರ ನಸುಕಿನಲ್ಲಿ ಧಾರಾಕಾರ ಮಳೆಗೆ ಭೂಕುಸಿತ ಉಂಟಾಗಿ ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 30 ಕಾಲೇಜು ವಿದ್ಯಾರ್ಥಿಗಳ ಗುಂಪನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶಿಮ್ಲಾ ಜಿಲ್ಲೆಯ ಕೋಟ್‌ಗಢ್ ಪ್ರದೇಶದಲ್ಲಿ ಮಳೆಯಿಂದಾಗಿ ಭೂಕುಸಿತದ ನಂತರ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಅನಿಲ್, ಅವರ ಪತ್ನಿ ಕಿರಣ್ ಮತ್ತು ಪುತ್ರ ಸ್ವಪ್ನಿಲ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತದಿಂದ ಕುಲು ಪಟ್ಟಣದ ಸಮೀಪ ತಾತ್ಕಾಲಿಕ ಮನೆಗೂ ಹಾನಿಯಾಗಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಮಳೆಯ ಅವಾಂತರದಿಂದ ಎಚ್ಚೆತ್ತುಕೊಳ್ಳಲು ಜನರಿಗೆ ಈಗಾಗಲೇ ಸೂಚನೆ ನೀಡಿರುವ ಹವಾಮಾನ ಇಲಾಖೆ, ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಭಾನುವಾರ ಕೂಡ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಕೆ ನೀಡಿದೆ. ಕುಲು ಜಿಲ್ಲಾಡಳಿತವು ಶ್ರೀಖಂಡ್ ಮಹಾದೇವ್ ಯಾತ್ರೆಯನ್ನು ಜುಲೈ 11 ರವರೆಗೆ ಮುಂದೂಡಿದ್ದು, ಯಾತ್ರಾರ್ಥಿಗಳಿಗೆ ಮಳೆಯಲ್ಲಿ ಟ್ರೆಕ್ಕಿಂಗ್ ಮಾಡದಂತೆ ಮನವಿ ಮಾಡಿದೆ.












Click it and Unblock the Notifications