Atishi Marlena: ದೆಹಲಿ ನೂತನ ಸಿಎಂ ಆಗಿ ಅತಿಶಿ ಪ್ರಮಾಣವಚನ ಸ್ವೀಕಾರ
ನವದೆಹಲಿ, ಸೆಪ್ಟೆಂಬರ್, 21: ಇತ್ತೀಚೆಗಷ್ಟೇ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದರು. ಇದೀಗ ಎಎಪಿ ನಾಯಕಿ ಅತಿಶಿ ಅವರು ಇಂದು (ಸೆಪ್ಟೆಂಬರ್ 21) ಮಧ್ಯಾಹ್ನ ನವದೆಹಲಿ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಜೊತೆಗೆ ಎಎಪಿಯ ಐವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ & ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆ ಬಳಿಕ ಅತಿಶಿ ಅವರೇ ನೂತನ ಸಿಎಂ ಎಂದು ಘೋಷಣೆ ಮಾಡಲಾಯಿತು. ಅದರಂತೆಯೇ ಇಂದು ದೆಹಲಿ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗೆಯೇ ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆಯನ್ನು ಸಹ ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ಎಎಪಿ ನಾಯಕರೊಬ್ಬರ ಪ್ರಕಾರ, ಕೇಜ್ರಿವಾಲ್ ಅವರ ರಾಜೀನಾಮೆಯಿಂದಾಗಿ ಮತ್ತು ಅನುಮೋದನೆಯಲ್ಲಿ ವಿಳಂಬ ಆಗಿದೆ. ಪಕ್ಷದ ಚಿತ್ತವು ಕೂಡ ಉತ್ಸಾಹಭರಿತವಾಗಿಲ್ಲ. ಆದ್ದರಿಂದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಕಾರ್ಯಕ್ರಮಬವು ಕಡಿಮೆ ಅವಧಿಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಎಎಪಿ ಶಾಸಕರು ಈ ವಾರದ ಆರಂಭದಲ್ಲಿ ಸಭೆ ನಡೆಸಿ ಅತಿಶಿ ಅವರನ್ನು ಆಡಳಿತಾರೂಢ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು. ಇನ್ನು ಎಎಪಿ ಘೋಷಿಸಿದ ಹೊಸ ಸಚಿವ ಸಂಪುಟದಲ್ಲಿ ಗೋಪಾಲ್ ರೈ, ಕೈಲಾಶ್ ಗಹ್ಲೋಟ್, ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್ ಮತ್ತು ಸುಲ್ತಾನ್‌ಪುರ ಮಜ್ರಾದಿಂದ ಮೊದಲ ಬಾರಿಗೆ ಶಾಸಕರಾಗಿರುವ ಮುಖೇಶ್ ಅಹ್ಲಾವತ್ ಸೇರಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಸೆಪ್ಟೆಂಬರ್ 13ರಂದು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದು. ಅಬಕಾರಿ ನೀತಿ ಪ್ರಕರಣದಲ್ಲಿ ಅವರು ಜೈಲಿನಲ್ಲಿದ್ದರು. ಬಿಡುಗಡೆಯಾದ ಬಳಿಕವೇ ಕೇಜ್ರಿವಾಲ್ ಅವರು ಭ್ರಷ್ಟಾಚಾರದ ಬಗ್ಗೆ ತಮ್ಮ ವಿರುದ್ಧ ಬಿಜೆಪಿ ಕೆಸರೆರಚಾಟದ ಹಿನ್ನೆಲೆ ಸಿಎಂ ಪದವಿಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು. ಇದು ಜನರಲ್ಲಿ ತುಂಬಾ ಅಚ್ಚರಿಯನ್ನು ಹುಟ್ಟುಹಾಕಿತು.
ವಿಧಾನಸಭಾ ಚುನಾವಣೆಯಲ್ಲಿ ದೆಹಲಿ ಜನರಿಂದ ಪ್ರಾಮಾಣಿಕತೆಯ ಪ್ರಮಾಣಪತ್ರ ಪಡೆದ ನಂತರ ಮುಖ್ಯಮಂತ್ರಿ ಹುದ್ದೆಗೆ ಮತ್ತೆ ಮರಳುವುದಾಗಿ ಕೇಜ್ರಿವಾಲ್ ಘೋಷಿಸಿದ್ದರು. ಇನ್ನು ಅವರ ಸರ್ಕಾರವು ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ, ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ 2.0 ಮತ್ತು ಮನೆ ಬಾಗಿಲಿಗೆ ತಲುಪಿಸುವಂತಹ ವಿವಿಧ ಬಾಕಿ ಉಳಿದಿರುವ ನೀತಿಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಅನುಮೋದನೆಯನ್ನು ನೀಡಬೇಕಾಗಿದೆ.
ಗೋಪಾಲ್ ರೈ ರೈ ಅವರು ಪರಿಸರ, ಅಭಿವೃದ್ಧಿ ಮತ್ತು ಸಾಮಾನ್ಯ ಆಡಳಿತ ಇಲಾಖೆಗಳ ಉಸ್ತುವಾರಿ ವಹಿಸಿದ್ದರೆ, ಭಾರದ್ವಾಜ್ ಅವರು ಆರೋಗ್ಯ, ಪ್ರವಾಸೋದ್ಯಮ ಮತ್ತು ನಗರಾಭಿವೃದ್ಧಿ ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದರು. ಗಹ್ಲೋಟ್ ಅವರು ಸಾರಿಗೆ, ಗೃಹ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಜವಾಬ್ದಾರಿಯನ್ನು ಹೊಂದಿದ್ದರು, ಹುಸೇನ್ ಆಹಾರ ಮತ್ತು ಸರಬರಾಜು ಸಚಿವರಾಗಿದ್ದರು. ಇನ್ನು ಹೊಸ ಕ್ಯಾಬಿನೆಟ್‌ನಲ್ಲಿ ಉಳಿಸಿಕೊಂಡಿರುವ ನಾಲ್ವರು ಸಚಿವರು ತಮ್ಮ ಹಿಂದಿನ ಖಾತೆಗಳಲ್ಲೇ ಮುಂದುವರೆಯುವ ಸಾಧ್ಯತೆಯಿದೆ ಎಂದು ಎಎಪಿ ಮೂಲಗಳು ತಿಳಿಸಿವೆ.












Click it and Unblock the Notifications