5 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ: 3 ಕಡೆ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ!
2026 Election in India: ಈ ವರ್ಷ ಹಾಗೂ 2026ನೇ ಸಾಲಿನ ವರ್ಷದಲ್ಲಿ ಬಿಹಾರವೂ ಸೇರಿದಂತೆ ದೇಶದ ಆರು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಲವು ಕಾರಣಗಳಿಗೆ ಈ ವಿಧಾನಸಭೆ ಚುನಾವಣೆಗಳು ಮಹತ್ವ ಪಡೆದುಕೊಂಡಿವೆ. ಇನ್ನು ಈ ವಿಧಾನಸಭೆ ಚುನಾವಣೆಯು ಬಿಜೆಪಿ - ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ಸ್ಥಳೀಯ ಪಕ್ಷಗಳಿಗೆ ಅತ್ಯಂತ ಮುಖ್ಯ ಚುನಾವಣೆ ಆಗಿದೆ. ಇನ್ನು ಈ ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ಈ ಕಾರಣಕ್ಕೆ ಇದು ಮಹತ್ವದ್ದಾಗಿದೆ. ಅಲ್ಲದೇ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಚರ್ಚೆಯ ನಡುವೆ ಎರಡೂ ಭಾಗದಲ್ಲೂ ಚುನಾವಣೆ ನಡೆಯಲಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಇದೇ ವರ್ಷಾಂತ್ಯದಲ್ಲಿ ಬಿಹಾರದ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಹಾರದ ವಿಧಾನಸಭೆ ಚುನಾವಣೆಯು ಹಲವು ಕಾರಣಗಳಿಗೆ ಮಹತ್ವವನ್ನು ಪಡೆದುಕೊಂಡಿದೆ. ಅದರಲ್ಲಿ ಮುಖ್ಯವಾಗಿ ದೇಶದಲ್ಲಿ ಜನ ಜಾತಿಗಣತಿಯನ್ನು ಹೇಗೆ ನೋಡುತ್ತಿದ್ದಾರೆ. ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಇದೆಯೇ. ಜನ ಎನ್‌ಡಿಎ ನೇತೃತ್ವವನ್ನು ಒಪ್ಪಿಕೊಳ್ಳಲಿದ್ದಾರೆಯೇ ಎನ್ನುವುದು ಪ್ರಮುಖವಾಗಿದೆ. ಉದ್ಯೋಗ ಸೃಷ್ಟಿ, ಕಳಪೆ ಕಾಮಗಾರಿ ಹಾಗೂ ಮೂಲಸೌಕರ್ಯ ಸೇರಿದಂತೆ ಹಲವು ವಿಚಾರಗಳು ಬಿಹಾರದ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಜ್ಯದಲ್ಲಿ ಒಬಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಚುನಾವಣೆ ನಡೆಯಲಿರುವ ರಾಜ್ಯಗಳು: ಇದೇ ವರ್ಷಾಂತ್ಯಕ್ಕೆ ಬಿಹಾರ ವಿಧಾನಸಭೆಯ ಚುನಾವಣೆ ನಡೆಯಲಿದೆ. 2026ನೇ ಸಾಲಿನಲ್ಲಿ ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ (ಕೇಂದ್ರಾಡಳಿತ ಪ್ರದೇಶ) ಹಾಗೂ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಇನ್ನು ಕೇಂದ್ರಾಡಳಿತ ಹಾಗೂ ಇನ್ನುಳಿದ ರಾಜ್ಯಗಳ ಪೈಕಿ ಮೂರು ಪ್ರಮುಖ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ.
ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧೆ ನೀಡಿದೆಯಾದರೂ ಕೇರಳ ಮತ್ತು ತಮಿಳುನಾಡಿನಲ್ಲಿ ಅದರಲ್ಲೂ ಸಾಧ್ಯವಾಗಿಲ್ಲ. ಕೇರಳದಲ್ಲಿ ಬಿಜೆಪಿಯ ಒಬ್ಬೇ ಒಬ್ಬರು ಸಂಸದರು ಇದ್ದಾರೆ. ಈ ಚುನಾವಣೆಗಳನ್ನು ಬಿಜೆಪಿ ಪ್ರತಿಷ್ಠೆಯನ್ನಾಗಿ ಪರಿಗಣಿಸಿದೆ.
ಕಾಂಗ್ರೆಸ್ vs ಬಿಜೆಪಿ: ಇನ್ನು ಈ ರಾಜ್ಯಗಳಲ್ಲಿ ಕೆಲವು ಭಾಗದಲ್ಲಿ ಮಾತ್ರ ಬಿಜೆಪಿ vs ಕಾಂಗ್ರೆಸ್ ಪಕ್ಷಗಳ ನಡುವೆ ನೇರವಾದ ಸ್ಪರ್ಧೆ ಇದೆ. ಇನ್ನುಳಿದಂತೆ ಕಮ್ಯೂನಿಸ್ಟ್ ಪಾರ್ಟಿ, ದ್ರಾವಿಡ್ ಮುನ್ನೇತ್ರ ಕಳಗಂ, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ (ಪ್ರಜಾಪ್ರಭುತ್ವ) ಸೇರಿದಂತೆ ವಿವಿಧ ಸ್ಥಳೀಯ ಪಕ್ಷಗಳು ಬಲವಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಮಿತ್ರಪಕ್ಷಗಳ ಸೆಣಸಾಟ ತಮಿಳುನಾಡಿನಲ್ಲಿ ಜೋರಾಗಿದೆ. ಬಿಹಾರದಲ್ಲೂ ವಿವಿಧ ಮಿತ್ರ ಪಕ್ಷಗಳು ಒಂದಾಣಿಕೆ ಮಾಡಿಕೊಂಡಿವೆ. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಎಲ್ಲಾ ಪಕ್ಷಗಳು ಬಹುತೇಕ ನೇರಾ - ನೇರ ಚುನಾವಣೆಯನ್ನು ಎದುರಿಸುವ ಸಾಧ್ಯತೆ ಇದೆ.












Click it and Unblock the Notifications