ಉತ್ತರಾಖಂಡ ವಿಧಾನಸಭಾ ಚುನಾವಣೆ: ಬಿಜೆಪಿ 59 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಡೆಹ್ರಾಡೂನ್, ಜನವರಿ 21: ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಬಿಜೆಪಿ ಗುರುವಾರ ತನ್ನ 59 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 70 ಸ್ಥಾನಗಳ ಪೈಕಿ 59 ಸ್ಥಾನಗಳಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಿಜೆಪಿ ಹೆಚ್ಚಿನ ಹಾಲಿ ಶಾಸಕರನ್ನು ಉಳಿಸಿಕೊಂಡಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಗಮನಿಸಿದರೆ ಕೇಸರಿ ಪಕ್ಷ ಜಾತಿ ಸಮೀಕರಣದ ಸಮತೋಲನಗೊಳಿಸುವ ಪ್ರಯತ್ನವನ್ನು ಸೂಚಿಸುತ್ತದೆ. 59 ಅಭ್ಯರ್ಥಿಗಳ ಪೈಕಿ 22 ಮಂದಿ ಠಾಕೂರ್‌ಗಳು, 15 ಮಂದಿ ಬ್ರಾಹ್ಮಣರು, ಆರು ಮಂದಿ ಮೀಸಲು ವರ್ಗದವರು ಮತ್ತು ಮೂವರು ಬನಿಯಾ ಸಮುದಾಯದವರು ಎಂದು ಉತ್ತರಾಖಂಡದ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನುಳಿದ 11 ಸ್ಥಾನಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಜೋಶಿ ಹೇಳಿದ್ದಾರೆ.
ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಧರಿಸಿ ಬಿಜೆಪಿಯ ಸಾಮಾಜಿಕ ಎಂಜಿನಿಯರಿಂಗ್ ಸೂತ್ರವನ್ನು ವಿಶ್ಲೇಷಿಸಿದ ರಾಜಕೀಯ ವಿಶ್ಲೇಷಕ ಎಸ್‌ಎಂಎ ಕಾಜ್ಮಿ, "ಬ್ರಾಹ್ಮಣರು ಮತ್ತು ವ್ಯಾಪಾರಿಗಳು ಉತ್ತರಾಖಂಡದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರಾಗಿದ್ದಾರೆ. ಬ್ರಾಹ್ಮಣರಿಗೆ 15 ಮತ್ತು ಬನಿಯಾ ಅಭ್ಯರ್ಥಿಗಳಿಗೆ ಮೂರು ಟಿಕೆಟ್‌ಗಳನ್ನು ನೀಡುವ ಮೂಲಕ ಬಿಜೆಪಿ ತನ್ನ ಸಾಂಪ್ರದಾಯಿಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದೆ. "ಸಂಪ್ರದಾಯವಾದಿ ಅಂದಾಜಿನ ಪ್ರಕಾರ, ಠಾಕೂರರು ರಾಜ್ಯದ ಜನಸಂಖ್ಯೆಯ 35% ರಷ್ಟಿದ್ದಾರೆ ಮತ್ತು 25% ಬ್ರಾಹ್ಮಣ ಮತದಾರರಿದ್ದಾರೆ. ಆದ್ದರಿಂದ, ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಠಾಕೂರ್-ಬ್ರಾಹ್ಮಣ ಜಾತಿ ಸಮೀಕರಣವನ್ನು ಅನುಸರಿಸಲಿವೆ.
ನಿರೀಕ್ಷೆಯಂತೆ, ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಸ್ತುತ ಹೊಂದಿರುವ ಖತಿಮಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಜ್ಯ ಬಿಜೆಪಿ ಮುಖ್ಯಸ್ಥ ಮದನ್ ಕೌಶಿಕ್ ಅವರ ಭದ್ರಕೋಟೆಯಾದ ಹರಿದ್ವಾರದಿಂದ ಸ್ಪರ್ಧಿಸಲಿದ್ದಾರೆ. ಅದೇ ರೀತಿ ನರೇಂದ್ರ ನಗರ ಕ್ಷೇತ್ರದಿಂದ ಸಂಪುಟ ಸಚಿವ ಸುಬೋಧ್ ಉನಿಯಾಲ್ ಅವರನ್ನು ಕಣಕ್ಕಿಳಿಸಲಾಗಿದ್ದು, ಗಣೇಶ್ ಜೋಶಿ ಮತ್ತೆ ಮಸ್ಸೂರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಕೂಡ ಚೌಬಟ್ಟಖಾಲ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಮಾಜಿ ಕಾಂಗ್ರೆಸ್ ಬಂಡಾಯಗಾರ ಉಮೇಶ್ ಶರ್ಮಾ ಕೌ, ಹರಕ್ ಸಿಂಗ್ ರಾವತ್ ಅವರೊಂದಿಗೆ ಮತ್ತೆ ಕಾಂಗ್ರೆಸ್ ಸೇರಬಹುದು ಎಂದು ಊಹಿಸಲಾಗಿದೆ. ಅವರ ಸಾಂಪ್ರದಾಯಿಕ ಭದ್ರಕೋಟೆಯಾದ ರಾಯಪುರದಿಂದ ಕಣಕ್ಕಿಳಿಸಲಾಗಿದೆ. ಕೇಸರಿ ಪಕ್ಷವು ಮಾಜಿ ಸಿಎಂ ವಿಜಯ್ ಬಹುಗುಣ ಅವರ ಪುತ್ರ ಸೌರಭ್ ಬಹುಗುಣ ಅವರನ್ನು ಸಿತಾರ್‌ಗಂಜ್‌ನಿಂದ ಕಣಕ್ಕಿಳಿಸಿದೆ.


ಎಬಿಪಿ-ಸಿವೋಟರ್ ಸಮೀಕ್ಷೆಯು ಮತ್ತೆ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳಿದೆ. ಬಿಜೆಪಿಗೆ ಇಲ್ಲಿ ಮುಖ್ಯವಾಗಿ ಉದ್ಯೊಗವಕಾಶದ ಕೊರತೆ, ಆರೋಗ್ಯ ವ್ಯವಸ್ಥೆಯಲ್ಲಿನ ಕೊರತೆ, ಕೋವಿಡ್ ಎರಡನೇ ಅಲೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದು ಸವಾಲಾಗಿದೆ. ಬಿಜೆಪಿಯು ಇಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುದಾಳತ್ವದಲ್ಲಿ ಚುನಾವಣೆ ಎದುರಿಸಲು ಮುಂದಾಗಿದೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಬೂತ್ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂಸತ್ ಸದಸ್ಯ ಲಾಕೆಟ್ ಚಟರ್ಜಿ ಮತ್ತು ಪಕ್ಷದ ವಕ್ತಾರ ಆರ್ ಪಿ ಸಿಂಗ್ ಅವರು ಚುನಾವಣಾ ಉಸ್ತುವಾರಿ ಪ್ರಲ್ಹಾದ್ ಜೋಶಿ ಜೊತೆಗೆ ಇಲ್ಲಿನ ಚುನಾವಣಾ ಕಾರ್ಯತಂತ್ರವನ್ನು ನೋಡಿಕೊಳ್ಳುತ್ತಿದ್ದಾರೆ.













Click it and Unblock the Notifications