ವೈಭ್‌ವ್‌ನಿಂದ ಯಶಸ್ವಿ ಜೈಸ್ವಾಲ್‌ಗೆ ಕಂಟಕ, ರಾಜಸ್ಥಾನ್ ರಾಯಲ್ಸ್ ತೊರೆಯಲು ಇದು ಸೂಕ್ತ ಸಮಯ: ಅಂಬಟಿ ರಾಯುಡು
Ambati Rayudu: ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಶುಕ್ರವಾರ (ಮೇ 29) ನಡೆಯಲಿರುವ ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನವೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ಯಶಸ್ವಿ ಜೈಸ್ವಾಲ್ ಅವರಿಗೆ ಆರ್‌ಆರ್ ತೊರೆಯುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಕೊಟ್ಟ ಕಾರಣ ಈಗ ಹೊಸ ಸಂಚಲನ ಮೂಡಿಸಿದೆ.
ಇತ್ತೀಚೆಗಷ್ಟೇ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಕ್ವಾಲಿಫೈಯರ್-2ಕ್ಕೆ ಲಗ್ಗೆ ಇಟ್ಟಿದೆ. ಈ ಸೋಲಿನೊಂದಿಗೆ ಹೈದರಾಬಾದ್ ತಂಡವು ಕೂಟದಿಂದ ಹೊರಬಿದ್ದಿದೆ. ಇನ್ನೂ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನು ಎದುರಿಸಲಿದೆ.

ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆಯಲ್ಲಿರುವ ರಾಯುಡು, ಇದೀಗ ಯಶಸ್ವಿ ಜೈಸ್ವಾಲ್ ಅವರ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅದ್ಭುತ ಆಟದ ಮುಂದೆ ಜೈಸ್ವಾಲ್ ಮಂಕಾಗುತ್ತಿದ್ದಾರೆ. ಹೀಗಾಗಿ ಅವರು ರಾಜಸ್ಥಾನ್ ತಂಡವನ್ನು ತೊರೆಯುವುದು ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಜಗತ್ತನ್ನೇ ಬೆರಗಾಗಿಸಿದ ವೈಭವ್
ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 15 ವರ್ಷದ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ವೈಖರಿ ಇಡೀ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದೆ. ಈವರೆಗೆ 680 ರನ್‌ಗಳನ್ನು ಸಿಡಿಸಿರುವ ಇವರ ಸ್ಟ್ರೈಕ್ ರೇಟ್ ಬರೋಬ್ಬರಿ 334.48 ರಷ್ಟಿದೆ. ಇವರ ಆಟದ ವೈಖರಿ ದಿಗ್ಗಜ ವಿರಾಟ್ ಕೊಹ್ಲಿ ಅವರನ್ನೂ ಮೀರಿಸುವಂತಿದೆ.
ಅಂಬಟಿ ರಾಯುಡು ಹೇಳಿದ್ದೇನು?
ಜೈಸ್ವಾಲ್ 15 ಪಂದ್ಯಗಳಿಂದ 426 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರೂ, 15 ವರ್ಷದ ಬಾಲಕನ ಆಕ್ರಮಣಕಾರಿ ಆಟದ ಮುಂದೆ ಅದು ಮಂಕಾಗಿ ಕಾಣುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 2020ರಿಂದಲೂ ರಾಜಸ್ಥಾನದ ಪರ ಆಡುತ್ತಿರುವ ಜೈಸ್ವಾಲ್ ಈಗ ವೈಭವ್ ಸೂರ್ಯವಂಶಿ ಅವರ ಅಬ್ಬರದ ನೆರಳಿನಲ್ಲಿ ಸಿಲುಕಿದ್ದಾರೆ ಎಂದು ರಾಯುಡು ಹೇಳಿದ್ದಾರೆ. ಅಲ್ಲದೆ 'ವೈಭವ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಜೈಸ್ವಾಲ್ ಮಾನಸಿಕವಾಗಿ ವಿಚಲಿತರಾದಂತೆ ಕಾಣುತ್ತಿದ್ದಾರೆ,' ಎಂದು ಈ ಹಿಂದೆ ರವಿಚಂದ್ರನ್ ಅಶ್ವಿನ್ ಕೂಡ ಹೇಳಿದ್ದರು.
'ಯಶಸ್ವಿ ಜೈಸ್ವಾಲ್ ತಂಡ ಬದಲಿಸಿದರೆ ಒಳಿತು'
'ಯಶಸ್ವಿ ಜೈಸ್ವಾಲ್ ಅವರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬದಲಿಸಬೇಕು. ಸೂರ್ಯವಂಶಿ ಜೊತೆ ಬ್ಯಾಟಿಂಗ್ ಮಾಡುವಾಗ ಅವರು ಮಂಕಾಗುತ್ತಿದ್ದಾರೆ ಅನಿಸುತ್ತಿದೆ. ಜೈಸ್ವಾಲ್ ಒಬ್ಬ ಪಂದ್ಯ ಗೆಲ್ಲಿಸಿಕೊಡುವ ಸ್ಟಾರ್ ಆಟಗಾರ. ಅವರಿಗೆ ತಮ್ಮದೇ ಆದ ಪ್ರತ್ಯೇಕ ವೇದಿಕೆಯ ಅಗತ್ಯವಿದೆ. ಜೈಸ್ವಾಲ್ ಮೂಲತಃ ಮುಂಬೈ ಪರ ದೇಶೀಯ ಕ್ರಿಕೆಟ್ ಆಡುವುದರಿಂದ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳುವುದು ಸೂಕ್ತ,' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟವು ಜೈಸ್ವಾಲ್ ಅವರ ಮೇಲೆ ಒತ್ತಡ ಹೇರುತ್ತಿದೆ ಎಂಬುದು ರಾಯುಡು ವಾದ. ಈ ಹಿನ್ನೆಲೆಯಲ್ಲಿ ಜೈಸ್ವಾಲ್ ತಮ್ಮ ಸ್ವಂತ ಅಸ್ತಿತ್ವ ಕಂಡುಕೊಳ್ಳಲು ಮುಂಬೈ ಇಂಡಿಯನ್ಸ್ ತಂಡ ಸೇರಲಿ ಎಂಬ ಸಲಹೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
'ಯೂನಿವರ್ಸ್ ಬೇಬಿ ಬಾಸ್' ಬಿರುದು
15 ವರ್ಷದ ವೈಭವ್ ಸೂರ್ಯವಂಶಿ ಅವರು ಪ್ರಸ್ತುತ ಭಾರತೀಯ ಕ್ರಿಕೆಟ್ ಲೋಕದ ಉದಯೋನ್ಮುಖ ತಾರೆ. ಕೇವಲ 13-14ನೇ ವಯಸ್ಸಿನಲ್ಲೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಇವರು ಇತಿಹಾಸ ನಿರ್ಮಿಸಿದ್ದಾರೆ. ಬಿಹಾರ ಮೂಲದ ಈ ಎಡಗೈ ಬ್ಯಾಟರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದಾಗಿ ಜೂನಿಯರ್ ಯೂನಿವರ್ಸಲ್ ಬಾಸ್ ಎಂದು ಗುರುತಿಸಿಕೊಂಡಿದ್ದಾರೆ.
ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ವೈಭವ್ ಅತಿ ಕಿರಿಯ ವಯಸ್ಸಿನಲ್ಲೇ ಕೋಟಿ ಮೊತ್ತಕ್ಕೆ ಹರಾಜಾಗಿ ಸುದ್ದಿಯಾಗಿದ್ದರು. ಇತ್ತೀಚಿನ ಪಂದ್ಯಗಳಲ್ಲಿ 300ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುವ ಮೂಲಕ ದಿಗ್ಗಜ ಆಟಗಾರರ ಗಮನ ಸೆಳೆದಿದ್ದಾರೆ. ತಾಂತ್ರಿಕ ಕೌಶಲ ಮತ್ತು ನಿರ್ಭೀತ ಆಟ ಇವರ ವೈಶಿಷ್ಟ್ಯವಾಗಿದ್ದು, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗುವ ಎಲ್ಲಾ ಲಕ್ಷಣಗಳನ್ನು ಇವರು ಹೊಂದಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications