
ಭಯೋತ್ಪಾದಕ ಜವಾಹಿರಿ ವಿಡಿಯೋ: ಹಿಜಾಬ್ ವಿವಾದದ ಬಗ್ಗೆ ಅಸ್ಸಾಂ ಸಿಎಂ ಹೇಳಿದ್ದೇನು?
ನವದೆಹಲಿ ಏಪ್ರಿಲ್ 07: ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಹಿಜಾಬ್ ವಿವಾದದ ಸಮಯದಲ್ಲಿ, ಕರ್ನಾಟಕದ ನಿವಾಸಿ ಮುಸ್ಕಾನ್ ಖಾನ್ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟಿಸಿದರು. ನಂತರ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅನೇಕ ಮುಸ್ಲಿಂ ಮುಖಂಡರಿಂದ ಪ್ರಶಂಸೆ ವ್ಯಕ್ತವಾಯಿತು. ಇದೀಗ ಮುಸ್ಕಾನ್ ಖಾನ್ ಅವರ ಪ್ರತಿಭಟನೆಯ ವಿಡಿಯೋ ಕುರಿತು ಅಲ್ ಖೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಮುಸ್ಕಾನ್ ಖಾನ್ ಅವರನ್ನು ಹೊಗಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಲ್ ಖೈದಾಕ್ಕೆ ಭಾರತದ ವಾಸ್ತವತೆ ಅರ್ಥವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಸಮವಸ್ತ್ರದ ಮಹತ್ವವನ್ನು ಭಾರತೀಯ ಮುಸ್ಲಿಮರು ಅರ್ಥೈಸಿಕೊಳ್ಳುತ್ತಾರೆ. ಸರ್ಕಾರದ ಹಿಜಾಬ್ ನಿಷೇಧವನ್ನು ಬೆಂಬಲಿಸಿದ ಅಸ್ಸಾಂ ಸಿಎಂ, ಧಾರ್ಮಿಕ ಉಡುಪುಗಳನ್ನು ನಿಷೇಧಿಸದಿದ್ದರೆ, ಶಿಕ್ಷಣ ಸಂಸ್ಥೆಗಳು ಧಾರ್ಮಿಕ ನಡವಳಿಕೆಯ ಪ್ರದರ್ಶನಕ್ಕೆ ವೇದಿಕೆಯಾಗುತ್ತವೆ ಎಂದು ಹೇಳಿದ್ದಾರೆ.

'ಶಾಲೆಗಳು ಧಾರ್ಮಿಕ ನಡವಳಿಕೆಯ ಪ್ರದರ್ಶನಕ್ಕೆ ವೇದಿಕೆಯಾಗಬಾರದು'
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ, "ನೀವು ಹಿಜಾಬ್ ಧರಿಸಿದರೆ, ನಾನು ಬೇರೆ ಯಾವುದನ್ನಾದರೂ ಧರಿಸುತ್ತೇನೆ ಮತ್ತು ಅದು ಸಿದ್ಧಾಂತವಾಗುತ್ತದೆ. ಆದ್ದರಿಂದ ಶಾಲೆಗಳು ಮತ್ತು ಕಾಲೇಜುಗಳು ಧಾರ್ಮಿಕ ಉಡುಪು ಮತ್ತು ಧಾರ್ಮಿಕ ನಡವಳಿಕೆಯ ಪ್ರದರ್ಶನಕ್ಕೆ ವೇದಿಕೆಯಾಗುತ್ತವೆ. ಹಾಗಾದರೆ ಶಾಲೆಗಳು ಮತ್ತು ಕಾಲೇಜುಗಳು ಹೇಗೆ ಮುಂದುವರೆಸಲು ಸಾಧ್ಯ? ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೇ ಯೂನಿಫಾರ್ಮ್ ಎಂಬ ಪದ ಬರಲು ಇದೇ ಕಾರಣ. ಈ ಯೂನಿಫಾರ್ಮ್ ಧರಿಸುವುದರಿಂದ ಮಕ್ಕಳಲ್ಲಿ ಬಡವ ಶ್ರೀಮಂತ ಎಂಬ ಭೇದವಿರುವುದಿಲ್ಲ" ಎಂದಿದ್ದಾರೆ.

'ಭಾರತೀಯ ಮುಸ್ಲಿಮರು ಅರ್ಥಮಾಡಿಕೊಳ್ಳುತ್ತಾರೆ' ಹಿಮಂತ ಬಿಸ್ವಾ
ಹಿಮಂತ ಬಿಸ್ವಾ ಶರ್ಮಾ, "ಅಲ್ ಖೈದಾ ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ ಆದರೆ ನಾವು ಸಮವಸ್ತ್ರವನ್ನು ಧರಿಸಬೇಕು ಎಂದು ಭಾರತೀಯ ಮುಸ್ಲಿಮರು ಅರ್ಥಮಾಡಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ. ನಿಮ್ಮ ಶಾಲೆ ಮತ್ತು ಕಾಲೇಜು ಮುಗಿದ ನಂತರ, ನೀವು ನಿಮ್ಮ ಮನೆಗೆ ಹಿಂತಿರುಗಿ ಮತ್ತು ನಿಮಗೆ ಬೇಕಾದುದನ್ನು ಧರಿಸಿ. ಭಾರತೀಯ ಮುಸ್ಲಿಮರು ನ್ಯಾಯಾಂಗದೊಂದಿಗೆ ಇದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದರು.

ಅಲ್ ಖೈದಾ ಮುಖ್ಯಸ್ಥ ಅಲ್-ಜವಾಹಿರಿನ ವಿಡಿಯೋದಲ್ಲಿ ಏನಿದೆ?
ಅಲ್ ಖೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ 8.43 ನಿಮಿಷಗಳ ವೀಡಿಯೊ ಕ್ಲಿಪ್ ನಲ್ಲಿ ಮುಸ್ಕಾನ್ ಖಾನ್ ರನ್ನು ಹೊಗಳಿದ್ದಾರೆ. ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಅಯ್ಮಾನ್ ಅಲ್-ಜವಾಹಿರಿ, "ಭಾರತದ ಹಿಂದೂ ಪದ್ದತಿಯನ್ನು ಮತ್ತು ಪ್ರಜಾಪ್ರಭುತ್ವವನ್ನು ಮೋಸ ಎಂದು ಕರೆದಿದ್ದಾರೆ. ನಮ್ಮನ್ನು ಗೊಂದಲಗೊಳಿಸುವ ಭ್ರಮೆಗಳನ್ನು ನಾವು ಹೋಗಲಾಡಿಸಬೇಕು. ನಾವು ಮೋಸ ಹೋಗುವುದನ್ನು ನಿಲ್ಲಿಸಬೇಕು. ಭಾರತದಲ್ಲಿ ಹಿಂದೂ ಪ್ರಜಾಪ್ರಭುತ್ವದಿಂದ ಮುಸ್ಲಿಮರನ್ನು ದಮನ ಮಾಡುವದಕ್ಕಿಂತ ಹೆಚ್ಚೇನೂ ಆಗಿಲ್ಲ" ಎಂದಿದ್ದಾರೆ.

'ಅಲ್-ಜವಾಹಿರಿ ಯಾರೆಂದು ನನಗೆ ತಿಳಿಸಿದಿಲ್ಲ' ಮುಸ್ಕಾನ್ ತಂದೆ
ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ವೀಡಿಯೋ ಸಾಬೀತುಪಡಿಸಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಆದರೆ ಮುಸ್ಕಾನ್ ತಂದೆ ಅಲ್ ಖೈದಾ ಮುಖ್ಯಸ್ಥನ ಹೇಳಿಕೆಯಿಂದ ದೂರವಿದ್ದಾರೆ. ಅವರ ಕುಟುಂಬ ಭಾರತದಲ್ಲಿ ಶಾಂತಿಯುತವಾಗಿ ಬದುಕುತ್ತಿದೆ ಮತ್ತು ಜವಾಹಿರಿ ಅವರ ಹೇಳಿಕೆಗಳು ತಪ್ಪು ಎಂದು ಅವರು ಹೇಳಿದರು. "ನಮಗೆ ಅದರ ಬಗ್ಗೆ ಏನೂ ತಿಳಿದಿಲ್ಲ (ವಿಡಿಯೋ), ಅವನು ಯಾರೆಂದು ನಮಗೆ ತಿಳಿದಿಲ್ಲ. ನಾನು ಅವನನ್ನು ಇಂದು ಮೊದಲ ಬಾರಿಗೆ ನೋಡಿದೆ, ಅವನು ಅರೇಬಿಕ್ ಭಾಷೆಯಲ್ಲಿ ಏನೋ ಹೇಳಿದ್ದಾನೆ. ನಾವೆಲ್ಲರೂ ಇಲ್ಲಿ ಪ್ರೀತಿಯಿಂದ ವಾಸಿಸುತ್ತಿದ್ದೇವೆ ಮತ್ತು ಸಹೋದರರು ಮತ್ತು ಸಹೋದರಿಯರಂತೆ ಬದುಕುತ್ತಿದ್ದೇವೆ. ನಮ್ಮನ್ನು ಹಾಗೇ ಬದುಕಲು ಬಿಡಿ" ಎಂದಿದ್ದಾರೆ.