Asian Games 2023: ಭಾರತದ ಆಟಗಾರರಿಗೆ ವೀಸಾ ನಿರಾಕರಿಸಿದ ಚೀನಾ- ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರವಾಸ ರದ್ದು
ನವದೆಹಲಿ, ಸೆಪ್ಟೆಂಬರ್ 22: ಏಷ್ಯನ್ ಗೇಮ್ಸ್‌ನಲ್ಲಿ ಭಾಗಿಯಾಗಬೇಕಿದ್ದ ಭಾರತದ ಅಥ್ಲೀಟ್‌ಗಳಿಗೆ ಚೀನಾ ದೇಶವು ವೀಸಾ ಹಾಗೂ ಮಾನ್ಯತೆಯನ್ನು ನಿರಾಕರಿಸಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಚೀನಾ ದೇಶದ ಪ್ರವಾಸ ರದ್ದುಪಡಿಸಿದ್ದಾರೆ.
ಭಾರತದ ಕ್ರೀಡಾಪಟುಗಳಿಗೆ ಉದ್ದೇಶಪೂರ್ವಕ ಅಡಚಣೆಯನ್ನು ಚೀನಾ ಉಂಟು ಮಾಡುತ್ತಿದೆ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ 19ನೇ ಏಷ್ಯನ್ ಗೇಮ್ಸ್‌ಗೆ ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಪ್ರವೇಶವನ್ನು ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡಿದ್ದಾರೆ ಎಂದು ಭಾರತ ಸರ್ಕಾರ ತಿಳಿಸಿದೆ.
'ಭಾರತದ ಜನರನ್ನು ಚೀನಾ ವಿಭಿನ್ನವಾಗಿ ಪರಿಗಣಿಸುತ್ತಿದೆ. ಇದನ್ನು ನಾವು ದೃಢವಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಅಂಗ ಮತ್ತು ಬೇರ್ಪಡಿಸಲಾಗದ ಭಾಗವಾಗಿ ಉಳಿಯುತ್ತದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಭಾರತೀಯ ಅಥ್ಲೀಟ್‌ಗಳಿಗೆ ಚೀನಾದ ಉದ್ದೇಶಪೂರ್ವಕ ತಡೆಯನ್ನು ನಮ್ಮ ಸರ್ಕಾರವು ಸಹಿಸುವುದಿಲ್ಲ. ನಾವು ಬೀಜಿಂಗ್ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದ್ದೇವೆ ಎಂದು ಬಾಗ್ಚಿ ತಿಳಿಸಿದ್ದಾರೆ.

ಚೀನಾದ ಈ ಕ್ರಮಗಳಿಂದ ಏಷ್ಯನ್ ಗೇಮ್ಸ್ ಬಗೆಗಿನ ಉತ್ಸಾಹ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಭಾರತದ ಕ್ರೀಡಾ ಸಚಿವರು ಏಷ್ಯನ್ ಗೇಮ್ಸ್ ಸಮಾರಂಭದಲ್ಲಿ ಭಾಗವಹಿಸಲು ಚೀನಾಗೆ ತೆರಳಬೇಕಿತ್ತು. ಆದರೆ, ಚೀನಾ ಕ್ರಮದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಅವರು ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ಬಾಗ್ಚಿ ಹೇಳಿದ್ದಾರೆ.
ಮೂವರು ಆಟಗಾರರು ತಮ್ಮ ಪ್ರಯಾಣ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗಿಲ್ಲದಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.

'ಕ್ರೀಡಾಪಟುಗಳು ಸಂಘಟನಾ ಸಮಿತಿಯಿಂದ ಮಾನ್ಯತೆ ಕಾರ್ಡ್‌ಗಳನ್ನು ಪಡೆಯಬೇಕು. ಆ ನಂತರ, ಅವರು ಏಷ್ಯನ್ ಗೇಮ್ಸ್‌ಗೆ ಪ್ರಯಾಣಿಸಲು ಅನುಮತಿ ನೀಡಿದ್ದಾರೆ ಎಂದರ್ಥ. ಆದರೆ ಆಶ್ಚರ್ಯಕರವಾಗಿ, ಈ ಮೂವರು ಆಟಗಾರರು ಮಾತ್ರ ತಮ್ಮ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಚೀನಾ ಪ್ರಯಾಣ ಸಾಧ್ಯವಾಗಿಲ್ಲ' ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಕ್ಷಿಣ ಟಿಬೆಟ್ ಎಂದು ಕರೆಯಲ್ಪಡುವ ಅರುಣಾಚಲ ಪ್ರದೇಶವನ್ನು ಚೀನಾ ತನ್ನ ಭೂಪ್ರದೇಶವೆಂದು ವಾದ ಮಾಡುತ್ತ ಬಂದಿದೆ. ಅರುಣಾಚಲ ಪ್ರದೇಶವನ್ನು ಒಳಗೊಂಡಿರುವ ನಕ್ಷೆಯನ್ನು ಚೀನಾ ಕಳೆದು ತಿಂಗಳು ಬಿಡುಗಡೆ ಮಾಡಿತ್ತು. ಇದಕ್ಕೆ ಭಾರತವು ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು.
ಭಾರತ ಹಾಗೂ ಕೆನಡಾ ನಡುವೆ ಸಂಘರ್ಷ ಉಂಟಾಗಿರುವ ಸಂದರ್ಭದಲ್ಲೇ ಈ ಬೆಳವಣಿಗೆಗಳು ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications