ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಮುಂದಿನ 3 ಸವಾಲು
ಬೆಂಗಳೂರು, ಸೆ. 14 : ಲೋಕಸಭೆ ಚುನಾವಣೆ 2014 ಕಣ್ಣ ಮುಂದಿರುವಾಗ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ, ಹಿರಿಯ ನಾಯಕರುಗಳಾದ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್ ಮುಂತಾದವರ ವಿರೋಧ ಕಟ್ಟಿಕೊಂಡು, ಆಯ್ಕೆಯೇನೋ ಮಾಡಲಾಗಿದೆ. ಮೊದಲ ಆಂತರಿಕ ಯುದ್ಧವನ್ನು ಮೋದಿ ಗೆದ್ದಿದ್ದಾರೆ. ಆದರೆ, ಈ ನಡೆ ಮುಂದಿನ ಇನ್ನೂ ದೊಡ್ಡ ಸವಾಲುಗಳನ್ನು ಮೆಟ್ಟಿನಿಲ್ಲಲು ಸಹಾಯಕವಾಗುವುದೆ?
ವಿರೋಧಿಗಳು ಎಷ್ಟೇ ಕೆಣಕಲಿ, ಯಾರು ಎಷ್ಟೇ ವಿಚಲಿತರಾಗಲಿ, ಆಂತರಿಕವಾಗಿ ಯಾರು ಎಷ್ಟೇ ವಿರೋಧಿಸಲಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವುದನ್ನು ಬಿಟ್ಟು ಅತ್ಯುತ್ತಮ ಆಯ್ಕೆ ಬಿಜೆಪಿ ಮುಂದಿರಲಿಲ್ಲ. ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿಗೆ, ಈ ಬಾರಿ ಯುವಜನತೆಯ ಪ್ರತಿನಿಧಿಯಂತಿರುವ ಮೋದಿಯನ್ನು ಮುಂದಿಟ್ಟುಕೊಂಡು ಮೂರನೇ ಬಾರಿ ಚುನಾವಣಾ ಯುದ್ಧವನ್ನು ಬಿಜೆಪಿಗೆ ಗೆಲ್ಲಲೇಬೇಕಾಗಿದೆ.
ಮೋದಿ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಭಾರೀ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಭಾರೀ ನಿರೀಕ್ಷೆಗಳೊಂದಿಗೆ ಆಯ್ಕೆಯಾಗಿರುವ ನರೇಂದ್ರ ಮೋದಿ ಮುಂದೆ ಮೂರು ಚಾಲೇಂಜುಗಳು ಎದುರಾಗಿವೆ. ಅವರನ್ನು, ಎಲ್ಲ ಅಡೆತಡೆಗಳನ್ನು ಮೀರಿ ಹೇಗೆ ಮೆಟ್ಟಿ ನಿಲ್ಲುತ್ತಾರೆ ಮೋದಿ ಎಂಬುದು ನಿಜಕ್ಕೂ ಆಸಕ್ತಿ ಕೆರಳಿಸಿದೆ.

ಸವಾಲು 1 : ಆಂತರಿಕ ವಿರೋಧ ಅಷ್ಟು ಬೇಗ ಕರಗುವುದಿಲ್ಲ
ಅಡ್ವಾಣಿ ಬೇಸರ ವ್ಯಕ್ತಪಡಿಸಿ ಹೊರನಡೆದಿದ್ದಾರೆ ಮತ್ತು ಸುಷ್ಮಾ ಸ್ವರಾಜ್ ಅವರು ಅರೆಮನಸ್ಸಿನಿಂದ ಮೋದಿಗೆ ಹೂಗುಚ್ಛ ನೀಡಿದ್ದಾರೆ. ಮೋದಿ ಎದುರಿರುವ ನಿಜವಾದ ಸವಾಲೆಂದರೆ ಇಬ್ಬರನ್ನೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಚುನಾವಣಾ ಅಭಿಯಾನವನ್ನು ಮುಂದುವರಿಸುವುದು. ಪಕ್ಷಕ್ಕೇ ಗುಡ್ ಬೈ ಹೇಳಲು ಸಿದ್ಧರಾಗಿರುವ ಅಡ್ವಾಣಿ ಅವರಿಂದ ಹೆಚ್ಚಿನ ವಿರೋಧ ಇನ್ನುಮುಂದೆ ಎದುರಾಗದಿದ್ದರೂ, ಇನ್ನೂ ಬುಸುಬುಸು ಹೊಗೆಬಿಡುತ್ತಲೇ ಇರುವ ಇನ್ನೂ ಕೆಲ ಹಿರಿಯ ನಾಯಕರನ್ನು ಓಲೈಸುವುದು ಅಷ್ಟು ಸುಲಭದ ಕೆಲಸವಲ್ಲ.
ಒಂದು ವೇಳೆ ಮೋದಿ ಪ್ರಧಾನಿಯಾದರೂ, ಹೊರಗಡೆಯಿಂದ ನಗುತ್ತಿರುವ ಒಳಗಡೆಯಿಂದ ಬುಸುಗುಡುವ ಈ ನಾಯಕರು ಅಡ್ಡಗಾಲು ಹಾಕುವುದಿಲ್ಲ ಎಂದು ಏನು ಗ್ಯಾರಂಟಿ? ಬಿಜೆಪಿ ನೇತೃತ್ವದ ಸರಕಾರ ಬಂದರೆ ದೀರ್ಘಕಾಲೀನ ತಂತ್ರಗಾರಿಕೆಯನ್ನು ಮೋದಿ ಅನುಸರಿಸಬೇಕಾಗುತ್ತದೆ. ಮೋದಿ ಆಯ್ಕೆಯಾಗುವ ಹಂತದಲ್ಲಿ ಆಂತರಿಕವಾಗಿ ಇನ್ನೂ ಅಡೆತಡೆಗಳಿರುವುದು ಜಗಜ್ಜಾಹೀರಾಗಿದೆ. ಅಲ್ಲದೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷದೊಳಗೆ ಎಳೆದುಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲು.
ಸವಾಲು 2 : ಹಲ್ಲೆಗೊಳಗಾದ ಹುಲಿಯಂತಿರುವ ಕಾಂಗ್ರೆಸ್
ಮೋದಿ ಅವರ ಆಯ್ಕೆ ಬಿಜೆಪಿ ಪಕ್ಷದ ಆಂತರಿಕ ವಿಚಾರ ಎಂದು ಕಾಂಗ್ರೆಸ್ ನಾಯಕು ಕೈಜಾಡಿಸಿದ್ದರೂ, ಅವರ ವಿರುದ್ಧವಾಗಿ ಯಾವ ಸಮರ್ಥ ವ್ಯಕ್ತಿಯನ್ನು ನಿಲ್ಲಿಸಬೇಕು ಎಂಬುದು ಕಾಂಗ್ರೆಸ್ ಮುಂದಿರುವ ತಲೆನೋವು. ಎರಡು ಅವಧಿ ಮುಗಿಸುತ್ತಿರುವ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಮತ್ತೆ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಅನುಮಾನ. ಅವರ ವಯಸ್ಸು ಮತ್ತು ನಂಬಿಕಾರ್ಹತೆ ಅವರ ವಿರುದ್ಧವಾಗಿವೆ. ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಸ್ಪರ್ಧಿಯೇ ಅಲ್ಲ. ಉಳಿದಿರುವುದು ರಾಹುಲ್ ಗಾಂಧಿ ಮಾತ್ರ. ಅವರು ಮಾತ್ರ ಹಿಂದೇಟು ಹಾಕುತ್ತಿರುವುದು ಕಾಂಗ್ರೆಸ್ಸನ್ನು ದ್ವಂದ್ವದಲ್ಲಿ ತಳ್ಳಿದೆ.
ರಾಹುಲ್ ಹೆಸರನ್ನು ಪ್ರಧಾನಿಯೇ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಸಾಮಾನ್ಯ ಕಾರ್ಯಕರ್ತ ರಾಹುಲ್ ಅವರೇ ಮುಂದಾಳತ್ವ ವಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ರಾಹುಲ್ ಮಾಡುವ ಭಾಷಣಗಳಲ್ಲಿ ಮೋದಿ ಹೆಸರನ್ನು ಪ್ರಸ್ತಾಪಿಸಲೇ ಹಿಂಜರಿಯುತ್ತಿರುವಾಗ ಯಾರನ್ನು ಮುಂದಿಟ್ಟುಕೊಂಡು ಯುದ್ಧ ಮಾಡುವುದು ಎಂಬ ಸಂದಿಗ್ಧದಲ್ಲಿದೆ ಕಾಂಗ್ರೆಸ್. ನೇರ ಯುದ್ಧದ ಬದಲು, ಮೋದಿ ಮೇಲೆ ಅವರ ವಿರುದ್ಧದ ಹಗರಣಗಳನ್ನು ಮುಂದಿಟ್ಟುಕೊಂಡು ಆಕ್ರಮಣ ಮಾಡುವುದಕ್ಕೆ ಕಾಂಗ್ರೆಸ್ ಹಿಂಜರಿಯುವುದಿಲ್ಲ. ಈಗಾಗಲೆ ಅನೇಕ ನಾಯಕು ಮೋದಿ ವಿರುದ್ಧ ವಾಗ್ಯುದ್ಧವನ್ನು ಪ್ರಾರಂಭಿಸಿದ್ದಾರೆ.
ಸವಾಲು 3 : ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು
ಇದು ಮೊದಲಿನೆರಡು ಸವಾಲುಗಳಿಗಿಂತ ದೊಡ್ಡ ಚಾಲೇಂಜ್. ಜೆಡಿಯು ಈಗಾಗಲೆ ಮೈತ್ರಿಕೂಟದಿಂದ ಹಿಂಜರಿದಿದೆ. ಇನ್ನು ಕೆಲವು ಹಿಂದೆಮುಂದೆ ನೋಡುತ್ತಿವೆ. ಒಂದು ವೇಳೆ, ಚುನಾವಣೆಯಲ್ಲಿ 170-180 ಸೀಟುಗಳನ್ನು ಗೆಲ್ಲುವಲ್ಲಿ ಮೋದಿ ಸಫಲರಾದರೆ ಇತರ ಪಕ್ಷಗಳನ್ನು ಮೈತ್ರಿಕೂಟದಲ್ಲಿ ಎಳೆದುಕೊಳ್ಳಲು ಅಷ್ಟು ಕಷ್ಟವಾಗುವುದಿಲ್ಲ. ಭಾರತದ ರಾಜಕಾರಣದಲ್ಲಿ ಸಿದ್ಧಾಂತಕ್ಕಿಂತ ಅವಕಾಶವಾದಕ್ಕೆ ಹೆಚ್ಚಿನ ಬೆಲೆ. ಕಾಂಗ್ರೆಸ್ ವಿರೋಧಿ ಪಕ್ಷಗಳು ಅಂಥ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗಾದರೂ ಬಿಜೆಪಿ ಕೈಹಿಡಿಯಲು ಮುಂದೆ ಬಂದರೆ ಅಚ್ಚರಿಯಿಲ್ಲ.
ಮೋದಿಯನ್ನು ವಿರೋಧಿಸುತ್ತಿರುವವರು ಕೂಡ ಅವರ ಮುಂದಿನ ನಡೆಗಳನ್ನು ಮತ್ತು ರಾಜಕೀಯ ಭವಿಷ್ಯವನ್ನು ಮನಗಂಡು ತಮ್ಮ ಅಭಿಪ್ರಾಯ ಬದಲಿಸಬಹುದು. ಆದರೆ, ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾಡಿದಂಥ ಚಮತ್ಕಾರವನ್ನು ನರೇಂದ್ರ ಮೋದಿ ಈಗ ಮಾಡಬೇಕಾಗಿದೆ. ಕಾಂಗ್ರೆಸ್ ವಿರೋಧಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿಸುವುದು ನಿಜಕ್ಕೂ ಬಹುದೊಡ್ಡ ಸವಾಲು. ರಾಜಕೀಯ ಚದುರಂಗದಾಟ ಈಗ ಶುರುವಾಗಿದೆ. ಸಿಕ್ಕ ಅವಕಾಶವನ್ನು ಸುಲಭದಲ್ಲಿ ಬಿಟ್ಟುಕೊಡುವಂಥ ರಾಜಕಾರಣಿ ನರೇಂದ್ರ ಮೋದಿ ಅಲ್ಲವೇ ಅಲ್ಲ. ಅವರ ಮುಂದಿನ ನಡೆ, ನುಡಿಗಳನ್ನು ಶ್ರೀಸಾಮಾನ್ಯ, ರಾಜಕೀಯ ಪಕ್ಷಗಳು ಮತ್ತು ಇಡೀ ದೇಶ ಎದುರುನೋಡುತ್ತಿದೆ.












Click it and Unblock the Notifications