Arvind Kejriwal: ಏ.15 ರವರೆಗೆ ಕೇಜ್ರಿವಾಲ್ ನ್ಯಾಯಾಂಗ ಬಂಧನ: ರಾಮನ ಭಕ್ತಿಯಲ್ಲಿ ಮುಳುಗಿದ ಆಮ್ ಆದ್ಮಿ!
ದೆಹಲಿ ಏಪ್ರಿಲ್ 1: ಲಿಕ್ಕರ್ ಪಾಲಿಸಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಈಗ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕೇಜ್ರಿವಾಲ್ ಅವರನ್ನು ಸೋಮವಾರ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯವು ಏಪ್ರಿಲ್ 15ರವರೆಗೆ ಬಂಧನ ಅವಧಿಯನ್ನು ವಿಸ್ತರಿಸಿದೆ.

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಜೈಲು ಪಾಲಾಗಿದ್ದಾರೆ. ಮಾತ್ರವಲ್ಲದೆ ಹೊರ ಬರುವ ಅವರ ಪ್ರಯತ್ನಗಳು ವಿಫಲವಾಗುತ್ತಲೇ ಇವೆ. ಇದರಿಂದಾಗಿ ಲೋಕಸಭಾ ಚುನಾವಣೆಯ ಬಗ್ಗೆ ಆಮ್ ಆದ್ಮಿ ಪಕ್ಷದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇಂದು ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಲಾಯಿತು. ಬಿಗಿ ಭದ್ರತೆಯ ನಡುವೆ ಜಾರಿ ನಿರ್ದೇಶನಾಲಯ (ಇಡಿ) ಮುಖ್ಯಮಂತ್ರಿಯನ್ನು ನ್ಯಾಯಾಲಯಕ್ಕೆ ಕರೆತಂದಿತು. ಕೇಜ್ರಿವಾಲ್ ಅವರು ಕೋರ್ಟ್ ಆವರಣಕ್ಕೆ ಪ್ರವೇಶಿಸುವ ವೇಳೆ ಪ್ರಧಾನಿ ಮೋದಿ ಅವರನ್ನು ಟೀಕಿಸಿದರು.
ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಕೇಜ್ರಿವಾಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಪ್ರಧಾನಿ ಮಾಡುತ್ತಿರುವ ಕೆಲಸ ದೇಶಕ್ಕೆ ಒಳ್ಳೆಯದಲ್ಲ. ಮೋದಿ ಅವರು ಸರಿಯಾದ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇದೆಲ್ಲದರ ನಡುವೆ ದೆಹಲಿ ಸಿಎಂ ಕೇಜ್ರಿವಾಲ್ ಅವರು ಜೈಲಿನಿಂದಲೇ ಶ್ರೀರಾಮನ ಜಪಮಾಡುತ್ತಿದ್ದಾರೆ.
ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಶ್ರೀರಾಮ ಜಪ
ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ನಿರ್ದೇಶನ ನೀಡುವಂತೆ ಕೋರಿ ಇಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದ್ಯಕ್ಕೆ ಹೆಚ್ಚಿನ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಅದು ಹೇಳಿದೆ. ಈ ವಿಚಾರಣೆ ವೇಳೆ ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ವಾದ ಮಂಡಿಸಿದ
ಜೊತೆಗೆ ಕೇಜ್ರಿವಾಲ್ ಅವರು ತಮ್ಮ ವಕೀಲರ ಮೂಲಕ ತಿಹಾರ್ ನ್ಯಾಯಾಂಗ ಬಂಧನದಲ್ಲಿ ಕೆಲವು ಶಿಫಾರಸು ಮಾಡಿದ ಔಷಧಿಗಳನ್ನು ಸಾಗಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ಕೇಜ್ರಿವಾಲ್ ಅವರು ಭಗವದ್ಗೀತೆ, ರಾಮಾಯಣ ಮತ್ತು ನೀರ್ಜಾ ಚೌಧರಿ ಬರೆದ 'ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್ಸ್' ಎಂಬ ಪುಸ್ತಕ ಸೇರಿದಂತೆ ಹಲವಾರು ಪುಸ್ತಕಗಳನ್ನು ಒಯ್ಯಲು ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಿದರು.
ಬೆಂಬಲಿಗರ ಮುಂದೆ ಭಾವುಕರಾದ ಕೇಜ್ರಿವಾಲ್ ಪತ್ನಿ
ಮಾರ್ಚ್ 31 ರಂದು ಕೇಜ್ರಿವಾಲ್ ಅವರ ಪತ್ನಿ ಇಂಡಿಯಾ ಬ್ಲಾಕ್ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಪಕ್ಷದ ಬೆಂಬಲಿಗರು ಮತ್ತು ಜನರ ಮುಂದೆ ಭಾವನಾತ್ಮಕ ಸಂಭಾಷಣೆ ಮಾಡಿದರು. ಪತಿಯ ಸಂದೇಶವನ್ನು ಓದಿದ ಸುನೀತಾ, ನಿಮ್ಮ ಸ್ವಂತ ಕೇಜ್ರಿವಾಲ್ ನಿಮಗೆ ಕಸ್ಟಡಿಯಿಂದ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಿದರು.
ಈ ಸಂದೇಶವನ್ನು ಓದುವ ಮೊದಲು, ನಾನು ನಿಮ್ಮಲ್ಲಿ ಒಂದು ವಿಷಯವನ್ನು ಕೇಳಲು ಬಯಸುತ್ತೇನೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಗಂಡನನ್ನು ಕಸ್ಟಡಿಯಲ್ಲಿಟ್ಟಿದ್ದಾರೆ. ಅವರು ಮಾಡಿದ್ದು ಸರಿ ಎಂದು ನೀವೆಲ್ಲರೂ ಒಪ್ಪುತ್ತೀರಾ? ಕೇಜ್ರಿವಾಲ್ ನಿಜವಾದ ದೇಶಭಕ್ತ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ನೀವು ನಂಬುತ್ತೀರಾ? ಕೇಜ್ರಿವಾಲ್ ಬಂಧನದಲ್ಲಿರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕು ಎಂದು ನಿಮಗೆಲ್ಲ ಅನಿಸುತ್ತಾ? ಎಂದು ಭಾವನಾತ್ಮಕವಾಗಿ ಪ್ರಶ್ನೆ ಮಾಡಿದರು.
ಲೋಕಸಭಾ ಚುನಾವಣೆ ಕಥೆ ಏನು?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಕೇಜ್ರಿವಾಲ್ ಪತ್ನಿ ಹಾಗೂ ಆಪ್ ನಾಯಕರು ಆರೋಪಿಸಿದ್ದಾರೆ. ಲೋಕಸಭಾ ಚುನಾವಣೆಯ ವೇಳೆ ಕೇಜ್ರಿವಾಲ್ ಅವರನ್ನು ಬಂಧಿಸಿ ಗೆಲ್ಲುವ ಸಂಚು ರೂಪಿಸಲಾಗಿದೆ ಎಂದು ದೂರಲಾಗಿದೆ.
ಹೀಗಾಗಿ ಆಪ್ ಪಕ್ಷದ ಮುಂದಿನ ನಡೆ ಏನು ಎನ್ನುವ ಬಗ್ಗೆ ಕೇಜ್ರಿವಾಲ್ ಅವರು ಜೈಲಿನಿಂದಲೇ ತೀರ್ಮಾನಿಸುತ್ತಿದ್ದಾರೆ. ಇದು ಚುನಾವಣೆಯ ಮೇಲೆ ಹೊಡೆತ ಬೀಳಲಿದಿಯಾ ಅಥವಾ ಕೇಜ್ರಿವಾಲ್ ಅವರನ್ನು ಬಂಧನದಿಂದ ಹೊರ ಬಿಡಿಸಿಕೊಂಡು ಬರಲಾಗುತ್ತಾ ? ಮತದಾರರ ಮತ ಯಾರಿಗೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications