Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್ ಜಾರಿ ಮಾಡಿದ ಎಸಿಬಿ
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನಾ ದಿನ ಮಾಜಿ ಸಿಎಂ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ (ACB) ನೋಟಿಸ್ ಜಾರಿ ಮಾಡುವ ಮೂಲಕ ಶಾಕ್ ಕೊಟ್ಟಿದೆ. ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ಕೇಳಿದೆ.
ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ಟೀಕಿಸುವ ಸಂದರ್ಭದಲ್ಲಿ, ಬಿಜೆಪಿ ಎಎಪಿ ನಾಯಕರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. 16 ಶಾಸಕರಿಗೆ ತಲಾ 15 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯು 15 ಕೋಟಿ ರೂಪಾಯಿ ಲಂಚದ ಆಮಿಷ ಒಡ್ಡಲಾಗಿದೆ ಎನ್ನಲಾಗಿರುವ 16 ಎಎಪಿ ಶಾಸಕರ ಹೆಸರುಗಳನ್ನು ಸಲ್ಲಿಸುವಂತೆ ಎಸಿಬಿ ತನ್ನ ನೋಟಿಸ್‌ನಲ್ಲಿ ಕೇಳಿದೆ. ಎಎಪಿ ಶಾಸಕರನ್ನು ಸಂಪರ್ಕಿಸಿರುವ ವ್ಯಕ್ತಿಗಳ ಸಂಪರ್ಕ ಸಂಖ್ಯೆಗಳು ಮತ್ತು ಇತರ ವಿವರವನ್ನು ನೀಡಬೇಕು ಎಂದು ತಿಳಿಸಿದೆ.
ಎಸಿಬಿ ನೋಟಿಸ್‌ನಲ್ಲಿ ಏನಿದೆ?
ಲಂಚದ ಆಮಿಷವನ್ನು ಒಡ್ಡುವ ಫೋನ್ ಕರೆಗಳನ್ನು ಸ್ವೀಕರಿಸಿರುವ 16 ಎಎಪಿ ಶಾಸಕರ ವಿವರಗಳನ್ನು ನೀಡಿ. ಅವರನ್ನು ಸಂಪರ್ಕಿಸಿರುವ ಫೋನ್ ನಂಬರ್, ವ್ಯಕ್ತಿಗಳ ವಿವರವನ್ನು ಹಂಚಿಕೊಳ್ಳಿ, ನೀವು ಮತ್ತು ನಿಮ್ಮ ಪಕ್ಷದ ಸದಸ್ಯರು ವಿವಿಧ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿರುವ ಲಂಚದ ಆರೋಪಗಳನ್ನು ದೃಢೀಕರಿಸುವ ಸಾಕ್ಷಿಗಳನ್ನು ನೀಡಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಮಾಧ್ಯಮಗಳಲ್ಲಿ ಇಂತಹ ಮಾಹಿತಿಯನ್ನು ಹರಡುವ ವ್ಯಕ್ತಿಗಳ ಇರುದ್ಧ ಸೂಕ್ತ ಕಾನೂನು ಕ್ರಮ ಯಾಕೆ ತೆಗೆದುಕೊಳ್ಳಬಾರದು ಎನ್ನುವದನ್ನು ಸ್ಪಷ್ಟಪಡಿಸಿ. ಇದು ದೆಹಲಿಯ ಜನರಲ್ಲಿ ಭಯ ಮತ್ತು ಅಶಾಂತಿಯನ್ನು ಸೃಷ್ಟಿಸಬಹುದು ಎಂದು ಹೇಳಿದೆ.
ಕೇಜ್ರಿವಾಲ್ ನಿವಾಸದ ಹೊರಗಡೆ ಹೈಡ್ರಾಮ
ಎಸಿಬಿ ನೋಟಿಸ್ ನೀಡುವ ಮೊದಲು ಅರವಿಂದ್ ಕೇಜ್ರಿವಾಲ್ ಮಾಡಿರುವ ಆರೋಪಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತಂಡವನ್ನು ಪ್ರಶ್ನೆ ಮಾಡಲು ಪ್ರಯತ್ನಿಸುವ ವೇಳೆ ಕೇಜ್ರಿವಾಲ್ ಮನೆಯ ಮುಂದೆ ದೊಡ್ಡ ಹೈಡ್ರಾಮ ನಡೆದಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಬಿಜೆಪಿ ವಿರುದ್ಧ ಎಎಪಿಯ "ಆಪರೇಷನ್ ಕಮಲ" ಆರೋಪವನ್ನು ತನಿಖೆ ಮಾಡುವಂತೆ ಎಸಿಬಿಗೆ ನಿರ್ದೇಶನ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್ ಪರ ವಕೀಲರು ಎಸಿಬಿಗೆ ಕ್ರಮ ತೆಗೆದುಕೊಳ್ಳಲು ಯಾವುದೇ ಅಧಿಕಾರವಿಲ್ಲ ಎಂದು ಹೇಳಿದರು. ಅವರ ಬಳಿಕ ಯಾವ ದಾಖಲೆಗಳೂ ಇಲ್ಲ, ಬಿಜೆಪಿ ರಾಜಕೀಯಕ್ಕಾಗಿ ಇದನ್ನು ಮಾಡುತ್ತಿದೆ ಎಂದು ಹೇಳಿದರು.












Click it and Unblock the Notifications