ರಾಷ್ಟ್ರ ರಾಜಧಾನಿಯಲ್ಲಿ ಪ್ರಜಾಪ್ರಭುತ್ವ ಹತ್ತಿಕ್ಕಿದ ಸುಗ್ರೀವಾಜ್ಞೆ: ಕೇಜ್ರಿವಾಲ್!
ನವದೆಹಲಿ: ಕೇಂದ್ರದ ಮೋದಿ ಸರ್ಕಾರ ಮತ್ತು ದೆಹಲಿಯ ಕೇಜ್ರಿವಾಲ್ ಸರ್ಕಾರದ ಮಧ್ಯೆ ತಿಕ್ಕಾಟ ನಿರಂತರವಾಗಿದೆ. ರಾಷ್ಟ್ರ ರಾಜಧಾನಿಯ ಸೇವಾ ವಲಯದ ಮೇಲಿನ ನಿಯಂತ್ರಣದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದ ನಂತರ ಭೀಕರ ಕದನವೇ ಶುರುವಾಗಿದೆ. ಸುಗ್ರೀವಾಜ್ಞೆಯ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಹತ್ತಿಕ್ಕಿದೆ ಎಂದಿದ್ದಾರೆ ಸಿಎಂ ಕೇಜ್ರಿವಾಲ್.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಎಪಿ ಸರ್ಕಾರ ರಚನೆ ಮಾಡಿದ ಮರುದಿನವೇ ಬಿಜೆಪಿ & ಕೇಜ್ರಿವಾಲ್ ನಡುವೆ ಭೀಕರ ಸಂಘರ್ಷ ಶುರುವಾಗಿದೆ. ಅದ್ರಲ್ಲೂ ಲೋಕಸಭೆ ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಕೇಜ್ರಿವಾಲ್ ಸರ್ಕಾರದ ಮೇಲೆ ಕೇಂದ್ರ ಒತ್ತಡ ಹೇರುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಈ ಆರೋಪಕ್ಕೆ ತಕ್ಕಂತೆ ಕೇಜ್ರಿವಾಲ್ ಕೂಡ ವಾಗ್ದಾಳಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ದೆಹಲಿಯಲ್ಲಿ ಜಾರಿಗೆ ಬಂದಿರುವ ಇಂತಹ ಸುಗ್ರೀವಾಜ್ಞೆ, ಮುಂದೆ ರಾಜ್ಯಗಳಲ್ಲೂ ಜಾರಿಗೆ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ಕೇಜ್ರಿವಾಲ್. ಹಾಗಾದ್ರೆ ಕೇಜ್ರಿವಾಲ್ ಹೇಳಿದ್ದೇನು? ಮುಂದೆ ಓದಿ.

ಪ್ರಜಾಪ್ರಭುತ್ವಕ್ಕೆ ಅಪಾಯ ಎಂದ ಕೇಜ್ರಿ
ಕೇಂದ್ರದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ದೆಹಲಿಯ ಕೇಜ್ರಿವಾಲ್ ಸರ್ಕಾವರನ್ನು ನಿಯಂತ್ರಿಸಲು ಯತ್ನಿಸುತ್ತಿದೆ, ಒತ್ತಡ ಹಾಕುತ್ತಿದೆ ಅನ್ನೋ ಆರೋಪಗಳ ನಡುವೆ ದೆಹಲಿ ಮುಖ್ಯಮಂತ್ರಿ ಗಂಭೀರ ಆರೋಪ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷ ದೆಹಲಿ ರಾಮ್‌ಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ ರ‍್ಯಾಲಿ ಉದ್ದೇಶಿಸಿ ಮಾತನಾಡಿರುವ ಅರವಿಂದ್ ಕೇಜ್ರಿವಾಲ್, 'ಕೇಂದ್ರದ ಸುಗ್ರೀವಾಜ್ಞೆ ದೆಹಲಿಯ ಜನರಿಗೆ ಮಾಡಿದ ಅವಮಾನ. ಈ ಹಿನ್ನೆಲೆ ದೆಹಲಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲವಾಗಿದೆ' ಎಂದು ಆರೋಪಿಸಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಮೊದಲಿಗೆ ಜಾರಿಗೆ ಬಂದಿರುವ ಸುಗ್ರೀವಾಜ್ಞೆ ಇತರೆ ರಾಜ್ಯಗಳಿಗೆ ಸಂಬಂಧಿಸಿದಂತೆ ಬರಬಹುದು ಎಂದು ಎಚ್ಚರಿಸಿದ್ದಾರೆ ಕೇಜ್ರಿವಾಲ್.
ಯಾರೇ ಬಂದರೂ ಕೇಂದ್ರದ್ದೇ ಆಟ?
'ಬಿಜೆಪಿ ನನ್ನ ನಿಂದಿಸಬಹುದು, ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಆದ್ರೆ ದೆಹಲಿಯ ಜನರಿಗೆ ಅಪಮಾನ ಆಗುವುದನ್ನ ಸಹಿಸುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಿಎಂ ಕೇಜ್ರಿವಾಲ್. 'ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಈಗ ರಾಜಧಾನಿ ದೆಹಲಿಯಲ್ಲಿ ಸರ್ವಾಧಿಕಾರ ಆಡಳಿತವಿದೆ. ಲೆಫ್ಟಿನಂಟ್ ಗವರ್ನರ್ ಅವರದ್ದೇ ಪರಮಾಧಿಕಾರ. ಇಲ್ಲಿನ ಜನರು ಯಾರಿಗಾದರೂ ಮತ ನೀಡಲಿ, ಕೇಂದ್ರ ಸರ್ಕಾರವೇ ಇಲ್ಲಿ ಆಡಳಿತವನ್ನು ನಡೆಸಲಿದೆ' ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
'ಸುಪ್ರೀಂ ಆದೇಶವನ್ನೂ ಪ್ರಧಾನಿ ಒಪ್ಪಲ್ವಾ?'
ಹಾಗೇ ಪಿಎಂ ಮೋದಿ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ ಅರವಿಂದ್ ಕೇಜ್ರಿವಾಲ್, 'ಸುಪ್ರೀಂ ಕೋರ್ಟ್ ತೀರ್ಪನ್ನೇ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವುದಾದರೆ ಹಿಟ್ಲರ್‌ನ ಮನಸ್ಥಿತಿ. ಸುಗ್ರೀವಾಜ್ಞೆ ಮೂಲಕ ಅವರು ಇದೀಗ ನಾನು ಪ್ರಜಾಪ್ರಭುತ್ವವನ್ನ ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ' ಎಂದು ಆರೋಪಿಸಿದ್ದಾರೆ. ಹೀಗೆ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ತಿಕ್ಕಾಟ ಬಲು ಜೋರಾಗುತ್ತಿದೆ. ಹಾಗೇ ಲೋಕಸಭಾ ಚುನಾವಣೆಗೆ ಮೊದಲು ಈ ಘಟನೆಗಳು ಭಾರಿ ಪ್ರಭಾವ ಬೀರುವ ಲಕ್ಷಣವನ್ನ ಕೂಡ ತೋರುತ್ತಿವೆ.

ಹಾಗೇ ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಬಂಧನವನ್ನುಇದೇ ವೇಳೆ ಉಲ್ಲೇಖಿಸಿದ ಕೇಜ್ರಿವಾಲ್, 'ರಾಷ್ಟ ರಾಜಧಾನಿ ದೆಹಲಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುವುದೇ ಈ ಇಬ್ಬರು ನಾಯಕರ ಬಂಧನದ ಉದ್ದೇಶ. ಆದರೆ, ಪಕ್ಷದಲ್ಲಿ ಇಂತಹ ನೂರು ಮಂದಿ ಸಿಸೋಡಿಯಾ ಮತ್ತು ಜೈನ್‌ಗಳಿದ್ದಾರೆ. ಅವರೆಲ್ಲರೂ ಉತ್ತಮ ಕೆಲಸಗಳನ್ನು ಮುಂದುವರಿಸುತ್ತಾರೆ' ಎಂದು ಪ್ರಧಾನಿ ಮೋದಿ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ. ಹೀಗೆ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ತಿಕ್ಕಾಟ ಮುಂದಿನ ಹಂತಕ್ಕೆ ಹೋಗಿರುವುದು ಈ ಮೂಲಕ ಸ್ಪಷ್ಟವಾಗಿದೆ. ಇನ್ನು ಮಹತ್ವದ ಸಮಾವೇಶದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಕೂಡ ಭಾಗವಹಿಸಿದ್ದರು.












Click it and Unblock the Notifications