ಅರಾವಳಿ ಪರ್ವತ ಶ್ರೇಣಿ ಗಣಿಗಾರಿಕೆ ವಿವಾದ: ಸುಪ್ರೀಂ ಕೋರ್ಟ್‌ನಿಂದ ಸ್ವಯಂ ಪ್ರೇರಿತ ವಿಚಾರಣೆ
ನವದೆಹಲಿ: ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಅರಾವಳಿ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆ ವಿಚಾರವು ಇದೀಗ ಹೊಸ ಚರ್ಚೆ ಹಾಗೂ ಸ್ವರೂಪವನ್ನು ಪಡೆದುಕೊಂಡಿದೆ. ರಾಜಸ್ಥಾನದ ಥಾರ್ ಮರುಭೂಮಿಯ ಪೂರ್ವಕ್ಕೆ ಹರಡುವುದನ್ನು ತಡೆಯುವ ಹಸಿರು ತಡೆಗೋಡೆ ಎಂದೇ ಪರಿಗಣಿಸಲ್ಪಟ್ಟಿರುವ ಅರಾವಳಿ ಪರ್ವತ ಶ್ರೇಣಿಯಲ್ಲಿನ ಗಣಿಗಾರಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಅರಾವಳಿ ಪರ್ವತ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ / ಬೆಟ್ಟಗಳಲ್ಲಿ ಗಣಿಗಾರಿಕೆ ಮಾಡುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ ಎಂದು ಈಚೆಗೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವರದಿ (ಟಿಪ್ಪಣಿ) ಸಲ್ಲಿಸಿತ್ತು. ಅರಾವಳಿಯಲ್ಲಿ ಹೊಸ ಗಣಿಗಾರಿಕೆ ಮಾಡುವುದಕ್ಕೆ ಅವಕಾಶ ನೀಡುವ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ ಸಚಿವಾಲಯದ ಸಮಿತಿಯ ಶಿಫಾರಸುಗಳೊಂದಿಗೆ ಒಪ್ಪಿಕೊಂಡಿತ್ತು. ಆದರೆ ದೇಶದಾದ್ಯಂತ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ (ಸುಮೊಟೊ) ವಿಚಾರಣೆ ನಡೆಸುವುದಾಗಿ ಹೇಳಿದೆ.

ಅರಾವಳಿ ಪರ್ವತ ಶ್ರೇಣಿಗಳಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಇತ್ತೀಚಿನ ಮರುವ್ಯಾಖ್ಯಾನದ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಪರಿಸರ ಹಾನಿಯಿಂದಾಗಿ ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಶೇ 25% ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ಪರಿಸರವಾದಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಸುಪ್ರೀಂ ಕೋರ್ಟ್ ಶನಿವಾರ (ಡಿಸೆಂಬರ್ 27, 2025) ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಡಿಸೆಂಬರ್ 29 ಸೋಮವಾರ ವಿಚಾರಣೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ ವಿಶೇಷ ರಜಾಕಾಲದ ಪೀಠವು ಈ ವಿಷಯವನ್ನು ವಿಚಾರಣೆ ನಡೆಸಲಿದೆ. ನವೆಂಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿಯ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು.
ಅದರಲ್ಲಿ ಅರಾವಳಿ ಪರ್ವತಗಳ ವ್ಯಾಪ್ತಿಯಲ್ಲಿ 100 ಮೀ. ಗಿಂತ ಕಡಿಮೆ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಇರಲಿದೆ ಎಂದು ವ್ಯಾಖ್ಯಾನಿಸಲಾಗಿತ್ತು. ನ್ಯಾಯಾಲಯವು ಸುಸ್ಥಿರ ಗಣಿಗಾರಿಕೆಗಾಗಿ ಶಿಫಾರಸುಗಳನ್ನು ಮತ್ತು ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸಹ ಒಪ್ಪಿಕೊಂಡಿತ್ತು.
ಅರಾವಳಿ ಪ್ರದೇಶದೊಳಗೆ ಗಣಿಗಾರಿಕೆ ಮತ್ತು ಪರಿಸರ ಸೂಕ್ಷ್ಮ, ಸಂರಕ್ಷಣಾ-ನಿರ್ಣಾಯಕ ಮತ್ತು ಪುನಃಸ್ಥಾಪನೆಗೆ ಸಂಬಂಧಿಸಿದಂತೆ ಅನುಮತಿಸಲಾದ ಪ್ರದೇಶಗಳನ್ನು ಗುರುತಿಸಲು ಸಹ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಅಲ್ಲಿ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎನ್ನುವುದು ಸಹ ಇದರಲ್ಲಿ ಪ್ರಮುಖವಾಗಿದೆ.
ಸಮರ್ಥಿಸಿಕೊಂಡಿದ್ದ ಬಿಜೆಪಿ
ಇನ್ನು ಅರಾವಳಿ ಪರ್ವತ ಶ್ರೇಣಿ ವ್ಯಾಪ್ತಿಯಲ್ಲಿ ಹೊಸ ಗಣಿಗಾರಿಕೆ ಮಾಡುವುದನ್ನು ಕೇಂದ್ರ ಬಿಜೆಪಿ ಸರ್ಕಾರವು ಸಮರ್ಥಿಸಿಕೊಂಡಿತ್ತು. ಅರಾವಳಿ ಭಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಅದನ್ನು ತಪ್ಪಿಸುವುದಕ್ಕೆ ಹಾಗೂ ಸಕ್ರಮ ಗಣಿಗಾರಿಕೆ ಉದ್ದೇಶದಿಂದ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿತ್ತು.
ಅರಾವಳಿಗಳನ್ನು ಥಾರ್ ಮರುಭೂಮಿಯು ಪೂರ್ವಕ್ಕೆ ಹರಡುವುದನ್ನು ತಡೆಯುವ ಹಸಿರು ತಡೆಗೋಡೆ ಎಂದೇ ಅರಾವಳಿಯನ್ನು ಗುರುತಿಸಿದ್ದರೂ ಸಹ, ಅಪೆಕ್ಸ್ ಕೋರ್ಟ್ ಸಚಿವಾಲಯದ ಸಮಿತಿಯ ಶಿಫಾರಸುಗಳೊಂದಿಗೆ ಒಪ್ಪಿಕೊಂಡಿತ್ತು ಇದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣದ ವಿಚಾರಣೆಗೆ ಮುಂದಾಗಿದ್ದು, ಅರಾವಳಿ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆಯ ಭವಿಷ್ಯವು ಸೋಮವಾರ ತಿಳಿಯಲಿದೆ.












Click it and Unblock the Notifications